ಭ್ರಮಾಲೋಕದ ರಾಜಕಾರಣ ಯಾರದ್ದು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕೀಯದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಮೂರೂ ಪಕ್ಷಗಳು ಗೆಲುವು ನಮ್ಮದೇ ಎಂಬ ಭ್ರಮಾಲೋಕದಲ್ಲಿ ಆರ್ಭಟಿಸುತ್ತಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಭ್ರಮೆ ಯಾರದ್ದು‌ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಮೇ 18 ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬವಾಗಿದ್ದು, ಮೇ 15ರಂದು ಬರುವ ಚುನಾವಣಾ ಫಲಿತಾಂಶವನ್ನೇ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಬೇಕೆಂದು ಕುಮಾರಸ್ವಾಮಿ ಹಾಸನದಲ್ಲಿ ಭಾಷಣ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಭ್ರಮಾಲೋಕದಲ್ಲಿ ತೇಲುವುದಕ್ಕೆ ಅಭ್ಯಂತರವಿಲ್ಲ ಎಂದಿದ್ದಾರೆ. ಅದೇ ಸಿದ್ದರಾಮಯ್ಯ, ನಾನು ಮತ್ತೊಮ್ಮೆ ಸಿಎಂ ಆಗ್ತೀನಿ ಅಂತ ಹೋದಲ್ಲಿ ಬಂದಲ್ಲಿ ಭಾಷಣ ಮಾಡ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಕೂಡ ಭ್ರಮಾಲೋಕದಲ್ಲಿ ಇದ್ದಾರಾ ಅನ್ನೋ ಪ್ರಶ್ನೆಯೂ ಮೂಡುತ್ತೆ. ಯಾಕಂದ್ರೆ ಸಿದ್ದರಾಮಯ್ಯ, ರಾಜ್ಯದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಆ ವೇಳೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನೇ ಸಿಎಂ ಆಗ್ತೀನಿ ಎನ್ನುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇಲ್ಲಿವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿಲ್ಲ. ಆಗಿದ್ದರೂ ನಾನೇ ಮುಖ್ಯಮಂತ್ರಿ ಎಂದು ಭಾಷಣ ಬಿಗಿಯುತ್ತಿರೋದು ಭ್ರಮೆ ಅಲ್ಲವೆ? ಒಂದು ವೇಳೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡುವುದಾಗಿದ್ದರೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಬೇಕಿತ್ತಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಇರುವುದಿಲ್ಲ. ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾಗ್ತಾರೆ ಅನ್ನೋ ಮಾತುಗಳೂ ಪಕ್ಷದಲ್ಲಿ ಕೇಳಿ ಬರುತ್ತಿವೆ.

ಬಿಜೆಪಿ ಸ್ಥಿತಿಯೂ ಇದರಿಂದ ಹೊರತಲ್ಲ. ಇಬ್ಬರಿಗಿಂತ ಮೊದಲೇ ನಮ್ಮದು 150 ಮಿಷನ್ ಎಂದು ಪ್ರಚಾರ ಆರಂಭಿಸಿದ ಬಿ.ಎಸ್ ಯಡಿಯೂರಪ್ಪ, ಕೆಲವು ದಿನಗಳಿಂದ 150 ಮಿಷನ್ ಕೈಬಿಟ್ಟು, ಅಧಿಕಾರಕ್ಕೆ ನಾವೇ ಬರೋದು. ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗೆಲ್ತೇವೆ ಎನ್ನುತ್ತಿದ್ದಾರೆ. ಅಮಿತ್ ಶಾ ಕೂಡ ಎಲ್ಲೇ ಭಾಷಣ ಮಾಡಲಿ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಅಂತಾನೇ ಭಾಷಣ ಮಾಡ್ತಿದ್ದಾರೆ. ಇನ್ನು ಚುನಾವಣೆಯೇ ನಡೆದಿಲ್ಲ. ಆಗಲೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರೋದು ಭ್ರಮೆಯಲ್ಲದೇ ಮತ್ತೇನು. ಒಟ್ಟಾರೆ ಕುಮಾರಸ್ವಾಮಿ ಬಹುಮತ ಪಡೆದು ಅಧಿಕಾರ ಹಿಡಿಯುವ ಮೂಲಕ ದೇವೇಗೌಡರಿಗೆ ಉಡುಗೊರೆ ಕೊಡುವುದು, ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಹೇಳಿಕೆ,  ಬಿ.ಎಸ್ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡೋದು ಎಲ್ಲವೂ ಭ್ರಮಾಲೋಕದ ರಾಜಕಾರಣವಾಗಿದೆ. ಈ ಎಲ್ಲರೂ ಭ್ರಮಾಲೋಕದಿಂದ ವಾಸ್ತವಕ್ಕೆ ಬರಬೇಕೆಂದರೆ ಮೇ 15ರಂದು ಚುನಾವಣ ಫಲಿತಾಂಶ ಪ್ರಕಟವಾಗಬೇಕು.

Leave a Reply