ಚಾಂಪಿಯನ್ನರ ಬೆಂಡೆತ್ತಿದ ಬ್ರಾವೊ!

ಡಿಜಿಟಲ್ ಕನ್ನಡ ಟೀಮ್:

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಗೆ ಭರ್ಜರಿ ಆರಂಭ ಸಿಕ್ಕಿದೆ. ಹಾಲಿ ಚಾಂಪಿಯನ್ ಮುಂಬೈ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮೊದಲ ಪಂದ್ಯ ರೋಚಕ ಅಂತ್ಯ ಕಂಡು ಸೋಲಿನ ಸುಳಿಯಲ್ಲಿ ಸಿಲುಕಿದ್ದ ಸಿಎಸ್ ಕೆ ಮಿಂಚಿನ ವೇಗದಲ್ಲಿ ಜಯದ ದಡ ಮುಟ್ಟಿದ್ದು ಅಭಿಮಾನಿಗಳಿಗೆ ರೋಚಕತೆಯ ರಸದೌತಣ ಉಣ ಬಡಿಸಿತು. ಅದರೊಂದಿಗೆ ಅಭಿಮಾನಿಗಳಲ್ಲಿ ಟೂರ್ನಿ ಮೇಲಿನ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 165 ರನ್ ಗಳಿಗೆ ಕಟ್ಟಿ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ  ಸಿಎಸ್ ಕೆ  19.5 ಓವರ್ ಗಳಲ್ಲಿ 9 ವಿಕೆಟ್ ಗೆ 169 ರನ್ ಬಾರಿಸಿ ಗೆಲುವಿನ ಕೇಕೆ ಹಾಕಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಕಳೆದ ಆರು ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯವನ್ನು ಸೋತ ಸಂಪ್ರದಾಯ ಮುಂದುವರಿಸಿದೆ.

ಸೋಲಿನ ಹೊಸ್ತಿಲಲ್ಲಿ ನಿಂತಿದ್ದ ಸಿಎಸ್ ಕೆ ತಂಡವನ್ನು ಪಾರು ಮಾಡಿದ್ದು ಆಲ್ರೌಂಡರ್ ಡ್ವೈನ್ ಬ್ರಾವೊ, ಮೊದಲು ಬೌಲಿಂಗ್ ನಲ್ಲಿ ಮುಂಬೈ ಇಂಡಿಿಯನ್ಸ್ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದ ಬ್ರಾವೊ (4 ಓವರ್, 25 ರನ್), ನಂತರ ಬ್ಯಾಟಿಂಗ್ ನಲ್ಲಿ 30 ಎಸೆತಗಳಲ್ಲಿ 7 ಸಿಕ್ಸರ್, 3 ಬೌಂಡರಿ ಸೇರಿದಂತೆ 68 ರನ್ ಬಾರಿಸಿ ಪಂದ್ಯಕ್ಕೆ ಜೀವ ತುಂಬಿದರು.

ಅಂತಿಮ 18 ಎಸೆತಗಳಲ್ಲಿ 49 ರನ್ ಬೇಕಾದಾಗ ಅಬ್ಬರಿಸಿದ ಬ್ರಾವೊ, ವಾಂಖೆಡೆ ಕ್ರೀಡಾಂಗಣದಲ್ಲಿ ಬೌಂಡರಿ ಸಿಕ್ಸರ್ ಗಳ ಮಳೆ ಹರಿಸಿದರು. ಪರಿಣಾಮ ಸಿಎಸ್ ಕೆ 7 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಈ ಹಂತದಲ್ಲಿ ಬ್ರಾವೊ ಔಟಾದಾಗ ಸಿಎಸ್ ಕೆ ಅಭಿಮಾನಿಗಳ ಮುಖದಲ್ಲಿ ಆತಂಕ ಮೂಡಿತು. ಸ್ನಾಯು ಸೆಳೆತದಿಂದ ಓಡಲು ಸಾಧ್ಯವಾಗದ  ಸ್ಥಿತಿ ತಲುಪಿದ್ದ ಕೇದಾರ್ ಜಾಧವ್ ಅಂತಿಮ ವಿಕೆಟ್ ಗೆ ಕ್ರೀಸ್ ಗೆ ಬಂದರು. ಒಂದೇ ಕಾಲಿನ ಶಕ್ತಿಯಿಂದ ಬ್ಯಾಟಿಂಗ್ ಮಾಡಿದ ಜಾಧವ್, ಜಾಣ್ಮೆಯ ಸಿಕ್ಸ್ ಹಾಗೂ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿ ಬಿಟ್ಟರು.

ಈ ರೋಚಕ ಗೆಲುವಿನೊಂದಿಗೆ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್ ಗೆ ಮತ್ತೆ ಭರ್ಜರಿ ಎಂಟ್ರಿ ಕೊಟ್ಟಿದೆ.

Leave a Reply