ನಾಯಕರ ಹೆಡೆಮುರಿಗೆ ಶುರುವಾಗಿದೆ ಇರುಳ ಕಾಳಗ!

ರಾಜಕೀಯ ವಿಷವರ್ತುಲದ ನಡುವೆ ಹೆಪ್ಪುುಗಟ್ಟಿದ ರೋಷಾಗ್ನಿಪರ್ವತ ಸ್ಫೋಟಿಸುವ ಕಾಲವಿದು. ಎಲ್ಲಿ ನೋಡಿದರೂ ಹಗೆ ರಾಜಕಾರಣದ ಮೊಟ್ಟೆಯೊಡೆದು ಹೊರಬರುತ್ತಿರುವ ಮರಿಗಳು ವೈರಿಗಳ ಸಂಹಾರಕ್ಕೆ ಸಿಕ್ಕಸಿಕ್ಕವರ ಜತೆ ಕೈಜೋಡಿಸುತ್ತಿವೆ. ಇದಕ್ಕೆ ಆ ಪಕ್ಷ, ಈ ಪಕ್ಷ ಎಂಬ ಬೇಧ ಇಲ್ಲ. ನಾಯಕತ್ವ, ಪಕ್ಷನಿಷ್ಠೆ ಎಲ್ಲವನ್ನೂ ಪಕ್ಕಕ್ಕಿಟ್ಟು ಪಕ್ಷದ ಒಳ-ಹೊರಗೆ ತಮಗಾಗದವರ ಮೂಲೋತ್ಪಾಟನೆಗೆ ತತ್ವ-ಸಿದ್ಧಾಂತ ಮೀರಿದ ರಣತಂತ್ರಗಳು ಜೇಡರ ಬಲೆಯಂತೆ ಹೆಣೆದುಕೊಳ್ಳುತ್ತಿವೆ. ಸತ್ಯ-ಅಸತ್ಯಗಳ ನಡುವೆ ವ್ಯತ್ಯಾಸಗಳ ಗೆರೆ ಎಳೆಯದ ರಾಜಕಾರಣ ಬೆನ್ನಟ್ಟಿದಷ್ಟೂ ಮುಂದೂಡುತ್ತಿದೆ. ಇತಿಮಿತಿಗಳ ಕೈಗೆ ನಿಲುಕದೆ!
ಒಂದಿಲ್ಲೊಂದು ಕಾರಣಕ್ಕೆ ಅಂತರಂಗದಲ್ಲಿ ಬೇಗುದಿಯ ಮಡುವನ್ನೇ ಇಟ್ಟುಕೊಂಡಿದ್ದರೂ ಅಧಿಕಾರ ಚೌಕಟ್ಟಿನೊಳಗಿನ ಅಸಹಾಯಕತೆಯನ್ನು ಹಲ್ಲುಮುರಿ ಕಚ್ಚಿ ಒಪ್ಪಿಕೊಂಡು ಐದು ವರ್ಷ ದೂಡಿದ ನಾನಾ ಪಕ್ಷಗಳ ನಾಯಕರು ಇದೀಗ ಮನೆಬಾಗಿಲಲ್ಲೇ ಬಂದು ನಿಂತಿರುವ ಚುನಾವಣೆಯನ್ನು ತಮ್ಮೆಲ್ಲ ಆಕ್ರೋಶ ಕಾರಿಕೊಳ್ಳುವ ಕಾರಂಜಿಯನ್ನಾಗಿ ಮಾಡಿಕೊಂಡಿದ್ದಾರೆ. ಈಗ ಯಾರು, ಯಾರಿಗೆ ಮಿತ್ರ, ಯಾರು, ಯಾರಿಗೆ ಶತ್ರು ಎಂಬುದೇ ಗೊತ್ತಾಗುತ್ತಿಲ್ಲ. ಎಲ್ಲರ ಗುರಿಯೂ ಒಂದೇ. ತಮ್ಮ ಎದುರಾಳಿಯನ್ನು ರಾಜಕೀಯವಾಗಿ ಇರಿದು ಮಲಗಿಸಬೇಕು. ಅದಕ್ಕೆ ಮುಖಾಮುಖಿ ಹಗಲ ಯುದ್ಧವಾದರೂ ಸರಿಯೇ, ಮೋಸದ ಇರುಳ ಕಾಳಗವಾದರೂ ಸರಿಯೇ. ಒಟ್ಟಿನಲ್ಲಿ ‘ಮುಗಿಸಿಬಿಡಬೇಕು’ ಎಂಬುದೊಂದೇ ಮಂತ್ರ, ಸಂಕಲ್ಪ.
ಈ ಒಳ ರಣತಂತ್ರಕ್ಕೆ ಯಾವುದೋ ಒಂದು ಪಕ್ಷ ಅಥವಾ ಯಾರೋ ಒಬ್ಬ ನಾಯಕ ಸೀಮಿತವಾಗಿಲ್ಲ. ಎಲ್ಲ ಕಡೆಯೂ ಈ ಕಳ್ಳಾಟ ಭೋರ್ಗರೆಯುತ್ತಿದೆ. ‘ನಾನು ಗೆಲ್ಲಬೇಕು ಎನ್ನುವುದರ ಜತೆಜತೆಗೆ ಎದುರಾಳಿಯನ್ನು ಮೂಲದಲ್ಲೇ ತರಿದು ಹಾಕಬೇಕು’ ಎನ್ನುವ ಛಲಕ್ಕೆ ಬಿದ್ದಿರುವ ನಾಯಕರು ಜಾತಿ, ಧರ್ಮ, ವರ್ಗ, ಪ್ರದೇಶ – ಈ ಎಲ್ಲ ದಾಳಗಳನ್ನು ಪ್ರಯೋಗಿಸುತ್ತಿದ್ದಾರೆ. ಶತ್ರು ಚುನಾವಣೆಯಲ್ಲಿ ಗೆದ್ದರೆ ತಾನೇ ಮುಂದಿನ ಪೈಪೋಟಿ, ಸಮಸ್ಯೆ. ಆತನನ್ನು ಚುನಾವಣೆಯಲ್ಲೇ ಸೋಲಿಸಿಬಿಟ್ಟರೆ ತಮ್ಮ ಮುಂದಿನ ರಾಜಕೀಯ ದಾರಿ ಸುಗಮವಾಗುತ್ತದೆ ಎಂಬ ಲೆಕ್ಕಾಚಾರ ಹಾಕಿ, ಅದರ ಅನುಷ್ಠಾಾನಕ್ಕೆ ಸಕಲ ಕಲೆಗಳನ್ನೂ ಪ್ರದರ್ಶಿಸುತ್ತಿದ್ದಾರೆ. ಒಬ್ಬ ವೈರಿ ಸದೆಬಡಿಯಲು ಮತ್ತಿಬ್ಬರು ವೈರಿಗಳು ಕೈಕೈ ಮಿಲಾಯಿಸಿದ್ದಾರೆ. ಸಮಾನ ಶತ್ರುವಿನ ರಾಜಕೀಯ ವಧೆಗೆ ಮತ್ತಿಬ್ಬರ ನಡುವೆ ಹಠಾತ್ ಸ್ನೇಹಸುಧೆ. ಇದಕ್ಕೆ ಪಕ್ಷ, ಜಾತಿ ಯಾವುದೂ ಅಡ್ಡವಾಗಿಲ್ಲ. ಹಾಗೆಂದು ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಸಾಮಾನ್ಯ ರಾಜಕೀಯವನ್ನು ಹಿಂದಕ್ಕೆ ತಳ್ಳಿ ಕುತಂತ್ರ ರಾಜಕೀಯವೇ ಪಾರಮ್ಯ ಪಡೆದಿದೆ.
ಪ್ರತಿ ಚುನಾವಣೆ ಬಂದಾಗಲೂ ಈ ಬಾರಿಯಷ್ಟು ಕುತಂತ್ರ, ಮೋಸ, ಹೊಲಸು ರಾಜಕೀಯವನ್ನು ಹಿಂದೆಂದೂ ಕಂಡಿರಲಿಲ್ಲ ಎಂಬ ಮಾತು ಕೇಳಿಬರುವುದು ವಾಡಿಕೆ. ಇದರಲ್ಲೇನೂ ಹೊಸತಿಲ್ಲ, ಮಾಮೂಲಿ ಮಾತೆಂದು ಇದನ್ನು ಉಪೇಕ್ಷಿಸುವಂತಿಲ್ಲ. ಹಿಂದಿನ ಚುನಾವಣೆ ರಗಡನ್ನು ಹಿಂದಿಕ್ಕುವ ತಾಕತ್ತು ಬರುವಷ್ಟರ ಮಟ್ಟಿಗೆ ಗಲೀಜು ರಾಜಕೀಯ ಮತ್ತಷ್ಟು ಗರಿಗೆದರಿರುತ್ತದೆ ಎಂಬುದಷ್ಟೇ ಇದರ ನಿಜಾರ್ಥ. ಸುಧಾರಣೆ ಬದಲು ಅನಾಚಾರಗಳು ಮುಂದೂಡುವುದರಿಂದ ಈ ಆಪಾದನೆ ಪ್ರತಿಬಾರಿಯೂ ಮರು ನವೀಕರಣವಾಗುತ್ತಿರುತ್ತದೆ, ಮತ್ತಷ್ಟು ನವ್ಯ ಶೈಲಿ ಮತ್ತು ಸ್ವರೂಪಗಳೊಂದಿಗೆ. ಹೀಗಾಗಿ ಜನಸಾಮಾನ್ಯನಿಗೆ ಪ್ರತಿ ಚುನಾವಣೆಯೂ ಗಬ್ಬು ರಾಜಕೀಯ ಮತ್ತಷ್ಟು ಉಬ್ಬಿದಂತೆ ಭಾಸವಾಗುತ್ತದೆ. ಅದು ನಿಜವೂ ಹೌದು!
ಈ ಬಾರಿ ಒಳಕತ್ತರಿ ರಾಜಕೀಯ ಎಷ್ಟರ ಮಟ್ಟಿಗೆ ಗಟ್ಟಿಗೊಂಡಿದೆಯೆಂದರೆ ಕೆಲವು ನಾಯಕರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅನಿವಾರ್ಯ ಸ್ಥಿತಿಗೆ ಸಿಲುಕಿದ್ದಾಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ಕಡೆ ಕಣಕ್ಕೆ ಇಳಿಯುವ ಚಿಂತನೆಯಲ್ಲಿದ್ದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣ ಎರಡೂ ಕಡೆಯಿಂದಲೂ ಕಣಕ್ಕೆ ಇಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ತಮ್ಮನ್ನು ಸೋಲಿಸಲು ಎದುರಾಳಿಗಳೆಲ್ಲ ಒಂದಾಗಿ ನಿಂತಿರುವುದು ಸಿದ್ದರಾಮಯ್ಯನವರ ಈ ಚಿಂತನೆಗೆ ಕಾರಣವಾಗಿದ್ದರೆ, ಚನ್ನಪಟ್ಟಣದಲ್ಲಿ ಜೆಡಿಎಸ್ ಒಮ್ಮತದ ಅಭ್ಯರ್ಥಿ ಅನ್ವೇಷಿಸಲು ವಿಫಲರಾದ ಕುಮಾರಸ್ವಾಮಿ ಅವರು ಅದೇ ಕಾಲಕ್ಕೆ ಶತ್ರುವಿನ ಶತ್ರು ಸಿ.ಪಿ. ಯೋಗೇಶ್ವರ್ ಅವರನ್ನು ಸೋಲಿಸುವ ರಾಜಕೀಯ ಒಳಒಪ್ಪಂದಕ್ಕೆ ಕಟ್ಟುಬಿದ್ದು ಈ ನಿರ್ಣಯಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯನವರಿಗೆ ಇನ್ನೂ ಕ್ಷೇತ್ರ ಅಂತಿಮಗೊಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಮ್ಮೆ ಮೈಸೂರಿನ ಚಾಮುಂಡೇಶ್ವರಿ ಎನ್ನುತ್ತಾರೆ, ಮತ್ತೊಮ್ಮೆ ವರುಣಾ ಎನ್ನುತ್ತಾರೆ. ಇನ್ನೊಮ್ಮೆ ಬಾದಾಮಿ ಹೆಸರು ಕೇಳಿಬರುತ್ತದೆ. ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಹಾಗೂ ವರುಣಾ ಸುರಕ್ಷಿತವಾಗಿಲ್ಲ ಎಂಬ ಗುಪ್ತಚಾರ ಇಲಾಖೆ ವರದಿ ಹಿನ್ನೆಲೆಯಲ್ಲಿ ಅವರು ಪರ್ಯಾಯ ಕ್ಷೇತ್ರ ಹುಡುಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಇದನ್ನು ಅಲ್ಲಗಳೆದಿವೆ. ಟೀಕೆ-ಟಿಪ್ಪಣಿ, ಆರೋಪ-ಪ್ರತ್ಯಾರೋಪ, ಲೇವಡಿ-ವಿಡಂಬನೆ ಇವೆಲ್ಲ ರಾಜಕೀಯದಲ್ಲಿ ಇದ್ದದ್ದೇ. ಆದರೆ ಇವೆಲ್ಲವನ್ನೂ ಮೀರಿದ ‘ಆತ್ಮಸಂಘರ್ಷ, ಆತ್ಮಾನುಸಂಧಾನ’ ಎಂಬುದು ಇರುತ್ತದೆ. ಆ ಪ್ರಕಾರ ಸಿದ್ದರಾಮಯ್ಯನವರು ಇನ್ನೂ ಕ್ಷೇತ್ರ ಅಂತಿಮ ಮಾಡಿಕೊಳ್ಳಲು ಆಗದಿರುವುದಕ್ಕೆ ಸೋಲು-ಗೆಲುವಿನ ಬಗ್ಗೆ ಅವರೊಳಗೆ ಆಗುತ್ತಿರುವ ಆತ್ಮಸಂಘರ್ಷವೇ ಕಾರಣ ಎಂದು ಧಾರಾಳವಾಗಿ ಹೇಳಬಹುದು.
ಇದಕ್ಕೆ ಕಾರಣಗಳು ಇಲ್ಲದಿಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕೆಂದು ಅವರ ರಾಜಕೀಯ ಎದುರಾಳಿಗಳೆಲ್ಲ ಒಂದಾಗಿದ್ದಾರೆ. ಅವರು ಕಾಂಗ್ರೆಸ್ ಒಳಗಿನವರು ಇರಬಹುದು, ಹೊರಗಿನವರೂ ಇರಬಹುದು. ಆದರೆ ಸಿದ್ದರಾಮಯ್ಯ ಸೋಲಿಸುವ ಅಭಿಯಾನ ಚಾಲ್ತಿಯಲ್ಲಿದೆ. ಈ ಅಭಿಯಾನದ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಹಿಸಿಕೊಂಡಿದ್ದಾರೆ. ಮೊದಲು ಈ ವಿಚಾರದಲ್ಲಿ ಈ ಇಬ್ಬರೂ ನಾಯಕರು ಕೈ ಜೋಡಿಸಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ‘ಜೆಡಿಎಸ್ ಸಂಘ ಪರಿವಾರದ ಅಂಗವಾಗಿದೆ, ಬಿಜೆಪಿಯ ‘ಬಿ ಟೀಂ’ ಆಗಿದೆ’ ಎಂದು ಬಹಿರಂಗ ಟೀಕೆ ಮಾಡಿದ ನಂತರ ಒಂದಾಗಿರುವುದಂತೂ ಸತ್ಯ. ಇವರ ಹೋರಾಟ ಬರೀ ಸಿದ್ದರಾಮಯ್ಯನವರ ವಿರುದ್ಧಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಸಿದ್ದರಾಮಯ್ಯ, ಅವರ ಪುತ್ರ ಡಾ. ಯತೀಂದ್ರ ಇಬ್ಬರನ್ನೂ ಸೋಲಿಸಲು ಕೇಂದ್ರೀಕೃತವಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಇರುವ ಲಿಂಗಾಯತ ಮತ್ತು ಒಕ್ಕಲಿಗ ಮತಗಳನ್ನು ಸಿದ್ದರಾಮಯ್ಯ, ಮತ್ತವರ ಪುತ್ರನ ವಿರುದ್ಧ ಕ್ರೋಡೀಕರಿಸಲು ಬಹಿರಂಗವಾಗಿಯೇ ಚಟುವಟಿಕೆಗಳು ನಡೆದಿವೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡ ಹಾಗೂ ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಬೆಂಬಲಿಸಲು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವೆ ಒಳಒಪ್ಪಂದ ಏರ್ಪಟ್ಟಿದೆ. ಸಹಜವಾಗಿಯೇ ಚಾಮುಂಡೇಶ್ವರಿಯಲ್ಲಿ ಬಿಜೆಪಿ ಹಾಗೂ ವರುಣಾದಲ್ಲಿ ಜೆಡಿಎಸ್ ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕೆೆ ಇಳಿಸಲಿವೆ. ಲಿಂಗಾಯತ ಧರ್ಮ ವಿಭಜನೆ ದಾಳವನ್ನು ಯಡಿಯೂರಪ್ಪ ಉರುಳಿಸುತ್ತಿದ್ದರೆ, ಒಕ್ಕಲಿಗರ ಕಡೆಗಣನೆ ಅಸ್ತ್ರವನ್ನು ಕುಮಾರಸ್ವಾಮಿ ಪ್ರಯೋಗಿಸುತ್ತಿದ್ದಾರೆ.
ಇದರ ಜತೆಗೆ ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯ ಮತ್ತವರ ಪುತ್ರನ ವಿರುದ್ಧ ಪಿತೂರಿ ನಡೆದಿದೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ತುಮಕೂರಿನ ಕೊರಟಗೆರೆಯಲ್ಲಿ ಸೋತಿದ್ದರು. ಇದರ ಹಿಂದೆ ಸಿದ್ದರಾಮಯ್ಯನವರ ಕೈವಾಡವಿದೆ ಎಂಬ ಆಪಾದನೆ ಕೇಳಿ ಬಂದಿತ್ತು. ಅವರ ಕೈವಾಡವಿತ್ತೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಪರಮೇಶ್ವರ ಅದನ್ನು ನಂಬಿದ್ದಾರೆ. ಉಳಿದ ಪಕ್ಷಗಳ ಮುಖಂಡರೂ ಎತ್ತಿಕಟ್ಟುವ ರಾಜಕಾರಣದ ದಾಳವಾಗಿ ಇದನ್ನು ಉರುಳಿಸಿದ್ದಾರೆ. ಈಗ ಪರಮೇಶ್ವರ ಕೂಡ ಮುಯ್ಯಿ ತೀರಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಅವರು ಪ್ರತಿನಿಧಿಸುವ ಪರಿಶಿಷ್ಟರ ಮತಗಳು ಸಿದ್ದರಾಮಯ್ಯ ನೆರವಿಗೆ ನಿಂತಿಲ್ಲ ಎಂಬ ಮಾತುಗಳು ಚಾಲನೆ ಪಡೆದಿವೆ. ಜತೆಗೆ ದಲಿತ ಮುಖ್ಯಮಂತ್ರಿ ದಾಳವನ್ನೂ ಉರುಳಿಸಲಾಗುತ್ತಿದೆ. ಅದೇ ರೀತಿ ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಪರಮಾಪ್ತರಾಗಿದ್ದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ತಿರಸ್ಕಾರಕ್ಕೊಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ನಂಜನಗೂಡು ಮರುಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾಾರೆ. ಅವರಂತೂ ಸಿದ್ದರಾಮಯ್ಯನವರ ವಿರುದ್ಧ ಕಳ್ಳಿಹಾಲನ್ನೇ ಕಕ್ಕುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸುವವರೆಗೂ ವಿರಮಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅವರು ಸಹ ದಲಿತರ ಮತಗಳನ್ನು ಸಿದ್ದರಾಮಯ್ಯನವರ ವಿರುದ್ಧ ಒಟ್ಟುಗೂಡಿಸುತ್ತಿದ್ದಾರೆ. ಇದಿಷ್ಟು ಸಾಲದು ಎಂಬಂತೆ ಹಿಂದೆ ಸಿದ್ದರಾಮಯ್ಯ ಅವರು ಕಾಂಗ್ರೆಸಿಗೆ ಬಂದು ಮುಖ್ಯಮಂತ್ರಿ ಆಗುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಕುಲಬಾಂಧವರೂ ಆದ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಅವರು ಕೂಡ ಶ್ರೀನಿವಾಸ ಪ್ರಸಾದ್ ಅವರಂತೇ ಸಿದ್ದರಾಮಯ್ಯ ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಆರೋಪದ ವಾರಸುದಾರರು. ಅವರು ಸಹ ಅಪ್ಪ-ಮಗನ ಸೋಲಿಗೆ ಕಂಕಣ ತೊಟ್ಟು ನಿಂತಿದ್ದಾರೆ. ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆ ಚಿಂತನೆ ಮಾಡಲು ಈ ಎಲ್ಲವೂ ಕಾರಣವಾಗಿದೆ. ಆದರೆ ಡೋಂಟ್ ಕೇರ್ ಸ್ವಭಾವಕ್ಕೆ ಹೆಸರಾದ ಸಿದ್ದರಾಮಯ್ಯನವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲವನ್ನು ಕಾಪಿಟ್ಟಿದೆ.
ಇನ್ನೊಂದೆಡೆ ಕುಮಾರಸ್ವಾಮಿ ಅವರು ಎರಡು ಕಡೆ ಸ್ಪರ್ಧಿಸುತ್ತಿರುವ ವಿಚಾರ. ಇಲ್ಲಿ ಮೂರು ಸಂಗತಿಗಳಿವೆ. ಈ ಬಾರಿ ಕುಟುಂಬದ ಇಬ್ಬರಿಗೆ ಮಾತ್ರ ಟಿಕೆಟ್ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಒಂದು ರೇವಣ್ಣ ಮತ್ತೊಂದು ತಾವೇ. ಬೆಂಗಳೂರಿನ ರಾಜರಾಜೇಶ್ವರಿನಗರದಿಂದ ಕಣಕ್ಕೆ ಇಳಿಯಲೇಬೇಕೆಂದು ಶತಾಯ-ಗತಾಯ ಯತ್ನಿಸುತ್ತಿರುವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ವಿಧಾನಸಭೆ ಚುನಾವಣೆಯಿಂದ ದೂರವಿಡಲು ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆಯನ್ನೇ ತ್ಯಾಗ ಮಾಡಲಾಗಿದೆ. ಆದರೆ ಅಲ್ಲಿ ಪರ್ಯಾಯ ಸಮರ್ಥ ಅಭ್ಯರ್ಥಿ ಸಿಕ್ಕಿಲ್ಲ. ಹೀಗಾಗಿ ಕುಮಾರಸ್ವಾಮಿಯೇ ಕಣಕ್ಕೆ ಧುಮಕಿದ್ದಾರೆ. ಅದೇ ವೇಳೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಇಲ್ಲಿ ಹೇಗಾದರೂ ಮಾಡಿ ಯೋಗೇಶ್ವರ್ ಅವರನ್ನು ಮಟ್ಟ ಹಾಕಲೇಬೇಕೆಂದು ತೀರ್ಮಾನಿಸಿರುವ ಶಿವಕುಮಾರ್ ಮತ್ತು ಕುಮಾರಸ್ವಾಾಮಿ ನಡುವೆ ಒಳಒಪ್ಪಂದ ಏರ್ಪಟ್ಟಿದೆ. ಯೋಗೇಶ್ವರ್ ಸೋಲಿಸಲೆಂದೇ ಒಂದು ಕಾಲದ ಶತ್ರುಗಳಾಗಿದ್ದ ಶಿವಕುಮಾರ್ ಮತ್ತು ಕುಮಾರಸ್ವಾಾಮಿ ಒಂದಾಗಿದ್ದಾರೆ. ಈ ಒಪ್ಪಂದ ಕನಕಪುರದಲ್ಲಿ ಶಿವಕುಮಾರ್, ರಾಮನಗರದಲ್ಲಿ ಕುಮಾರಸ್ವಾಮಿ ನೆರವಿಗೂ ವಿಸ್ತರಿಸಲ್ಪಟ್ಟಿದೆ.
ಇನ್ನೊಂದೆಡೆ ಒಂದು ಕಾಲದಲ್ಲಿ ಗಣಿ ರೆಡ್ಡಿಗಳ ಬಳಗದ ಬಾಹುಬಂಧನದಲ್ಲಿದ್ದ ಬಳ್ಳಾಾರಿಯಲ್ಲಿ ಈಗ ವಿಛಿದ್ರ ರಾಜಕಾರಣದ ಪಾರಮ್ಯ. ಹಿಂದೆ ಒಟ್ಟಿಗೆ ಕೂತು ಒಂದೇ ತಟ್ಟೆಯಲ್ಲಿ ಉಂಡಿದ್ದ ರೆಡ್ಡಿ ಬಳಗ ಈಗ ಒಬ್ಬರ ಮುಖವನ್ನೊಬ್ಬರು ನೋಡದಷ್ಟು ಚಿಂದಿ ಚಿತ್ರಾನ್ನವಾಗಿದೆ. ಆನಂದ್ ಸಿಂಗ್ ಹಾಗೂ ನಾಗೇಂದ್ರ ಅವರು ರೆಡ್ಡಿ ಬಳಗವನ್ನಷ್ಟೇ ಅಲ್ಲ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ನಾಗೇಂದ್ರ ರಾಜಕೀಯ ಗುರು ಶ್ರೀರಾಮುಲು ವಿರುದ್ಧವೇ ಕಣಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಎರಡು ಕಡೆ ಸ್ಪರ್ಧೆ, ಹಿಂದೊಮ್ಮೆ ಬೆನ್ನಿಗೆ ನಿಂತಿದ್ದವರ ಬೆನ್ನಿಗೇ ಇರಿಯುವ ಜಾಯಮಾನವನ್ನು ತಮ್ಮ ಮೂಗಿನ ನೇರಕ್ಕೆ ಸರಿ ಎಂದು ವಾದಿಸುವ ಪರಿಪಾಠ ರಾಜಕೀಯದಲ್ಲಿ ಹೊಸದೇನಲ್ಲ. ಇಲ್ಲಿ ಎಲ್ಲಕ್ಕೂ ಸಮರ್ಥನೆ ಇರುತ್ತದೆ, ಅರ್ಥ ಕಲ್ಪಿಸಲಾಗುತ್ತದೆ. ಅನ್ಯ ಉದಾಹರಣೆಗಳು ಉರುಳುತ್ತವೆ. ಹಿಂದೆ ಅವರು ಎರಡು ಕಡೆ ನಿಂತಿರಲಿಲ್ಲವೇ? ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲಕ್ಕೆ ಗುಜಾರಾತ್‌ನ ವಡೋಧರ ಹಾಗೂ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಸ್ಪರ್ಧಿಸಿರಲಿಲ್ಲವೇ? ಪ್ರಧಾನಿ ಅಭ್ಯರ್ಥಿಯೇ ಈ ರೀತಿ ಎರಡು ಕಡೆ ನಿಂತಿರುವಾಗ ಇನ್ನು ತಮ್ಮದೇನು? ಅಷ್ಟಕ್ಕೂ ಮಿಗಿಲಾಗಿ ಜನ ಇದನ್ನು ಬಯಸುತ್ತಾರೆ. ಇದರಿಂದ ಪಕ್ಷಕ್ಕೆ ಲಾಭವಾಗುತ್ತದೆ. ತಾವು ಸ್ಪರ್ಧಿಸುವ ಎರಡೂ ಕಡೆಯ ಸುತ್ತಮುತ್ತಲಿನ ಮತ್ತಷ್ಟು ಸ್ಥಾನಗಳು ಪಕ್ಷಕ್ಕೆ ಜಮಾವಣೆ ಆಗುತ್ತವೆ. ತಮಗೆ ಅಷ್ಟು ಪ್ರಭಾವವಿದೆ, ಇದರಿಂದ ಪಕ್ಷಕ್ಕೆ ಲಾಭ ಎಂದೆಲ್ಲ ಸಮರ್ಥನೆ ಕೊಡುತ್ತಾರೆ. ಆ ಸಮರ್ಥನೆಯಲ್ಲಿ ಸೋಲಿನ ಬಗ್ಗೆ ತಮಗಿರುವ ಭಯ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ಮುಚ್ಚಿಕೊಂಡಷ್ಟು ತೆರೆದುಕೊಳ್ಳುತ್ತಾ ಹೋಗುವುದು ರಾಜಕಾರಣದ ಸತ್ಯ ಮತ್ತು ಮಿಥ್ಯ!
ಲಗೋರಿ : ಭಯ ಪಲಾಯನದ ಮೂಲಗುಣ.
(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply