ಮಂಡ್ಯದಲ್ಲಿ ಸ್ಪರ್ಧಿಸುತ್ತೀರೋ ಇಲ್ವೋ? ಎರಡು ದಿನದಲ್ಲಿ ನಿರ್ಧಾರ ತಿಳಿಸಿ: ಅಂಬಿಗೆ ವೇಣುಗೋಪಾಲ್ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್:

ನಟ ರೆಬಲ್ ಸ್ಟಾರ್ ಅಂಬರೀಶ್ ನಟನೆಯಲ್ಲಿ ಹೇಗೆ ರೆಬೆಲ್ ಆಗಿದ್ದಾರೊ ಅದೇ ರೀತಿ ರಾಜಕೀಯದಲ್ಲೂ ರೆಬೆಲ್ ಸಂಸ್ಕೃತಿಯನ್ನೇ ಪಾಲಿಸಿಕೊಂಡು ಬಂದಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೋ ಇಲ್ವೋ ಅನ್ನೋ ಬಗ್ಗೆ ಇನ್ನೂ ಗೊಂದಲದಲ್ಲೇ ಇದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾನು ಬೇಕು ಅನ್ನೋದಾದ್ರೆ ನನಗೆ ಅವರೇ ಟಿಕೆಟ್ ಘೋಷಣೆ ಮಾಡಬೇಕು ಅನ್ನೋ ಹಠಕ್ಕೆ ಬಿದ್ದಿರುವ ಅಂಬರೀಷ್, ಇಲ್ಲೀವರೆಗು ಟಿಕೆಟ್ ಕೇಳಿಲ್ಲ. ಸಿಎಂ ಬಳಿ ಮಾತನಾಡಿ ಸ್ಪರ್ಧೆ ಬಗ್ಗೆ ಅಂತಿಮ ಮಾಡ್ತೇನೆ ಅಂತ ಅಭಿಮಾನಿಗಳ ಎದುರು ಹೇಳಿದ್ದ ಅಂಬರೀಶ್, ಇದುವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿಲ್ಲ. ಹೀಗಾಗಿ ಟಿಕೆಟ್ ಬಗ್ಗೆಯೂ ಅನಿಶ್ಚಿತತೆ ಕಾಡುತ್ತಿದೆ. ಇದೀಗ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅಂಬರೀಶ್ ಗೆ ವಾರ್ನಿಂಗ್ ಮಾಡಿದ್ದಾರೆ.

ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಭಾನುವಾರದ ಒಳಗೆ ನಿಮ್ಮ ನಿರ್ಧಾರ ತಿಳಿಸಿ ಎಂದು ಕೊನೆಯದಾಗಿ ವಾರ್ನ್ ಮಾಡಿದ್ದಾರೆ. ಒಂದು ವೇಳೆ ನೀವು ಸ್ಪರ್ಧೆ ಮಾಡುವುದಿಲ ಎನ್ನುವುದಾದರೆ, ನೀವು ಸೂಚಿಸಿದವರಿಗೆ ಟಿಕೆಟ್ ನೀಡಲಾಗುವುದು ಎಂದಿದ್ದಾರೆ. ಜೊತೆಗೆ ಏಪ್ರಿಲ್ 9 ಅಥವಾ ಏಪ್ರಿಲ್ 10 ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿ ಟಿಕೆಟ್ ಫೈನಲ್ ಮಾಡಿ ಎಐಸಿಸಿ ಚುನಾವಣಾ ಸಮಿತಿ ಮುಂದೆ ಕಳಿಸಲಾಗುವುದು ಎಂದಿದ್ದಾರೆ. ಒಂದು ವೇಳೆ ನೀವು ಸ್ಪರ್ಧೆ ಮಾಡದೆ, ಟಿಕೆಟ್ ನೀಡಲು ಸೂಕ್ತ ಅಭ್ಯರ್ಥಿ ಸೂಚಿಸದೆ ಇದ್ದರೆ, ಬೇರೆಯವರಿಗೆ ಟಿಕೆಟ್ ನೀಡಬೇಕಾದ ಸಂದರ್ಭ ಬಂದಾಗ ಜಿಲ್ಲಾ ಮುಖಂಡರೊಂದಿಗೆ ಚರ್ಚೆ ಮಾಡಬೇಕಾಗುತ್ತದೆ ಎಂದಿದ್ದಾರೆ. ಮುಂದಿನ ಎರಡು ದಿನಗಳ ಕಾಲ ನಾನು ಬೆಂಗಳೂರಲ್ಲೇ ಇರುತ್ತೇನೆ, ನನ್ನನ್ನು ಭೇಟಿಯಾಗಿ ಅಭಿಪ್ರಾಯ ತಿಳಿಸುವಂತೆ ಅಂಬಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಇದುವರೆಗೂ ಮಂಡ್ಯ ರಾಜಕಾರಣದಲ್ಲಿ ತಾವು ನಡೆದಿದ್ದೇ ಹಾದಿ ಎಂದುಕೊಂಡಿದ್ದ ಅಂಬರೀಶ್ ಗೆ ಹೈಕಮಾಂಡ್ ಬ್ರೇಕ್ ಹಾಕಲು ಮುಂದಾಗಿದ್ದು, ರೆಬೆಲ್ ಸ್ಟಾರ್ ಗೆ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಅಂಬರೀಶ್ ನಾನೇ ಸ್ಪರ್ಧೆ ಮಾಡ್ತೇನೆ ಎಂದರೆ ಸ್ಪರ್ಧೆ ಮಾಡಬಹುದು, ಆದರೆ ಕೆಪಿಸಿಸಿ ಅಥವಾ ಮುಖ್ಯಮಂತ್ರಿ ಬಂದು ಟಿಕೆಟ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದ ಅಂಬಿಗೆ ಹಿನ್ನಡೆಯಾಗಲಿದೆ. ಇನ್ನೂ ಬೇರೊಬ್ನರನ್ನು ಅಭ್ಯರ್ಥಿಯಾಗಿ ಸೂಚಿಸಿದರೆ ಮಂಡ್ಯದಲ್ಲಿ ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ಅಂಬರೀಶ್ ಪಾಲಾಗಲಿದೆ. ಇವೆರಡನ್ನು ಅಂಬರೀಶ್ ಸೂಚಿಸದೇ ಇದ್ದಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೇರೊಬ್ಬರನ್ನು ಆಯ್ಕೆ ಮಾಡುತ್ತಾರೆ. ಆದ್ರೆ ಈಗಾಗಲೇ ತಿಳಿಸಿರುವಂತೆ ಮಂಡ್ಯ ಜಿಲ್ಲಾ ಮುಖಂಡರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕಾಗುತ್ತೆ ಎಂದಿದ್ದಾರೆ. ಈ ಸಮಯದಲ್ಲಿ ಅಂಬರೀಶ್ ಅವರ ಜೊತೆ ಚರ್ಚೆ ಮಾಡದೆ ಅಭ್ಯರ್ಥಿ ಆಯ್ಕೆ ಮಾಡಿದರೆ ಜಿಲ್ಲೆಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ರೆಬೆಲ್ ಸ್ಟಾರ್ ರಾಜಕಾರಣಿ ಅಂಬರೀಶ್.

Leave a Reply