ಕಾವೇರಿ ವಿಚಾರದಲ್ಲಿ ಬಯಲಾಯ್ತು ರಜನಿ-ಕಮಲ್ ಬಂಡವಾಳ!

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಸೃಷ್ಠಿಸುತ್ತೇವೆ, ಸ್ವಚ್ಛ ರಾಜಕಾರಣ ಮಾಡ್ತೇವೆ ಎಂದು ಪೋಸ್ ಕೊಡುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ಬಂಡವಾಳ ಕಾವೇರಿ ವಿಚಾರದಲ್ಲಿ ಬಯಲಾಗಿದೆ.

ಇಷ್ಟು ದಿನಗಳ ಕಾಲ ಎರಡು ರಾಜ್ಯಗಳಲ್ಲಿ ಕಾವೇರಿ ವಿಚಾರ ರಾಜಕೀಯ ಬ್ರಹ್ಮಾಸ್ತ್ರವಾಗಿಯೇ ಬಳಕೆಯಾಗುತ್ತಿದೆಯೇ ಹೊರತು ಪರಿಹಾರ, ಸೌಹಾರ್ದತೆಯ ಬಗ್ಗೆ ಯಾವ ನಾಯಕರೂ ಚಿಂತಿಸುತ್ತಿಲ್ಲ. ಜಯಲಲಿತಾ ಇದೇ ಕಾವೇರಿ ವಿಚಾರವನ್ನು ಇಟ್ಟುಕೊಂಡು ತಮಿಳುನಾಡು ರಾಜಕಾರಣದಲ್ಲಿ ಬಂಪರ್ ಬೆಳೆ ಬೆಳೆದಿದ್ದರು. ಈಗ ಆ ಬೆಳೆಯನ್ನು ತಾವು ಬೆಳೆಯಲು ರಜನಿ ಹಾಗೂ ಕಮಲ್ ತುದಿಗಾಲಲ್ಲಿ ನಿಂತಿದ್ದಾರೆ.

ಅತ್ತ ಜಯಲಲಿತಾ ವಿಧಿವಶರಾಗಿ ಇತ್ತ ಕರುಣಾನಿಧಿ ಮೆತ್ತಗಾದ ಮೇಲೆ ತಮಿಳುನಾಡಿನಲ್ಲಿ ಕಾವೇರಿ ವಿಚಾರ ರಾಜಕೀಯ ಅಸ್ತ್ರವಾಗುವ ಸಾಧ್ಯತೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ರಜನಿ ಹಾಗೂ ಕಮಲ್ ಅವರ ಇತ್ತೀಚಿನ ನಡೆ ನಿಜಕ್ಕೂ ಆತಂಕಕ್ಕೆ ಮೂಡಿಸಿದೆ. ಇತರೆ ರಾಜಕಾರಣಿಗಳಂತೆ ಕಾವೇರಿ ವಿಚಾರದಲ್ಲಿ  ರಾಜಕಾರಣ ಮಾಡುವುದನ್ನು ಮುಂದುವರಿಸಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ ಎಂದು ಈ ಇಬ್ಬರು ಖ್ಯಾತ  ನಟರು ಸಾಬೀತುಪಡಿಸಿದ್ದಾರೆ. ಅದರೊಂದಿಗೆ ನಾವು ಇತರರ ರಾಜಕಾರಣಿಗಳಂತೆ ಅವಕಾಶವಾದಿಗಳು, ಒಡೆದು ಆಳುವ ನೀತಿಯನ್ನೇ ಅನುಸರಿಸುವವರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ತಮಿಳು ನಟ ಸಿಂಬು ಅವರ ಜವಾಬ್ದಾರಿಯುತ  ಮಾತುಗಳು, ಕನ್ನಡದ ಹಿರಿಯ ನಟ ಅನಂತನಾಗ್ ಅವರ ಕಟುವಾದ ಮಾತುಗಳು ಜನರ ಕಣ್ಣಿನಲ್ಲಿ ಗಗನದೆತ್ತರದಲ್ಲಿದ್ದ ರಜನಿ ಹಾಗೂ ಕಮಲ್ ಅವರ ಬಂಡವಾಳ ಬಯಲು ಮಾಡಿ ಪಾತಾಳಕ್ಕೆ ಕುಸಿಯುವಂತೆ ಮಾಡಿರುವುದಂತೂ ಸತ್ಯ.

Leave a Reply