ಕಾಮನ್ವೆಲ್ತ್ ಕ್ರೀಡಾಕೂಟ: ಶೂಟಿಂಗ್ ನಲ್ಲಿ ಭಾರತಕ್ಕೆ ಮೂರು ಪದಕ, ಶ್ರೇಯಸಿಗೆ ಚಿನ್ನ- ಓಂ ಮತ್ತು ಅಂಕುರ್ ಗೆ ಕಂಚು

ಡಿಜಿಟಲ್ ಕನ್ನಡ  ಟೀಮ್:

ಭಾರತದ ಶೂಟರ್ ಗಳ ಪದಕಗಳ ಬೇಟೆ ಮುಂದುವರಿಸಿದ್ದು, ಇಂದು ಮಹಿಳೆಯರ ಡಬಲ್ ಟ್ರ್ಯಾಪ್ ಶೂಟಿಂಗ್ ನಲ್ಲಿ ಭಾರತದ ಶ್ರೇಯಸಿ ಸಿಂಗ್ ಚಿನ್ನಕ್ಕೆ ಗುರಿ ಇಟ್ಟು ಹೊಡೆದಿದ್ದಾರೆ. ಇನ್ನು ಪುರುಷರ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ಓಂ ಮಿತರ್ವಾಲ್ ಹಾಗೂ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಅಂಕುರ್ ಮಿತ್ತಲ್ ಕಂಚಿನ ಪದಕ ಸಂಪಾದಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಡಬಲ್ ಟ್ರ್ಯಾಪ್ ಶೂಟಿಂಗ್ ನ ಪ್ರಶಸ್ತಿ ಸುತ್ತಿನಲ್ಲಿ ಶ್ರೇಯಸಿ 24, 25, 22, 25 ಅಂಕಗಳನ್ನು ಪಡೆದು ಒಟ್ಟು 96 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದರು. ಭಾರತದ ಮತ್ತೋರ್ವ ಶೂಟರ್ ವರ್ಷಾ ವರ್ಮನ್ 86 ಅಂಕಗಳೊಂದಿಗ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾದರು. ಇದರೊಂದಿಗೆ ಕಳೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದ ಶ್ರೇಯಸಿ ಈ ಬಾರಿ ಚಿನ್ನಕ್ಕೆ ಬಡ್ತಿ ಪಡೆದಿದ್ದಾರೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ 24ಕ್ಕೆ ಏರಿಕೆಯಾಗಿದೆ.

ಇನ್ನು ಬಾಕ್ಸಿಂಗ್ ನಲ್ಲಿ ಭಾರತದ ವಿಕಾಸ್ ಕೃಷ್ಣನ್ ಹಾಗೂ ಗೌರವ್ ಸೋಲಂಕಿ (52 ಕೆ.ಜಿ) ತಮ್ಮ ಕ್ವಾರ್ಟರ್ ಫೈನಲ್ ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೆರಡು ಪದಕ ಖಚಿತ ಪಡಿಸಿದ್ದಾರೆ. ನಿನ್ನೆ ಪುರುಷರ ಬಾಕ್ಸಿಂಗ್ ನಲ್ಲಿ ಐದು ಪದಕ ಖಚಿತವಾಗಿದ್ದು, ಈಗ ಒಟ್ಟು ಏಳು ಪದಕಗಳು ಖಚಿತವಾಗಿವೆ. ಇಂದು ಮಹಿಳೆಯರ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್ ಪ್ರಶಸ್ತಿ ಸುತ್ತಿನಲ್ಲಿ ಕಾದಾಡಲಿದ್ದು, ಚಿನ್ನ ಗೆಲ್ಲುವ ನಿರೀಕ್ಷೆ ಇದೆ.

Leave a Reply