15ನೇ ವಯಸ್ಸಿಗೆ ಚಿನ್ನದ ಪದಕ ಗೆದ್ದ ಅನೀಶ್!

ಡಿಜಿಟಲ್ ಕನ್ನಡ ಟೀಮ್:

ಕಾಮನ್‌ವೆಲ್ತ್‌ ಕ್ರೀಡಾಕೂಟದ ಒಂಬತ್ತನೇ ದಿನವೂ ಭಾರತೀಯ ಅಥ್ಲೀಟ್ ಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಶೂಟರ್‌ ತೇಜಸ್ವಿನಿ ಸಾವಂತ್‌ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ 50 ಮೀ ರೈಫಲ್‌ ಶೂಟಿಂಗ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ತೇಜಸ್ವಿನಿ ಸಾವಂತ್‌ ಚಿನ್ನಕ್ಕೆ ಕೊರಳೊಡ್ಡಿದರೆ, ಇದೇ ವಿಭಾಗದಲ್ಲಿ ಮತ್ತೋರ್ವ ಭಾರತೀಯ ಶೂಟರ್ ಅಂಜುಮ್‌ ಮೌದ್ಗಿಲ್‌ ಬೆಳ್ಳಿ ಗೆದ್ದಿದ್ದಾರೆ. ಅದರೊಂದಿಗೆ ಈ ಸ್ಪರ್ಧೆಯ ಮೊದಲ ಎರಡೂ ಸ್ಥಾನಗಳು ಭಾರತದ ಪಾಲಾಗಿವೆ.

ಇನ್ನು ಪುರುಷರ 25ಮೀ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ 15 ವರ್ಷದ ಅನಿಶ್‌ ಭನ್ವಾಲಾ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ಪದಕ ಜಯಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಕೀರ್ತಿಗೆ ಅನಿಶ್‌ ಭಾಜನರಾಗಿದ್ದಾರೆ.

ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಶಿಸ್ತಿನಲ್ಲಿ ಸಿಂಗಪುರದ ಝಿನ್‌ ರೆಯ್‌ ರಿಯಾನ್‌ರನ್ನು 21-15, 21-12ರ ನೇರ ಸೆಟ್‌ಗಳಿಂದ ಮಣಿಸಿದ ವಿಶ್ವದ ನಂ.1 ಶೂಟರ್‌ ಕಿಡಂಬಿ ಶ್ರೀಕಾಂತ್‌ ಉಪಾಂತ್ಯ ಪ್ರವೇಶಿಸಿದ್ದಾರೆ.

ಪುರುಷರ 46-49 ಕೆಜಿ ಬಾಕ್ಸಿಂಗ್‌ ವಿಭಾಗದಲ್ಲಿ ಉಗಾಂಡಾದ ಜುಮಾ ಮೀರೊರನ್ನು ಮಣಿಸಿದ ಭಾರತದ ಅಮಿತ್‌ ಫೈನಲ್‌ ಪ್ರವೇಶಿಸಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ.

Leave a Reply