ಕೊನೆಗೂ ಮೌನ ಮುರಿದ ಮೋದಿ! ಜಮ್ಮು ಕಾಶ್ಮೀರದಲ್ಲಿ ಇಬ್ಬರು ಸಚಿವರ ರಾಜೀನಾಮೆ

ಡಿಜಿಟಲ್ ಕನ್ನಡ ಟೀಮ್:

ಕತುವಾ ಹಾಗೂ ಉನ್ನಾವೊ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೊನೆಗೂ ಮೌನ ಮುರಿದಿದ್ದಾರೆ. “ಯಾವುದೇ ನಾಗರಿಕ ದೇಶಕ್ಕೆ ಈ ಎರಡೂ ಘಟನೆಗಳು ನಾಚಿಕೆ ತರುವಂತೆ ಮಾಡುತ್ತವೆ. ಇವು ಮಾನವೀಯತೆಯನ್ನೇ ಅಲುಗಾಡಿಸುವಂತಿವೆ. ಒಂದು ದೇಶವಾಗಿ, ಒಂದು ಸಮಾಜವಾಗಿ ನಾವೆಲ್ಲರೂ ತಲೆ ತಗ್ಗಿಸುವಂತಾಗಿದೆ. ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಲಿದೆ. ಈ ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಲು ನಾವೆಲ್ಲ ಒಂದಾಗಬೇಕಿದೆ” ಎಂದು ಕರೆ ನೀಡಿದರು.

ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ”ಕಳೆದ ಎರಡು ದಿನಗಳಿಂದ ಚರ್ಚೆಯಾಗುತ್ತಿರುವ ಈ ಘಟನೆಗಳು ಒಂದು ದೇಶವಾಗಿ ಹಾಗೂ ಸಮಾಜವಾಗಿ ತಲೆ ತಗ್ಗಿಸುವಂತೆ ಮಾಡಿವೆ. ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ ಎಂದು ಭರವಸೆ ನೀಡಲು ಇಚ್ಛಿಸುತ್ತೇನೆ” ಎಂದಿದ್ದಾರೆ.

ಈ ಮಧ್ಯೆ ಜಮ್ಮು ಕಾಶ್ಮೀರದ ಸಮ್ಮಿಶ್ರ ಸರಕಾರದ ಭಾಗವಾಗಿದ್ದ ತನ್ನಿಬ್ಬರು ಸಚಿವರಾದ ಲಾಲ್ ಸಿಂಗ್‌ ಮತ್ತು ಚಂದರ್‌ ಪ್ರಕಾಶ್ ಗಂಗಾರ ಅವರ ರಾಜೀನಾಮೆ ಪಡೆದುಕೊಳ್ಳುವ ಮೂಲಕ ಬಿಜೆಪಿ ಪ್ರತಿಪಕ್ಷಗಳ ಟೀಕೆ ತಡೆಯಲು ಪ್ರಯತ್ನಿಸಿದೆ. ಕಥುಹಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾಗಿದ್ದವರ ಮೇಲೆ ಪ್ರಕರಣ ದಾಖಲಿಸದಂತೆ ಒತ್ತಡ ಹೇರಲು ನಡೆಸಿದ ಪ್ರತಿಭಟನೆಯಲ್ಲಿ ಅರಣ್ಯ ಸಚಿವರಾಗಿದ್ದ ಲಾಲ್‌ ಸಿಂಗ್ ಹಾಗು ಕೈಗಾರಿಕೆ ಹಾಗು ವಾಣಿಜ್ಯ ಇಲಾಖೆಗಳ ಜವಾಬ್ದಾರಿ ಹೊಂದಿದ್ದ ಗಂಗಾ ಅವರು ಭಾಗಿಯಾಗಿದ್ದರು.

ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದವರ ಮೇಲೆ ಪೊಲಿಸರು ಪ್ರಕರಣ ದಾಖಲಿಸಿಕೊಳ್ಳುವ ಸಂದರ್ಭ ನಡೆದ ಪ್ರತಿಭಟನೆಯಲ್ಲಿ ಸಚಿವರಾದ ಈ ಇಬ್ಬರು ಭಾಗಿಯಾಗಬಾರದಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

Leave a Reply