ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ, ಎಚ್ಡಿಕೆ ಸಿಎಂ ಆಗೋದು ಖಚಿತ ಅಂದ್ರು ದೇವೇಗೌಡ್ರು

ಡಿಜಿಟಲ್ ಕನ್ನಡ ಟೀಮ್:

‘ಕುಮಾರಸ್ವಾಮಿ ಜಾತಕ ಬರೆಸಿದ್ದೇನೆ. ಶುಕ್ರದೆಸೆ ಮುಗಿದು ರವಿದೆಸೆ ಬರಬೇಕಾದರೆ ಸಂಧಿಕಾಲದಲ್ಲಿ ಈ ಹುಡುಗ ಹೋಗುತ್ತಾನೆ ಎಂದು ಬರೆಯಲಾಗಿದೆ…’ ಇದು ಕುಮಾರಸ್ವಾಮಿ ಭವಿಷ್ಯದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿರುವ ಮಾತು.

ಖಾಸಗಿ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೇವೇಗೌಡರು, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ರಾಜಕೀಯ ಪ್ರವೇಶ, ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶದ ಬಗ್ಗೆಯೂ ಮಾತನಾಡಿದ್ದು, ಇವುಗಳ ಬಗ್ಗೆ ಹೇಳಿದಿಷ್ಟು…

‘ಅನಿತಾ ಮತ್ತು ಭವಾನಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಇಚ್ಛೆ ಇತ್ತು. ಇದರಲ್ಲಿ ಮುಚ್ಚುಮರೆಯಿಲ್ಲ. ನಂತರ ಭವಾನಿ ಅವರು ಪುತ್ರ ಪ್ರಜ್ವಲ್‌ನನ್ನು ವಿಧಾನ ಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಕೇಳಿದ್ದರು. ನಂತರ ನಾನು ಹಾಸನದ ಮುಖಂಡರನ್ನು ಕರೆದು ನೀವೇ ಯಾರಾದರೂ ಲೋಕಸಭೆಗೆ ಸ್ಪರ್ಧಿಸಿ, ವಯಸ್ಸಾಗಿರುವುದರಿಂದ ಲೋಕಸಭೆಗೆ ವ್ಹೀಲ್‌ಚೇರ್‌ನಲ್ಲಿ ಹೋಗಲು ಇಷ್ಟವಿಲ್ಲ ಎಂದು ಹೇಳಿದೆ. ಆದರೆ, ನಾನೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದಾಗ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ಗೆ ಅವಕಾಶ ನೀಡಬೇಕೆಂದು ನಿರ್ಧರಿಸಿದೆ.

ಬೇಲೂರಿನಲ್ಲಿ ಸ್ಪರ್ಧಿಸಬೇಕೆಂಬುದು ಪ್ರಜ್ವಲ್ ಇಚ್ಛೆಯಾಗಿತ್ತು. ಆದರೆ, ಸಾಮಾಜಿಕ ನ್ಯಾಯದಡಿ ಲಿಂಗಾಯತ ನಾಯಕನಿಗೆ ಟಿಕೆಟ್ ನೀಡಿದ್ದೇವೆ. ಹುಣಸೂರಿಗೆ ಹೋಗಿ ಬಾ ಎಂದು ಕುಮಾರಸ್ವಾಮಿಯೇ ಪ್ರಜ್ವಲ್‌ರನ್ನು ಕಳುಹಿಸಿಕೊಟ್ಟಿದ್ದರು. ಆಗ ಸಾ.ರಾ.ಮೇಶ್ ಮತ್ತಿತರರು ಕೆ.ಆರ್.ನಗರ ಅಥವಾ ಹುಣಸೂರಿನಲ್ಲಾದರೂ ಸ್ಪರ್ಧಿಸುವಂತೆ ಹೇಳಿದ್ದು ಪ್ರಜ್ವಲ್‌ಗೆ ಉತ್ಸಾಹ ಹೆಚ್ಚಿಸಿತ್ತು. ಪ್ರಜ್ವಲ್ ರಾಜಕೀಯ ಪ್ರವೇಶಕ್ಕೆ ಸಮಯ ಬಂದಿದೆ. ನನ್ನ ಮೊಮ್ಮಗನಲ್ಲಿ ನನ್ನದೇ ನಾಯಕತ್ವದ ಗುಣವಿದೆ. ಅದೇ ಕಾರಣಕ್ಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದೇನೆ

ಕುಮಾರಸ್ವಾಮಿ ಜಾತಕಕ್ಕೆ ಸ್ವಲ್ಪ ಹೆಚ್ಚು ಶಕ್ತಿ ಇದೆ. ಮುಂದೆ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ. ರೇವಣ್ಣ ರಾಜ್ಯ ರಾಜಕಾರಣದಲ್ಲಿರುತ್ತಾರೆ. 2018ರಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯವನ್ನು ಸರಿಪಡಿಸಲು ಎರಡು ವರ್ಷ ಬೇಕಾಗುತ್ತದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಸಲ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ.’

Leave a Reply