ಕಾಂಗ್ರೆಸ್- ಬಿಜೆಪಿಗೆ ಗಜಪ್ರಸವದ ಅನುಭವ ನೀಡುತ್ತಿದೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಪ್ರಕ್ರಿಯೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ನಾಯಕರ ಹಗ್ಗಜಜಗ್ಗಾಟದಿಂದ ಶನಿವಾರ ಕಾಂಗ್ರೆಸ್ ಅಬ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿಲ್ಲ. ನಿನ್ನೆ ನಡೆದ ಮಧುಸೂಧನ್ ಮಿಸ್ತ್ರಿ ನೇತೃತ್ವದ ಸಭೆ ಜಟಾಪಟಿಯಲ್ಲಿ ಅಂತ್ಯಗೊಂಡಿದ್ದು, ಇಂದು ದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ 224 ಕ್ಷೇತ್ರಗಳಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ರಾಹುಲ್ ಗಾಂಧಿ ನಿವಾಸದಲ್ಲಿ ನಿನ್ನೆ ನಡೆದ ಸಭೆಯಲ್ಲಿ ರಾಜ್ಯ ನಾಯಕರ ನಡುವಿನ ಅಸಮಾಧಾನ ಮಂದುವರಿದ ಪರಿಣಾಮ ಭಾನುವಾರ ಸೋನಿಯಾ ಗಾಂಧಿ ಅವರ ಒಪ್ಪಿಗೆ ಪಡೆದು ಪಟ್ಟಿ ಅಂತಿಮಗೊಳಿಸಲು ರಾಹುಲ್ ನಿರ್ಧರಿಸಿದ್ದಾರೆ. ರಾಜ್ಯದ ಕೆಲ ನಾಯಕರ ನಡುವೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಗಬೇಕು ಎಂಬ ವಿಚಾರದಲ್ಲಿ ಪಟ್ಟು ಹಿಡಿದ ಪರಿಣಾಮ ಒಂದೇ ಹಂತದಲ್ಲಿ ಎಲ್ಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಅಭ್ಯರ್ಥಿ ಪಟ್ಟಿ ಬಿಡುಗಡೆ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ನಲ್ಲಿ ರಾಜ್ಯ ನಾಯಕರ ನಡುವಣ ಅಸಮಾಧಾನ ಹೆಚ್ಚಾಗುತ್ತಿದೆ.

ಶುಕ್ರವಾರದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವರ್ಸಸ್ ಮಲ್ಲಿಕಾರ್ಜುನ ಖರ್ಗೆ ಹೈದರಾಬಾದ್ ಕರ್ನಾಟಕ ಭಾಗದ ಕ್ಷೇತ್ರಗಳ ಟಿಕೆಟ್ ವಿಚಾರವಾಗಿ ವಾಗ್ವಾದ ನಡೆದಿತ್ತು. ಖರ್ಗೆ ಅವರ ಪರವಾಗಿ ಪರಮೇಶ್ವರ ಹಾಗೂ ಸಂಸದ ವೀರಪ್ಪಮೊಯ್ಲಿ ನಿಂತಿದ್ದು, ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಮತ್ತು ವಲಸಿಗ ಕಾಂಗ್ರೆಸಿಗರ ಗುದ್ದಾಟ ನಡೆಯುತ್ತಿದೆ.

ಇನ್ನು ಶನಿವಾರವೂ ಅದೇ ಕಥೆ ಮುಂದುವರಿಯಿತು. ಮಧ್ಯಾಹ್ನ 3.30ಕ್ಕೆ ಆರಂಭವಾದ ಸಭೆ ರಾತ್ರಿ ಎಂಟು ಗಂಟೆವರೆಗೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ನಾಯಕರನ್ನು ಮನವೊಲಿಸುವ ಪ್ರಯತ್ನವನ್ನು ರಾಹುಲ್ ಗಾಂಧಿ ನಡೆಸಿದರು. ಆದರೆ, ನಾಯಕರು ತಮ್ಮ ಪಟ್ಟು ಸಡಲಿಸಲಿಲ್ಲ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.

ಅಭ್ಯರ್ಥಿ ಪಟ್ಟಿ ಬಿಡುಗಡೆ ವಿಚಾರದದಲ್ಲಿ ಬಿಜೆಪಿ ಕಥೆ ಕಾಂಗ್ರೆಸ್ ಗಿಂತ ಭಿನ್ನವಾಗೇನು ಇಲ್ಲ. ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿ ಭಿನ್ನಮತದ ಬೆಂಕಿಯನ್ನು ಆರಿಸುವ ಪ್ರಯತ್ನ ನಡೆ.ತ್ತಿರುವಾಗಲೇ ಬಿಜೆಪಿ ಭಾನುವಾರ ತನ್ನ ಎರಡನೇ ಮತ್ತು ಅಂತಿಮ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಈ ಕುರಿತು ಮಾತನಾಡಿರುವ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳೋದಿಷ್ಟು… ‘ತಾವು ಸೇರಿದಂತೆ ಕೆಲ ಮುಖಂಡರು ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದೇವೆ. ಬೇರೆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬುದಷ್ಟೇ ನಮ್ಮ ಗುರಿ. ಅದಕ್ಕಾಗಿ ಎಲ್ಲರೂ ತಮ್ಮ ಹಿತಾಸಕ್ತಿ ಮರೆತು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ನಮ್ಮ ಮನೆಗೆ ಆಕಾಂಕ್ಷಿಗಳು ಬಂದೇ ಬರುತ್ತಾರೆ. ಬಂದವರಿಗೆ ನಾವು ಟಿಕೆಟ್ ಖಾತ್ರಿ ನೀಡಲು ಸಾಧ್ಯವಿಲ್ಲ. ವರಿಷ್ಠರು ಅವರದೇ ಆದ ಸಮೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು.ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ದ. ಸಮೀಕ್ಷೆಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಜನರ ನಾಡಿಮಿಡಿತವನ್ನು ತಿಳಿದುಕೊಂಡು ಮಾತನಾಡುತ್ತಿದ್ದೇನೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಕೆಲವೇ ದಿನಗಳ ತನಕ ಕಾದು ನೋಡಿ.’

Leave a Reply