ಮಗಳನ್ನು ಅತ್ಯಾಚಾರ ಮಾಡಿದವರಿಂದಲೇ ಲಂಚ ಪಡೆದು ಸುಳ್ಳು ಸಾಕ್ಷಿಗೆ ಮುಂದಾದ ಪೋಷಕರು

ಡಿಜಿಟಲ್ ಕನ್ನಡ ಟೀಮ್:
ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ಪ್ದರಕರಣಗಳ ವಿರುದ್ಧ ದೇಶದೆಲ್ಲೆಡೆ ಧ್ವನಿ ಮೊಳಗುತ್ತಿರುವ ಬೆನ್ನಲ್ಲೇ, ಮಗಳನ್ನು ಅತ್ಯಾಚಾರ ಮಾಡಿದ ಆರೋಪಿಗಳಿಂದಲೇ ಲಂಚ ಪಡೆದು ಸುಳ್ಳು ಹೇಳಿಕೆ ನೀಡಲು ಪೋಷಕರು ಮುಂದಾಗಿರುವ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ.
ಕಳೆದ ವರ್ಷ ಆಗಸ್ಟ್ 30ರಂದು ನೋಯಿಡಾ ಹಾಗೂ ಘಾಜಿಯಾಬಾದ್‌ನಲ್ಲಿ 15 ವರ್ಷದ ಬಾಲಕಿಯನ್ನು ಸ್ಥಳೀಯ ಜಮೀನು ದಲ್ಲಾಳಿ ಹಾಗೂ ಇತರರು ಸೇರಿ ಅಪಹರಿಸಿ ಒಂದು ವಾರ ಸಾಮೂಹಿಕ ಅತ್ಯಾಚಾರ ನಡೆಸಿ ಬಿಡುಗಡೆ ಮಾಡಿದ್ದರು. ಇವರ ವಿರುದ್ಧ ಸಿಡಿದೆದ್ದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು. ಈಕೆಯ ದೂರಿನ ಪರಿಣಾಮ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಆದರೆ ಇವರು ಜಾಮೀನಿನ ಮೇಲೆ ಹೊರಬಂದಿದ್ದರು.
ಈ ಆರೋಪಿಗಳು ಹೊರ ಬಂದ ನಂತರ ಸಣ್ಣ ವ್ಯಾಪಾರ ಮಾಡಿ ಬದುಕುತ್ತಿದ್ದ ಬಾಲಕಿಯ ಪೋಷಕರಿಗೆ ₹ 20 ಲಕ್ಷ ನೀಡುವ ಆಮಿಷವೊಡ್ಡಿದ್ದರು. ಅದರಲ್ಲಿ ಈಗಾಗಲೇ 15 ಲಕ್ಷ ನೀಡಿದ್ದು, ಪೋಷಕರು ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ಬಾಲಕಿ ಮೇಲೆ ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.
ಅತ್ಯಾಚಾರ ಆರೋಪಿಗಳು ತಮ್ಮ ವಿರುದ್ಧದ ನೀಡಲಾಗಿರುವ ಹೇಳಿಕೆಯನ್ನು ಬದಲಿಸುವಂತೆ ಸಂತ್ರಸ್ತೆೆಯ ಪೋಷಕರಿಗೆ ಅಂತಿಮ ಕಂತಿನ 5 ಲಕ್ಷ ಲಂಚ ನೀಡಿದ್ದರು. ಈ ಹಣವನ್ನು ಪಡೆದ ಪೋಷಕರು ಹೇಳಿಕೆ ಬದಲಿಸಲು ಒಪ್ಪಿಗೆ ನೀಡಿದ್ದರು. ಇದರಿಂದ ಬೇಸತ್ತ ಆ ಬಾಲಕಿ, ಆ ಹಣವನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಪೋಷಕರ ವಿರುದ್ಧವೇ ದೂರು ನೀಡಿದ್ದಾಳೆ.
ದೂರಿನ ಆಧಾರದ ಮೇಲೆ ಪೋಷಕರ ವಿರುದ್ಧ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯ ಹಾಗೂ ಅಪರಾಧ ಬೆದರಿಕೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಈ ಬಾಲಕಿಯ ತಾಯಿಯನ್ನು ಬಂಧಿಸಿದ್ದು, ತಂದೆ ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

Leave a Reply