ಕಾಂಗ್ರೆಸ್ ನಾಯಕರಿಗೆ ಬಂಡಾಯದ ತಲೆನೋವು

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ನಾಲ್ಕೈದು ದಿನಗಳ ಕಾಲ ಸಾಲು ಸಾಲು ಸಭೆ ನಡೆಸಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಬಿಡುಗಡೆಗೊಳಿಸಿದರೂ ಬಂಡಾಯವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಭಾನುವಾರ ಬಿಡುಗಡೆಯಾದ ಪಟ್ಟಿಯಲ್ಲಿ ಸ್ಥಾನ ಪಡೆಯದವರು ಸೋಮವಾರ ಮುಂಜಾನೆಯಿಂದಲೂ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರ ನಿವಾಸ ದತ್ತ ಕ್ಯೂ ನಿಂತರು. ಟಿಕೆಟ್ ನೀಡದಿರಲು ಕಾರಣವೇನು? ಎಂಬ ಪ್ರಶ್ನೆ ನಮಗೆ ಟಿಕೆಟ್ ನೀಡಬೇಕೆಂದು ಎಂಬ ಪಟ್ಟು, ಮನವಿ ಸಾಮಾನ್ಯವಾಗಿ ಕಂಡು ಬಂದಿತ್ತು. ಇನ್ನು ಕೆಲವರಂತೂ ಕೆಪಿಸಿಸಿ ಕಚೇರಿಗೆ ಆಗಮಿಸಿ ಬಂಡಾಯವೇಳುವ ಎಚ್ಚರಿಕೆ ನೀಡಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ರಾಜಾಜಿನಗರದ ಟಿಕೆಟ್ ಆಕಾಂಕ್ಷಿ ಮಂಜುಳಾ ನಾಯ್ಡು ಬೆಂಬಲಿಗರು ಕೆಪಿಸಿಸಿ ರಾಜ್ಯ ಕಚೇರಿ ಮುಂಭಾಗ ಧರಣಿ ನಡೆಸಿದರೆ, ಮಹಾಲಕ್ಷ್ಮೀ ಲೇಔಟ್ ನಿಂದ ಮಂಜುನಾಥ ಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು. ಹೀಗೆ, ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಿಲ್ಲ ಎಂಬ ಆಕ್ರೋಶ ವ್ಯಕ್ತವಾದರೆ, ಕೆಜಿಎಫ್‌ನಿಂದ ಮಾಜಿ ಶಾಸಕ ಎನ್. ಸಂಪಂಗಿ ಕೆಪಿಸಿಸಿ ಕಚೇರಿಯಲ್ಲಿ ಕಣ್ಣೀರು ಹಾಕಿದರು.

ಇನ್ನು ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಬಾಗಲಕೋಟೆ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಟಿಕೆಟ್ ಕೈತಪ್ಪಿದವರು ಅಸಮಾಧಾನ ಹೊರಹಾಕಿದರು. ಜಗಳೂರು ಕ್ಷೇತ್ರದ ಹಾಲಿ ಶಾಸಕ ಎಚ್.ಪಿ ರಾಜೇಶ್ ಅವರಿಗೆ ಟಿಕೆಟ್ ಸಿಗದಿರುವುದನ್ನು ವಿರೋಧಿಸಿ, ಬಸ್ ನಿಲ್ದಾಣದಲ್ಲಿ ಬೆಂಬಲಿಗರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದಾರೆ.

ಈ ಬಂಡಾಯಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಂಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಿಷ್ಟು… ‘ಟಿಕೆಟ್ ಹಂಚಿಕೆಯನ್ನು ಗೆಲ್ಲುವ ಮಾನದಂಡದ ಆಧಾರದಲ್ಲಿ ಮಾಡಲಾಗಿದೆ. ಆದ್ದರಿಂದ ಕೆಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬದಲು ಬೇರೆಯವರಿಗೆ ನೀಡಲಾಗಿದೆ. ಕೆಲವೆಡೆ ಎದ್ದಿರುವ ಬಂಡಾಯವನ್ನು ಸದ್ಯದಲ್ಲಿಯೇ ಶಮನ ಮಾಡುತ್ತೇವೆ.’

Leave a Reply