ಬಿಜೆಪಿಯಲ್ಲಿ ಗೋಳಾಟದ ಬಂಡಾಯ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿತರ ಬಂಡಾಯ ಜೋರಾಗಿಯೇ ಇದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ವಂಚಿತರದು ಹೋರಾಟದ ಬಂಡಾಯವಾದರೆ, ಬಿಜೆಪಿ ಟಿಕೆಟ್ ವಂಚಿತರದ್ದು ಗೋಳಾಟದ ಬಂಡಾಯವಾಗಿದೆ.

ಬಿಜೆಪಿ ನಾಯಕರು ಇನ್ನು ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೂರನೇ ಹಂತದ ಪಟ್ಟಿ ಸಿದ್ಧಪಡಿಸುವಲ್ಲಿ ತಲೆಕೆಡಿಸಿಕೊಂಡು ಕೂತಿದ್ದಾರೆ. ಆಗಲೇ ಎರಡು ಹಂತಗಳಲ್ಲಿ ಪ್ರಕಟವಾದ ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಕಾದುಕುಳಿತ ನಿರಾಸೆ ಅನುಭವಿಸಿದವರ ಆಕ್ರಂದನ ಮುಗಿಲು ಮುಟ್ಟುವಂತಿದೆ. ಒಬ್ಬೊಬ್ಬರೂ ಒಂದೊಂದು ಡಿಸೈನ್ ನಲ್ಲಿ ಕಣ್ಣೀರು ಹಾಕುತ್ತಾ ಆಕಾಶ ತಲೆ ಮೇಲೆ ಬಿದ್ದು, ಎಲ್ಲವನ್ನು ಕಳೆದುಕೊಂಡವರಂತೆ ಗೋಳಾಡುತ್ತಿದ್ದಾರೆ. ಗೋಳಾಟದ ಜತೆಜತೆಗೆ ಈಗ ಪ್ರಕಟವಾಗಿರುವ 154 ಕ್ಷೇತ್ರ ಗಳಲ್ಲಿ ಟಿಕೆಟ್ ಕಳೆದುಕೊಂಡಿರುವ ಆಕಾಂಕ್ಷಿಗಳು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಅತೃಪ್ತ ಕಾರ್ಯಕರ್ತರಂತೆ ಪಕ್ಷದ ಕಚೇರಿ ಮುಂಭಾಗ ಬಿಜೆಪಿ ಅತೃಪ್ತರು ಪ್ರತಿಭಟನೆ ನಡೆಸದಿದ್ದರೂ, ತಮ್ಮ ಕ್ಷೇತ್ರಗಳಲ್ಲಿ ಬಂಡಾಯದ ಕಾವನ್ನು ಏರಿಸುವ ಪ್ರಯತ್ನದಲ್ಲಿದ್ದಾರೆ.

ಈ ಬಂಡಾಯದ ಬಗ್ಗೆ ರಾಜ್ಯ ಬಿಜೆಪಿ ಉಸ್ತು ವಾರಿ ಮುರಳೀಧರ ರಾವ್, ಪ್ರಕಾಶ್ ಜಾವಡೇಕರ್ ಪರಿಶೀಲಿಸಿದ್ದಾರೆ. ಬುಧವಾರ ಬೆಂಗಳೂರಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಅತೃಪ್ತಿರ ಬೆಳವಣಿಗೆಯ ಮಾಹಿತಿ ನೀಡಲಿದ್ದಾರೆ

ಬಿಜೆಪಿ ಅತೃಪ್ತರ ಗೋಳಾಟದ ಪಟ್ಟಿ ಹೀಗಿದೆ…

  • ಈ ಹಿಂದೆ ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬೇಳೂರು ಗೋಪಾಲಕೃಷ್ಣ ಟಿಕೆಟ್ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದು, ಪಕ್ಷ ನಿಷ್ಠೆ ತೋರಿರುವುದಕ್ಕೆ ಟಿಕೆಟ್ ಕೈತಪ್ಪಿದೆ. ನಾನು ಕೆಜೆಪಿಗೆ ಹೋಗಿದ್ದರೆ ಈ ಬಾರಿ ನನಗೆ ಟಿಕೆಟ್ ಖಚಿತವಾಗುತ್ತಿತ್ತು ಎಂದು ಭಾವುಕರಾಗಿ ಹೇಳಿ ಕಣ್ಣೀರು ಸುರಿಸಿದ್ದಾರೆ.
  • ಭಾಲ್ಕಿಯಲ್ಲಿ ಟಿಕೆಟ್ ವಂಚಿತ ಪ್ರಕಾಶ್ ಖಂಡ್ರೆ ಬಿಕ್ಕಿ ಬಿಕ್ಕಿ ಅಳುತ್ತ ತನಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೋಸ ಮಾಡಿದರು ಎಂದು ಬೆಂಬಲಿಗರ ಮುಂದೆ ಗೋಳಾಡಿದರು.
  • ಉತ್ತರ ಕರ್ನಾಟಕದ ಜಮಖಂಡಿ ಕ್ಷೇತ್ರದಿಂದ ಸಂಗಮೇಶ ನಿರಾಣಿ ಅವರಿಗೆ ಬಿಜೆಪಿ ನಾಯಕರು ಮಣೆ ಹಾಕಿಲ್ಲ ಎಂದು ಬೇಸರಗೊಂಡ ಅವರ ಬೆಂಬಲಿಗರೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
  • ರಾಯಚೂರಿನ ಮಸ್ಕಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಹಾದೇವಪ್ಪ ಗೌಡರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಅಭಿಮಾನಿಯೊಬ್ಬರು ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನ.
  • ಕಲಘಟಗಿ, ಗದಗ, ಬಾದಾಮಿ ಸೇರಿ ಉತ್ತರ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ದೊರೆತ್ತಿಲ್ಲವೆಂದು ಆರೋಪಿಸಿ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ.
  • ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಮಾಜಿ ಶಾಸಕ ಡಾ. ಡಿ.ಬಿ ಗಂಗಪ್ಪ ಅವರ ಬೆಂಬಲಿಗರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟೈರ್ ಸುಟ್ಟರು.
  • ಸೇಡಂ ಕ್ಷೇತ್ರದ ಆಕಾಂಕ್ಷಿ ರಾಜಗೋಪಾಲರೆಡ್ಡಿ ಅವರಿಂದ ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿ ತೊರೆಯುವ ಎಚ್ಚರಿಕೆ ರವಾನೆ.

Leave a Reply