ಕೈ ಪಾಳಯದಲ್ಲಿ ಆಕ್ರೋಶದ ಬಂಡಾಯ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಬಿಜೆಪಪಿ ಹಾಗೂ ಜೆಡಿಎಸ್ ವಿರುದ್ಧ ಕಾರ್ಯತಂತ್ರ ರೂಪಿಸುವತ್ತ ಗಮನ ಹರಿಸಬೇಕಿದ್ದ ಕಾಂಗ್ರೆಸ್ ತನ್ನ ಪಕ್ಷದೊಳಗಿನ ಬಂಡಾಯದ ಬಿಸಿಯನ್ನು ತಣ್ಣಗೆ ಮಾಡುವಲ್ಲಿಯೇ ಸಮಯ ಕಳೆಯುವಂತಾಗಿದೆ. ಕಾಂಗ್ರೆಸ್ ನಾಯಕರು ಏನೇ ತಿಪ್ಪರಲಾಗ ಹಾಕಿದರೂ ಟಿಕೆಟ್ ಕೈತಪ್ಪಿದ ಅತೃಪ್ತರ ಅಸಮಾಧಾನವನ್ನು ಶಮನ ಮಾಡಲು ಸಾಧ್ಯವಾಗುತ್ತಿಲ್ಲ.

ಅತ್ತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಅಧಿಕೃತ ಅಭ್ಯರ್ಥಿಗಳಿಗೆ ಬಿ.ಫಾರಂ ನೀಡುತ್ತಿದ್ದರೆ, ಇತ್ತ ಟಿಕೆಟ್ ವಂಚಿತರು ಕಾಂಗ್ರೆಸ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಅಂತಿಮ ಪಟ್ಟಿಯಲ್ಲಿ ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಹಾಲಿ ಶಾಸಕ ಎಚ್.ಪಿ ರಾಜೇಶ್ ಅವರಿಗೆ ಟಿಕೆಟ್ ತಪ್ಪಿರುವುದನ್ನು ವಿರೋಧಿಸಿ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಹಾಗೂ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಮುಂದುವರಿಸಿದರು. ತಮಗೆ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಅಥವಾ ಬೇರೆ ಪಕ್ಷದೊಂದಿಗೆ ಸ್ಪರ್ಧಿಸುವ ಎಚ್ಚರಿಕೆಯನ್ನು ಕೈ ನಾಯಕರಿಗೆ ರವಾನಿಸಿದ್ದಾರೆ.

ಉಳಿದಂತೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಬಂಡಾಯ ಹೇಗಿದೆ ನೋಡೋಣ ಬನ್ನಿ..

  • ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಪದಾ ಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧಾರ.
  • ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿ ಎಂ.ಜಿ. ಮುಳೆ, ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಲು ಸಜ್ಜಾಗಿದ್ದ ರಾಮಚಂದ್ರ, ಸಿ.ವಿ.ರಾಮನ್ ನಗರದ ಪಿ.ರಮೇಶ್ ಹೀಗೆ ಕೆಲ ಅತೃಪ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಅಧಿಕೃತ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
  • ಚಿತ್ರದುರ್ಗ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಶಿವುಯಾದವ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇವರಿಗೆ ಆರ್.ಕೆ. ಸರ್ದಾರ್, ಎಸ್.ಕೆ ಬಸವರಾಜನ್ ಅವರು ಬೆಂಬಲ ಸೂಚಿಸಿದ್ದಾರೆ.
  • ರಾಯಚೂರು ಗ್ರಾಮೀಣ ಕ್ಷೇತ್ರದ ಆಕಾಂಕ್ಷಿಗಳಾಗಿದ್ದ ರವಿಪಾಟೀಲ್, ಶೇಖರಪ್ಪ, ರಾಯಪ್ಪ ನಾಯಕ್ ಅವರು ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
  • ಅಂಬರೀಷ್ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಸೋಮವಾರ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಾಂಧಲೆ ನಡೆಸಿದ ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಅವರ ಬೆಂಬಲಿಗ ವಿಜಯ್ ಕುಮಾರ್ ಸೇರಿದಂತೆ 13 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಕುಮ್ಮಕ್ಕು ನೀಡಿರುವ ಪ್ರಮುಖರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ವಿವಿಧ ಭಾಗಗಳಲ್ಲಿ ಎದ್ದಿರುವ ಬಂಡಾಯದ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದಿಷ್ಟು… ‘ಕೆಲ ಆಕಾಂಕ್ಷಿಗಳಿಗೆ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನ ಗೊಂಡಿದ್ದಾರೆ. ಈಗಾಗಲೇ ಕೆಲ ಕ್ಷೇತ್ರಗಳ ಆಕಾಂಕ್ಷಿಗಳೊಂದಿಗೆ ಚರ್ಚಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರೊಂದಿಗೆ ಸಮಾಲೋಚಿಸಿ  ಶಮನಕ್ಕೆ ಯತ್ನಿಸಲಾಗುವುದು.’

Leave a Reply