ಬೇಳೂರು ಹೇಳುವಂತೆ ಶಿಕಾರಿಪುರದ ಹೆಣ್ಣುಬಾಕ ಯಾರು?!

ಡಿಜಿಟಲ್ ಕನ್ನಡ ಟೀಮ್:

ಈ ಪ್ರಶ್ನೆ ಉದ್ಭವಿಸಲು ಕಾರಣ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಶಿವಮೊಗ್ಗ ಜಿಲ್ಲೆಯಲ್ಲಿ ಕಮಲ ಟಿಕೆಟ್ ಕಲಹ ಜೋರಾಗಿದ್ದು, ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ನನಗೆ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟ ಎಂದು ಆರೋಪಿಸಿದ್ದ ಬಿಎಸ್ ಯಡಿಯೂರಪ್ಪ, ಇದೀಗ ಸಾಗರದಲ್ಲಿ ಟಿಕೆಟ್ ಕೊಡ್ತೇನೆ ಅಂತಾ ನನಗೆ ಭರವಸೆ ಕೊಟ್ಟು ಟಿಕೆಟ್ ತಪ್ಪಿಸಿ ವಚನ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಹೆಣ್ಣುಮಕ್ಕಳು ಛೀ.. ಥೂ ಎಂದು ಹೀಗಳೆಯುವ ಹರತಾಳು ಹಾಲಪ್ಪ ಅವರಿಗೆ ಸಾಗರ ಕ್ಷೇತ್ರದ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಹಾಲಪ್ಪನನ್ನು ಬೆಂಬಲಿಸುವುದಿಲ್ಲ. ಅವರ ಪರ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದಿರುವ ಬೇಳೂರು, ಸಾಮಾನ್ಯ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ರೂ ನಾನು ಬಿಜೆಪಿ ಪರ ಕೆಲಸ ಮಾಡ್ತಿದ್ದೆ ಆದ್ರೀಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಸೋಲಿಸೋದೇ ನನ್ನ ಗುರಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆದರೆ, ಖಂಡಿತವಾಗಿ ಕೋಟ್ಯಾಂತರ ರೂಪಾಯಿ ಆಸ್ತಿ ಸಿಗುತ್ತದೆ ಎಂದು ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಶಿಕಾರಿಪುರದಲ್ಲಿ ಲಿಂಗಾಯಿತ ಅಭ್ಯರ್ಥಿ ಹಾಕದಂತೆ ಕಾಂಗ್ರೆಸ್ ಜತೆ ಯಡಿಯೂರಪ್ಪ ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಬಯಾವುದೇ ಪಕ್ಷದವರು ಲಿಂಗಾಯಿತ ಅಭ್ಯರ್ಥಿ ಹಾಕಿದ್ರೆ ಜನ ಮುಟ್ಟಿನೋಡಿಕೊಳ್ಳುವಂತೆ ಬಿಎಸ್‌ವೈಗೆ ಕೊಡುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ. ಜೆಡಿಎಸ್‌ನಿಂದ ನನಗೆ ಆಹ್ವಾನ ಬಂದಿದೆ, ಮಾತುಕತೆಯೂ ನಡೆದಿದೆ. ಆದರೆ ನಾನು ಜೆಡಿಎಸ್ ಸೇರುವುದಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು, ಹಾಲಪ್ಪನನ್ನ ಸೋಲಿಸಬೇಕು ಅದೊಂದೇ ನಮ್ಮ ಗುರಿಯಾಗಿದೆ ಎಂದಿರುವ ಅವರು ಜೆಡಿಎಸ್‌ ಬೆಂಬಲ ಕೊಡುವ ಬಗ್ಗೆ ಮುಂದೆ ನೋಡೋಣ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಶಿಕಾರಿಪುರದಲ್ಲಿ ಒಬ್ಬ ಹೆಣ್ಣುಬಾಕನಿದ್ದು, ಅವನ ರಾಸಲೀಲೆ ಸಿಡಿ ಹರತಾಳು ಹಾಲಪ್ಪ ಅವರ ಕೈಲಿ ಇರಬೇಕು ಅನ್ನೋ ಅನುಮಾನ ನನಗಿದೆ. ಆ ಸಿಡಿ ಬಹಿರಂಗ ಆಗುತ್ತೆ ಅನ್ನೋ ಭಯಕ್ಕೆ ಹಾಲಪ್ಪಗೆ ಟಿಕೆಟ್ ಕೊಟ್ಟಿರಬಹುದು ಎಂಬ ಅನುಮಾನ ನನಗಿದೆ ಎನ್ನುವ ಮೂಲಕ ರಹಸ್ಯವೊಂದನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯನ್ನ ಕೆಜೆಪಿ ಮಾಡಲು ಯಡಿಯೂರಪ್ಪ ಹೊರಟಿದ್ದಾರೆ. ಹೀಗಾಗಿ ನಾನು ಬಿಜೆಪಿಗೆ ರಾಜೀನಾಮೆ ನೀಡಿ, ಬಂಡಾಯವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ಹಿಂದೆ ನಾನು ಕೆಜೆಪಿಗೆ ಹೋಗಿದ್ರೆ ಇಂದು ನನಗೆ ಎಲ್ಲಿ ಬೇಕಾದರೂ ಟಿಕೆಟ್ ಕೊಡ್ತಿದ್ರು ಅಂತಾ ಟೀಕಿಸಿದ್ದಾರೆ. ಒಟ್ಟಾರೆ ಇಷ್ಟು ಹೇಳಿರುವ ಬೇಳೂರು ಜೆಡಿಎಸ್‌ ಬಾಗಿಲಲ್ಲಿ ನಿಂತಿದ್ದಾರೆ. ಯಡಿಯೂರಪ್ಪ ವಚನ ಭ್ರಷ್ಟ ಅಂತಾ ನೇರವಾಗಿ ಹೇಳಿರುವ ಬೇಳೂರು ಶಿಕಾರಿಪುರದ ಹೆಣ್ಣುಬಾಕ ಯಾರು ಅನ್ನೋದನ್ನು ಸ್ಪಷ್ಟಪಡಿಸಿಲ್ಲ. ಸಿಡಿ ಯಾವುದು ಅನ್ನೋ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಮುಂದೆ ಇವೆಲ್ಲಾ ಬಯಲಾದ್ರೆ ರಾಜಕೀಯ ಜೀವನ ಅಂತ್ಯ ಆಗೋದ್ರಲ್ಲಿ ಅನುಮಾನವೇ ಇಲ್ಲ.

Leave a Reply