ಹೆಚ್‌.ಡಿ ರೇವಣ್ಣ ಸೋಲಿಸಲು ಹೆಚ್‌.ಡಿ ರೇವಣ್ಣ ಸಜ್ಜು!!

ಡಿಜಿಟಲ್ ಕನ್ನಡ ಟೀಮ್:

ಹಾಸನ ಜಿಲ್ಲೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಡಿ ರೇವಣ್ಣ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದು, ಈ ಬಾರಿ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಅದಕ್ಕಾಗಿಯೇ ಈ ಭಾಗದಲ್ಲಿ ಸ್ವಲ್ಪ ಹೆಸರು ಮಾಡಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮಂಜೇಗೌಡ ಅವರನ್ನು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಡಿಸಿ, ಕಾಂಗ್ರೆಸ್ ಟಿಕೆಟ್ ನೀಡಿದೆ. ರಾಜೀನಾಮೆ ಅಂಗೀಕಾರ ಆಗುವ ಮೊದಲೇ ಮಂಜೇಗೌಡರಿಗೆ ಕರೆ ಮಾಡಿದ್ದ ಸಿದ್ದರಾಮಯ್ಯ, ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು, ರಾಜೀನಾಮೆ ಕೊಟ್ಟು ಎಲೆಕ್ಷನ್ ನಿಲ್ಲು ಅಂತ ಸೂಚನೆ ಕೊಟ್ಟಿದ್ದ ಆಡಿಯೋ ವೈರಲ್ ಕೂಡ ಆಗಿತ್ತು. ಇದೀಗ ಕಾಂಗ್ರೆಸ್ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದೆ. ಅದುವೇ ಹೆಚ್‌.ಡಿ ರೇವಣ್ಣ.

ರೇವಣ್ಣ ನಾಮಪತ್ರಕ್ಕೂ ಮೊದಲೇ ರೇವಣ್ಣ ನಾಮಪತ್ರ..!

ಮಾಜಿ ಸಚಿವ ಹೆಚ್‌.ಡಿ ರೇವಣ್ಣ, ಇಂದುಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಶುಭ ಮುಹೂರ್ತ ನೋಡಿಕೊಂಡು ನಾಮಪತ್ರ ಸಲ್ಲಿಸುವ ರೇವಣ್ಣ ವಿರುದ್ಧ ಸ್ಪರ್ಧಿಸಲು ಹೆಚ್.ಡಿ ರೇವಣ್ಣ ಎಂಬುವರು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಮಗಳೂರಿನ ಕೆಂಪನಹಳ್ಳಿ ನಿವಾಸಿ ಹೆಚ್.ಡಿ ರೇವಣ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರೋದು ಅಸಲಿ ಹೆಚ್ ಡಿ ರೇವಣ್ಣಗೆ ನುಂಗಲಾರದ ಬಿಸಿ ತುಪ್ಪವಾಗಿ ಕಾಡಿದೆ.

ಅಜಾತ ಶತೃಗೆ ಮಾರಕವಾಗುತ್ತಾ ತಂತ್ರಗಾರಿಕೆ..?

ಹೆಚ್.ಡಿ ರೇವಣ್ಣ ಹಾಸನ ಜಿಲ್ಲೆಯ ಪಾಲಿಗೆ ಅಜಾತ ಶತೃ ಅಂದ್ರೆ ಸುಳ್ಳಲ್ಲ. ಯಾಕಂದ್ರೆ ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ, ಎದುರಾಳಿ ಯಾರೇ ಇರಲಿ ರೇವಣ್ಣನ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ ಎನ್ನವ ಮಾತಿದೆ. ಇಡೀ ಸದನದಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ವಿರುದ್ಧ ವಾಕ್ಸಮರ ನಡೆಸುತ್ತಿದ್ದು, ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೂ ಫೈಲ್ ಹಿಡಿದು ಬರುವ ರೇವಣ್ಣ ಸಿಎಂ ಬಳಿಯೇ ನೇರವಾಗಿ ಸಹಿ ಹಾಕಿಸಿಕೊಂಡು ಹೋಗ್ತಾರೆ. ರೇವಣ್ಣ ಹಾಸನಕ್ಕೆ ಎವರ್ ಗ್ರೀನ್ ಮುಖ್ಯಮಂತ್ರಿ. ಅವರಿಗೆ ರಾಜ್ಯದ ಹಿತಕ್ಕಿಂತಲೂ ಜಿಲ್ಲೆಯ ಹಿತವೇ ಮುಖ್ಯ ಅನ್ನೋ ಮಾತಿದೆ. ಇದಕ್ಕೆ ಸಾಕ್ಷಿ ಅಂದ್ರೆ ಹಾಸನ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳು, ರಸ್ತೆಗಳು, ಬಿಲ್ಡಿಂಗ್‌ಗಳೇ ಸಾರಿ ಹೇಳುತ್ತಿವೆ. ಈ ರೀತಿ ಅಭಿವೃದ್ಧಿಯನ್ನೇ ಮೂಲಮಂತ್ರ ಮಾಡಿಕೊಂಡಿರುವ ರೇವಣ್ಣನನ್ನು ಸೋಲಿಸಲು ಮಂಜೇಗೌಡರಿಗೆ ಸಾಧ್ಯಾನಾ ಅನ್ನೋ ಪ್ರಶ್ನೆ ಕಾಡ್ತಿದೆ. ಹಾಗಾಗಿಯೇ ಚಿಕ್ಕಮಗಳೂರಿನ ಹೆಚ್.ಡಿ ರೇವಣ್ಣನನ್ನು ಎದುರಾಳಿ ಮಾಡಿ ತಂತ್ರಗಾರಿಕೆ ನಡೆಸಿದೆ. ಕಾಂಗ್ರೆಸ್ ಅಭ್ಯರ್ಥಿ ಪಕ್ಕದ ಚನ್ನರಾಯಪಟ್ಟಣ ಕ್ಷೇತ್ರಕ್ಕೆ ಸೇರಿದವರಾಗಿದ್ದು, ಪಕ್ಷೇತರ ಅಭ್ಯರ್ಥಿ ಹೆಚ್.ಡಿ ರೇವಣ್ಣ ಚಿಕ್ಕಮಗಳೂರಿನವರು. ಹೀಗಿದ್ದ ಮೇಲೆ ಸೋಲಿಲ್ಲದ ಸರದಾರ ರೇವಣ್ಣನನ್ನು ಕಟ್ಟಿಹಾಕುವುದು ಅಷ್ಟು ಸುಲಭದ ಮಾತಲ್ಲ ಅನ್ನೋದು ಕ್ಷೇತ್ರದ ಜನರ ಅಭಿಪ್ರಾಯ.

Leave a Reply