ನಾಸ್ತಿಕ ನಾನಲ್ಲ.. ಕಷ್ಟ ಬಂದಾಗ ವೆಂಕಟರಮಣ! ಇದು ಸಿದ್ದು ಸೂತ್ರ

ಡಿಜಿಟಲ್ ಕನ್ನಡ ಟೀಮ್:

ನಾನು ದೇವರ ಪೂಜೆ ಗೀಜೆ ಎಲ್ಲ ಮಾಡಲ್ಲ. ನನಗೆ ಅದ್ರ ಮೇಲೆಲ್ಲಾ ನಂಬಿಕೆ ಎಂದಿದ್ದ ಸಿದ್ದರಾಮಯ್ಯ, ಪೂಜೆ ಮಾಡುವವರನ್ನು ವಿರೋಧ ಕೂಡ ಮಾಡಲ್ಲ, ಆದ್ರೆ ಮೂಢ ನಂಬಿಕೆ ಮಾಡಬಾರದು ಎಂದು ಹೇಳಿದ್ರು. ಮೂಢ ನಂಬಿಕೆ ನಿಷೇಧ ಕಾಯ್ದೆ ಜಾರಿ ಮಾಡುವ ಬಗ್ಗೆ ನಡೆಯುತ್ತಿದ್ದ ಚರ್ಚೆ ವೇಳೆ ಸಿದ್ದರಾಮಯ್ಯ ಆಸ್ತಿಕ, ನಾಸ್ತಿಕ ಆಚರಣೆ ಬಗ್ಗೆ ಹೇಳಿದ್ರು. ಆದ್ರೀಗ ಸ್ವತಃ ಸಿದ್ದರಾಮಯ್ಯ ಅವರು ಕೊಟ್ಟ ಹೇಳಿಕೆಯೇ ಉಲ್ಟಾ ಹೊಡೆದಿದೆ. ಆಸ್ತಿಕರಂತೆ ಕುಂಕುಮ ಹಚ್ಚಿಕೊಂಡು ನಾಸ್ತಿಕ ನಾನಲ್ಲ. ನಾನೂ ಕೂಡ ಆಸ್ತಿಕ ಎನ್ನುವುದನ್ನು ತೋರಿದ್ದಾರೆ.

ಹಳ್ಳಿ ಕಡೆ ಒಂದು ಗಾಧೆ ಮಾತಿದೆ. ಕಷ್ಟ ಬಂದಾಗ ವೆಂಕಟ ರಮಣ ಅಂತಾ, ಈ ಗಾಧೆ ಮಾತಿಗೆ ಅನ್ವರ್ಥ ಎನ್ನುವ ಹಾಗೆ ಇಷ್ಟು ದಿನ ಪೂಜೆ, ಪುನಸ್ಕಾರದಿಂದ ದೂರ ಉಳಿದಿದ್ದ ಸಿಎಂ ಇದೀಗ ಎಲ್ಲರಿಗಿಂತ ನಾನೇ ನಿಜವಾದ ಹಿಂದೂ ಎಂದು ಹೇಳುತ್ತಾ ಕಂಡ ಕಂಡ ದೇವಸ್ಥಾನಗಳಿಗೆಲ್ಲಾ ಎಡತಾಕುತ್ತಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದು ವಿಶೇಷ. ಜೊತೆಗೆ ಮಾಧ್ಯಮ ಪ್ರತಿನಿಧಿಗಳ ಸಂವಾದಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಹಣೆಯಲ್ಲಿ ತಿಲಕವನ್ನಿಟ್ಟಿದ್ದು, ಪತ್ರಕರ್ತರನ್ನೇ ಮಂತ್ರಮುಗ್ದರನ್ನಾಗಿ ಮಾಡಿಸಿತು.

ಮೈಸೂರಿನ ವರುಣಾದಿಂದ ಆಯ್ಕೆಯಾಗಿದ್ದ ಸಿದ್ದರಾಮಯ್ಯ, ಈ ಬಾರಿ ಕ್ಷೇತ್ರವನ್ನು ತನ್ನ ಪುತ್ರನಿಗೆ ಬಿಟ್ಟು ಹಳೆಯ ಅಖಾಡ ಚಾಮುಂಡೇಶ್ವರಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡರ ಜೊತೆ ಮಾಡು ಇಲ್ಲವೆ ಮಡಿ ಹೋರಾಟ ನಡೆಸುತ್ತಿರುವ ಸಿಎಂ ಬಾಗಲಕೋಟೆಯ ಬದಾಮಿ ಕ್ಷೇತ್ರದಿಂದ ಗೆಲ್ಲಲು ಪ್ಲಾನ್ ಮಾಡಿದ್ರು, ಆದ್ರೆ ಕಾಂಗ್ರೆಸ್‌ನಲ್ಲಿ ವ್ಯಕ್ತವಾದ ವಿರೋಧದಿಂದ ಕಂಗಾಲಾದ ಸಿಎಂ, ಏನಾದರೂ ಸರಿ ಚಾಮುಂಡೇಶ್ವರಿಯಲ್ಲಿ ಶತಾಯ ಗತಾಯ ಗೆಲ್ಲಲೇ ಬೇಕೆಂದು ಪೂಜೆ ಪುನಸ್ಕಾರದ ಮೊರೆ ಹೋಗಿದ್ದಾರೆ. ಪೂಜೆ ಮಾಡುವುದು ಅವರ ನಂಬಿಕೆಯ ವಿಚಾರವಾಗಿದ್ದರೂ ಈ ಹಿಂದೆ ಹೇಳಿದಂತೆ ಸಿಎಂ ನಡೆದುಕೊಂಡಿಲ್ಲ ಅನ್ನೋದಷ್ಟೆ ಆಕ್ಷೇಪ.

Leave a Reply