ಬಿಎಸ್‌ವೈಗೆ ಹೈಕಮಾಂಡ್ ಮೂಗುದಾರ.. ಈಗಲೂ ಮುಂದೆಯೂ!

ಡಿಜಿಟಲ್ ಕನ್ನಡ ವಿಶೇಷ:

ಬಿಎಸ್‌ವೈ ಯಡಿಯೂರಪ್ಪ ಅವರ ನಾಗಾಲೋಟಕ್ಕೆ ಬಿಜೆಪಿ ಹೈಕಮಾಂಡ್ ಲಗಾಮು ಹಾಕಿ ಕಟ್ಟಿ ಹಾಕುವ ಕೆಲಸ ಮಾಡಿದೆ. ಸ್ವತಃ ಯಡಿಯೂರಪ್ಪ ಮಗ ವಿಜಯೇಂದ್ರ ಕಳೆದ ಒಂದು ತಿಂಗಳಿಂದ ವರುಣಾದಲ್ಲಿ ಒಡಾಡುತ್ತಿದ್ದರೂ ಸುಮ್ಮನಿದ್ದ ಅರ್‌ಎಸ್‌ಎಸ್‌ ಹಾಗು ಬಿಜೆಪಿ ಹೈಕಮಾಂಡ್ ನಾಮಪತ್ರ ಸಲ್ಲಿಕೆಗೆ ಬಂದ ದಿನವೇ ಟಿಕೆಟ್ ಕೊಡುವ ಹಾಗಿಲ್ಲ ಎಂದು ಸ್ಪಷ್ಟ ಸಂದೇಶ ನೀಡುವ ಮೂಲಕ ಕಮಲ ಪತಿ ಬಿಎಸ್‌ ಯಡಿಯೂರಪ್ಪ ಅವರ ಮುಖಕ್ಕೆ ಮಂಗಳಾರತಿ ಮಾಡಿ, ರಾಜ್ಯದ ಜನತೆ ಎದುರು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಚುನಾವಣೆಗೂ ಮುನ್ನವೇ ಬಿಎಸ್‌ ಯಡಿಯೂರಪ್ಪ ಅವರನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳುವ ಕೆಲಸ ಮಾಡಿದ್ದು, ಅದರಲ್ಲಿ ಯಶಸ್ಸು ಕೂಡ ಸಾಧಿಸಿದ್ದಾರೆ.

ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೇ ಬಿಜೆಪಿ ನಾಯಕರ ವಕ್ರದೃಷ್ಠಿಗೆ ಒಳಗಾಗಿದ್ದಾರೆ. ಆದ್ರೆ ಬಿಎಸ್‌ವೈ ಎದುರು ಹಾಕಿಕೊಂಡು ಕಳೆದ ಬಾರಿ ಶೇಕಡ 10 ರಷ್ಟು ಮತ ಕಳೆದುಕೊಳ್ಳುವ ಜೊತೆಗೆ ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಡುವ ಮೂಲಕ ಅಧಿಕಾರದಿಂದ ಇಳಿಯಬೇಕಾಯ್ತು ಅನ್ನೋ ಒಂದೇ ಕಾರಣಕ್ಕೆ ಬಿಜೆಪಿ ನಾಯಕರು ಹಲ್ಲು ಕಚ್ಚಿಕೊಂಡು ಬಿಎಸ್‌ವೈ ಮರು ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೀಗ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ರಲ್ಲೂ ಬಿಜೆಪಿ ನಾಯಕರ ತಂತ್ರಗಾರಿಕೆ ಅಡಗಿದೆ ಎನ್ನಲಾಗಿದೆ. ಒಂದು ವೇಳೆ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆಗೆ ಹೋಗದಿದ್ದರೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅರಿತು ಈ ತೀರ್ಮಾನ ಪ್ರಕಟಿಸಲಾಗಿದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಿಎಸ್ ಯಡಿಯೂರಪ್ಪ ಅವರನ್ನು ದೂರ ಇಟ್ಟು ಸಿಎಂ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡ್ತಾರೆ ಎನ್ನಲಾಗ್ತಿದೆ.

ಆದ್ರೆ ಬಿಜೆಪಿಗೆ ಮತ ಹಾಕಬೇಕು ಅನ್ನೋ ಮತದಾರರಲ್ಲಿ ಕಾಡುತ್ತಿರುವ ಪ್ರಶ್ನೆ ಎಂದರೆ ಇನ್ನೂ ಟಿಕೆಟ್ ಹಂಚಿಕೆ ವಿಚಾರದಲ್ಲೇ ಹೈಕಮಾಂಡ್ ನಾಯಕರು ಬಿಎಸ್ ಯಡಿಯೂರಪ್ಪ ಅವರನ್ನು ತೊಗಲು ಗೊಂಬೆ ಆಡಿಸಿದಂತೆ ಆಡಿಸುತ್ತಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಆಗಿ ಮಾಡಿದರೂ ಸರ್ವ ಸ್ವತಂತ್ರವಾಗಿ ಅಧಿಕಾರ ನಡೆಸಲು ಬಿಡ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಮಾಡ್ತಿದ್ದಾರೆ‌. ದೆಹಲಿಯ ಬ್ಯಾಂಡ್‌ಸೆಟ್‌ಗೆ ಡ್ಯಾನ್ಸ್ ಮಾಡುವ ನರ್ತಕಿಗಿಂತಲೂ ಸ್ಥಳೀಯ ಬ್ಯಾಂಡ್‌ಸೆಟ್ ಹಾಕಿಕೊಳ್ಳುವ ತಾಕತ್ ಇರುವ ಕಾಂಗ್ರೆಸ್‌ನ ಸಿದ್ದರಾಮಯ್ಯ ಅಥವಾ ಪಕ್ಕಾ ಲೋಕಲ್ ಆಗಿರುವ ಕುಮಾರಸ್ವಾಮಿ ಆಯ್ಕೆ ಮಾಡಿಕೊಂಡರೆ ನಮ್ಮ ಸ್ಥಳೀಯ ಸಮಸ್ಯೆ ನಿವಾರಣೆಗೆ ಸಹಕಾರಿ ಅಲ್ಲವೇ ಎಂದು ಚಿಂತಿಸುತ್ತಿದ್ದಾರೆ. ಆದ್ರೆ ಮತದಾನದ ದಿನ ಮತದಾರನ ಆಲೋಚನೆ ಏನಾಗಿರುತ್ತೋ ಯಾರು ಬಲ್ಲರು..!!

Leave a Reply