ಕಣ ಗೌರವದ ಲಂಗೋಟಿ ಬಿಚ್ಚಿರುವ ‘ಮ್ಯಾಚ್ ಫಿಕ್ಸಿಂಗ್’!

ಇಪ್ಪತ್ತು ದಿನ ಬಾಕಿ ಇರೋ ವಿಧಾನಸಭೆ ಚುನಾವಣೆಪೂರ್ವ ಚಟುವಟಿಕೆಗಳು ನಾನಾ ಬಣ್ಣಗಳಲ್ಲಿ ಮತದಾರನ ಕಣ್ಣುಗಳನ್ನು ಕುಕ್ಕುತ್ತಿವೆ. ಕುಕ್ಕುತ್ತಿರುವ ಪರಿ, ಪರಿವರ್ತನೆ ಕಾಣುತ್ತಿರುವ ರಭಸಕ್ಕೆ ಆ ಬಣ್ಣ ಕಣ್ಣಿನ ಗ್ರಹಿಕೆಗೆ ನಿಲುಕದೆ ವಂಚಿಸುತ್ತಿದೆ. ಗೋಸುಂಬೆಯಲ್ಲಾದರೂ ಪರಿವರ್ತಿತ ಬಣ್ಣಗಳನ್ನು ಎಣಿಸಬಹುದು. ಆದರೆ ಈ ರಾಜಕೀಯ ರಂಗದಲ್ಲಿ ಲೆಕ್ಕ ಹಾಕಲಾಗುತ್ತಿಲ್ಲ. ಕ್ಷಣಕ್ಕೊಮ್ಮೆ ಬದಲಾಗುತ್ತಿರುವ ಬಣ್ಣ ಗೋಸುಂಬೆಯನ್ನು ನಾಚಿಸಿದೆ. ಎತ್ತರವನ್ನು ಮೀರಿಸಿದೆ. ಹೀಗಾಗಿ ಜನ ಗೊಂದಲದ ಸಾಗರದಲ್ಲಿ ಮುಳುಗೇಳುತ್ತಿದ್ದಾರೆ. ಒಮ್ಮೊಮ್ಮೆ ಮುಳುಗಿ ಎದ್ದಾಗಲೂ ರಾಚುತ್ತಿರುವ ಒಂದೊಂದು ಬಣ್ಣ ಅವರ ಕಣ್ಣನ್ನೇ ಮಬ್ಬಾಗಿಸಿದೆ.

ದ್ವೇಷ, ಸೇಡಿನ ಮಡುವಲ್ಲಿ ಮೀಯುತ್ತಿರುವ ಚುನಾವಣೆ ರಾಜಕಾರಣ, ಪಕ್ಷಭೇದ ಮೀರಿ ಎಲ್ಲವನ್ನೂ, ಎಲ್ಲರನ್ನೂ ಆವರಿಸಿಕೊಂಡಿದೆ. ಹತ್ತಾರು ವರ್ಷಗಳಿಂದ ಮಡುಗಟ್ಟಿರುವ ಹಗೆ ತೀರಿಸಿಕೊಳ್ಳಲು ಎಲ್ಲರೂ ಪರಸ್ಪರ ಹೆಡೆಮುರಿಗೆ ಕಟ್ಟುವ ತವಕದಲ್ಲಿದ್ದಾರೆ. ಮತ್ತೊಬ್ಬರ ಪತನದಲ್ಲಿ ತಮ್ಮ ಅಧಿಕಾರ ಅನ್ವೇಷಿಸುತ್ತಿರುವ ನಾಯಕರು ಎದುರಾಳಿಯ ಬೇಟೆಗೆ ಉರುಳು ನೇಯುತ್ತಿದ್ದಾರೆ. ಇವರಿಗೆ ತಮ್ಮ ಗೆಲುವಿಗಿಂತಲೂ ಮಿಗಿಲು ಶತ್ರುಸಂಹಾರ. ಎಲ್ಲ ಪಕ್ಷದವರೂ ಶ್ರದ್ಧಾಭಕ್ತಿಯಿಂದ ಈ ಶತ್ರುಸಂಹಾರ ಯಾಗ ಮಾಡುತ್ತಿರುವುದರಿಂದ ಚುನಾವಣೆ ಕಣದ ತುಂಬೆಲ್ಲ ಹೋಮದ ಹೊಗೆಯೋ ಹೊಗೆ. ಈ ಹೊಗೆ ಮಧ್ಯದಲ್ಲಿರುವ ಮತದಾರನ ಸ್ಥಿತಿ ಮತ್ತದೇ ಮಬ್ಬು-ಮಬ್ಬು!

ನಿಜ, ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಉಳಿದಿರುವಾಗ ನಡೆದಿರುವ ರಾಜಕೀಯ ಹೊಯ್ದಾಟಗಳು, ಸರ್ಕಸ್ಸಿನಲ್ಲಿ ಒಂದು ತೂಗುಯ್ಯಾಲೆಯಿಂದ ಮತ್ತೊಂದು ತೂಗುಯ್ಯಾಲೆಗೆ ಜಿಗಿಯುತ್ತಾ ಸಾಗುವ ಬಫೂನ್‌ಗಳಂತೆ ಟಿಕೆಟ್ ಸಿಗದ ಕಾರಣಕ್ಕೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ನೆಗೆಯುವ ‘ಜನಸೇವೆ’ ಆಕಾಂಕ್ಷಿಗಳು, ವ್ಯಕ್ತಿಗತ ದ್ವೇಷಾಸೂಯೆಯಿಂದ ಗೆಲ್ಲುವ ತಾಕತ್ತಿದ್ದವರಿಗೆ ಟಿಕೆಟ್ ತಪ್ಪಿಸಿ, ಸೋಲುವವರನ್ನೇ ಹುಡುಕಿ ತಂದು ಕಣಕ್ಕಿಳಿಸಿ ಸಂಭ್ರಮಿಸುತ್ತಿರುವ ವಿಕೃತರು, ಇದಕ್ಕೆ ಪ್ರತಿಯಾಗಿ ಪ್ರತಿಭಟನೆ, ರೋದನೆ, ಪಕ್ಷಾಂತರ, ಬಂಡಾಯದ ಮೂಲಕ ಪ್ರತಿಪಾಠ ಕಲಿಸಲು ಭವಿಷ್ಯವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಮತ್ತದೇ ‘ಜನಸೇವಕ’ರು,ಎದುರಾಳಿಯನ್ನು ಸದೆಬಡಿಯಲು ‘ಮ್ಯಾಚ್ ಫಿಕ್ಸಿಂಗ್’ ಮಾಡಿಕೊಂಡು ಪರಸ್ಪರ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿರುವ ಸಾಂದರ್ಭಿಕ ಸ್ನೇಹಜೀವಿಗಳಾದ ಶತ್ರುಗಳು ಈ ಚುನಾವಣೆ ರಣಕಣಕ್ಕೆ ತಂದಿರುವ ರಂಗು, ಅವರ ಮುಖದ ಮೇಲಿನ ಮಸಿಯಲ್ಲಿ ಪ್ರತಿಬಿಂಬಿತವಾಗುತ್ತಿದೆ.

ಇಲ್ಲಿ ಇನ್ನೂ ಒಂದು ವರ್ಗವಿದೆ. ಹಣಬಲ, ತೋಳ್ಬಲ ಇದ್ದವರು ತಮ್ಮ ಎದಿರು ಸ್ಪರ್ಧಿಸಿದವರನ್ನೇ ಖರೀದಿ ಮಾಡಿಬಿಡುವುದು. ನೆಪಮಾತ್ರಕ್ಕೆ ಕಣದಲ್ಲುಳಿಯುವ ಎದುರಾಳಿಗಳು ತಮ್ಮ ಉಮೇದುವಾರಿಕೆಯನ್ನು ಬಜ್ಜಿ, ಬೋಂಡಾದಂತೆ ಮಾರಿಕೊಂಡು ಭವಿಷ್ಯವನ್ನು ಭದ್ರ ಮಾಡಿಕೊಳ್ಳುತ್ತಾರೆ. ಮೊದಲು ಪಕ್ಷೇತರರು ಮಾಡುತ್ತಿದ್ದ ಈ ಕೆಲಸವನ್ನು ಈಗ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೇ ಅನುಷ್ಠಾನಕ್ಕೆ ತಂದಿದ್ದಾರೆ. ಇಲ್ಲಿ ಮತ್ತೊಂದು ವಿಧಾನವಿದೆ. ಹಣಬಲವಿದ್ದವರು ಎದುರಾಳಿ ಪಕ್ಷದ ನಾಯಕರನ್ನೇ ‘ಡೀಲ್’ಮಾಡಿ, ತಮ್ಮ ವಿರುದ್ಧ ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ನೋಡಿಕೊಳ್ಳುವುದು. ಇದು ಕೂಡ ಬಹಳ ಸುಲಭ ಹಾಗೂ ‘ಧನಪ್ರಿಯ’ ಮಾರ್ಗವಾಗಿ ಪರಿವರ್ತನೆ ಕಂಡಿದೆ. ಇದು ಕೂಡ ಮ್ಯಾಚ್ ಫಿಕ್ಸಿಂಗ್ ತಂತ್ರಗಳಲ್ಲಿ ಒಂದು.

ಈಗ ಪ್ರಮುಖವಾಗಿ ಎಲ್ಲೆಲ್ಲಿ, ಯಾವ ರೀತಿ, ಯಾವ ಕಾರಣಕ್ಕೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವುದನ್ನು ನೋಡೋಣ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ. ಈ ಹಿಂದೆ ತಾವು ಪ್ರತಿನಿಧಿಸಿದ್ದ ವರುಣಾ ಕ್ಷೇತ್ರವನ್ನು ಪುತ್ರ ಡಾ. ಯತೀಂದ್ರ ಅವರಿಗೆ ಬಿಟ್ಟುಕೊಟ್ಟಿರುವ ಸಿದ್ದರಾಮಯ್ಯನವರು ಅದಕ್ಕೂ ಮೊದಲು ಪ್ರತಿನಿಧಿಸಿದ್ದ ಚಾಮುಂಡೇಶ್ವರಿಗೆ ಮರಳಿದ್ದಾರೆ. ಈ ಕ್ಷೇತ್ರ ಪ್ರತಿಷ್ಠಿತ ಎನ್ನುವುದರ ಜತೆಗೆ ಮ್ಯಾಚ್ ಫಿಕ್ಸಿಂಗ್ ಕಾರಣಕ್ಕೆ ಇಡೀ ದೇಶದ ಗಮನ ಸೆಳೆದಿದೆ. ಸಿದ್ದರಾಮಯ್ಯ ಅವರಿಗೆ ಸಮಾನ ವೈರಿಗಳಾಗಿರುವ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಎದುರಾಳಿ ಸದೆಬಡಿವ ತಂತ್ರಗಾರಿಕೆಯಲ್ಲಿ ಪರಸ್ಪರ ಪರಕಾಯ ಪ್ರವೇಶ ಮಾಡಿದ್ದಾರೆ. ಬೇರೆಯವರೂ ಅವರಿಗೂ ಸಾಥ್ ನೀಡಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಜೆಡಿಎಸ್‌ನ  ಮಾಜಿ ಸಚಿವ ಜಿ.ಟಿ. ದೇವೇಗೌಡ ಪ್ರಬಲ ಅಭ್ಯರ್ಥಿ. ಇಲ್ಲಿ ಬಿಜೆಪಿಯ ಗೋಪಾಲ ರಾವ್ ಡಮ್ಮಿ ಅಭ್ಯರ್ಥಿ. ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲಲಾಗದ ಗೋಪಾಲ ರಾವ್ ಅವರನ್ನು ಹಾಲಿ ಮುಖ್ಯಮಂತ್ರಿ ವಿರುದ್ಧ ಕಣಕ್ಕಿಳಿಸಿರುವುದರ ಹಿಂದಿನ ಮರ್ಮ ಭ್ರೂಣಾವಸ್ಥೆಯಲ್ಲಿರುವ ಶಿಶುವಿಗೂ ಅರ್ಥವಾಗುವ ವಿಚಾರ. ಮುಂದಿನ ಬಾರಿಯೂ ತಾವೇ ಸಿಎಂ ಎಂದು ಬೀಗುತ್ತಿರುವ ಸಿದ್ದರಾಮಯ್ಯ ಅವರಿಗೆ ಕಣದಲ್ಲೇ ಮಣ್ಣುಮುಕ್ಕಿಸುವ ಇರಾದೆ ಪ್ರತಿಪಕ್ಷಗಳ ಮುಖಂಡರದು. ಜಾತಿ ಲೆಕ್ಕಾಚಾರದಲ್ಲಿ ಪ್ರಮುಖವಾಗಿರುವ ಲಿಂಗಾಯತ,ಒಕ್ಕಲಿಗ ಮತಗಳನ್ನು ಕ್ರೋಡೀಕರಿಸುವುದರ ಜತೆಗೆ ಕಾಂಗ್ರೆಸ್ ತೊರೆದು, ಕ್ರಮವಾಗಿ ಬಿಜೆಪಿ, ಜೆಡಿಎಸ್ ಸೇರಿರುವ ಮಾಜಿ ಸಚಿವರಾದ ವಿ. ಶ್ರೀನಿವಾಸ ಪ್ರಸಾದ್ ಹಾಗೂ ಎಚ್. ವಿಶ್ವನಾಥ್ ನೆರವಿನಿಂದ ಪರಿಶಿಷ್ಟ ಹಾಗೂ ಕುರುಬ ಸಮುದಾಯದ ಮತಗಳ ಮೇಲೆ ಪ್ರಭಾವ ಬೀರಲು ನೋಡಲಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯನವರ ಸ್ವಪಕ್ಷೀಯರೇ ಆದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ,ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪರಿಶಿಷ್ಟ ಮತಗಳನ್ನು‘ಪಕ್ಷಕ್ಕೆ’ ತಪ್ಪಿಸುವ ಭೀತಿ ಇದೆ. ಇದು ಸಿದ್ದರಾಮಯ್ಯನವರೇ ಹೇಳಿಕೊಂಡಿರುವಂತೆ ಅನ್ಯಪಕ್ಷಗಳ ‘ಟಾರ್ಗೆಟ್ ಸಿದ್ದರಾಮಯ್ಯ’ ಯೋಜನೆ ಭಾಗ-1. ಹೀಗೆ ಶತ್ರುಗಳೆಲ್ಲ ಒಂದಾಗಿರುವುದರಿಂದ ಸಿದ್ದರಾಮಯ್ಯನವರು ಯಾವುದಕ್ಕೂ ಇರಲಿ ಎಂದು ಬಾಗಲಕೋಟದ ಬಾದಾಮಿಯಿಂದಲೂ ಕಣಕ್ಕಿಳಿಯುತ್ತಿದ್ದಾರೆ.

ಆದರೆ ಸಿದ್ದರಾಮಯ್ಯನವರನ್ನು ಅಲ್ಲಿಗೂ ಬೆನ್ನಟ್ಟಿ ಹೋಗುವ ತವಕ ಬಿಜೆಪಿ ಹಾಗೂ ಜೆಡಿಎಸ್‌ದು. ಬಾದಾಮಿಯಲ್ಲಿ ಲಿಂಗಾಯತ, ಕುರುಬ, ವಾಲ್ಮೀಕಿ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲಿ ಮೊದಲಿಗೆ ಕುರುಬ ಸಮುದಾಯದವರೇ ಆದ ಮಾಜಿ ಸಚಿವ  ಬಿ.ಬಿ. ಚಿಮ್ಮನಕಟ್ಟಿ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿತವಾಗಿತ್ತು. ಒಂದೊಮ್ಮೆ ಸಿದ್ದರಾಮಯ್ಯನವರು ಬರುವುದಾದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಚಿಮ್ಮನಕಟ್ಟಿ ಹೇಳಿದ್ದರು. ಆದರೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ,ಚಿಮ್ಮನಕಟ್ಟಿ ಬದಲು ಡಾ. ದೇವರಾಜ ಪಾಟೀಲ ಅವರಿಗೆ ಟಿಕೆಟ್ ಘೋಷಿಸಿದ್ದು ಎಲ್ಲರ ಹುಬ್ಬೇರಿಸಿತ್ತು. ಸಿದ್ದರಾಮಯ್ಯ ಆಪ್ತರೆಂಬ ಕಾರಣಕ್ಕೆ ದೇವರಾಜ ಪಾಟೀಲ ಅವರನ್ನು ಪರಿಗಣಿಸಲಾಗಿತ್ತು. ಇದರಿಂದ ಹೌಹಾರಿ ಹೋದ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯನವರ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಆದರೆ ಅಂತಿಮವಾಗಿ ದೇವರಾಜ ಪಾಟೀಲ ಬದಲು ಸಿದ್ದರಾಮಯ್ಯನವರೇ ಅಭ್ಯರ್ಥಿಯಾಗಿ ಇಲ್ಲಿಗೆ ಬಂದಿದ್ದರೂ ಚಿಮ್ಮನಕಟ್ಟಿಿ ಒಳಗುದಿ ಮಾತ್ರ ಇನ್ನೂ ಆರಿಲ್ಲ. ಕ್ಷೇತ್ರ ಬಿಟ್ಟುಕೊಡುವ ಔದಾರ್ಯ ತೋರಿದ್ದರೂ ತಮ್ಮ ಬದಲು ದೇವರಾಜ ಪಾಟೀಲ ಅವರನ್ನು ಗಣನೆಗೆ ತೆಗೆದುಕೊಂಡದ್ದು ಅವರನ್ನು ಪಕ್ಷದೊಳಗಿನ ಸಿದ್ದರಾಮಯ್ಯ ವಿರೋಧಿಗಳ ಸಾಲಿಗೆ ತಂದಿಟ್ಟಿದೆ. ಈಗ ಜೆಡಿಎಸ್, ಲಿಂಗಾಯತ ಹನುಮಂತ ಮಾವಿನಮರದ ಎಂಬುವರನ್ನು ಕಣಕ್ಕೆ ಇಳಿಸಿದೆ. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದವರೇ ಆದ ಯಡಿಯೂರಪ್ಪ, ಡಾ. ನೀರಜ್ ಪಾಟೀಲ್, ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅಥವಾ ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪ – ಇವರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ. ನೀರಜ್ ಪಾಟೀಲ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಸಿದ್ದರಾಮಯ್ಯನವರಂತೆ ಬಾದಾಮಿ ಕೂಡ ಎರಡನೇ ಕ್ಷೇತ್ರವಾಗುತ್ತದೆ. ಇವರಲ್ಲಿ ಯಾರಾದರೊಬ್ಬರು ಕಣಕ್ಕಿಳಿದರೆ ಮತವಿಭಜನೆ ತಡೆಯಲು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಡಮ್ಮಿಯಾಗಿ ಪರಿವರ್ತಿಸುತ್ತದೆ ಅಥವಾ ಇವರಾರೂ ಕಣಕ್ಕಿಳಿಯದೇ ಹೋದರೆ ಜೆಡಿಎಸ್ ಅಭ್ಯರ್ಥಿಯನ್ನೇ ಪರೋಕ್ಷವಾಗಿ ಬೆಂಬಲಿಸಲು ಬಿಜೆಪಿ ನೆಪಮಾತ್ರಕ್ಕೆ ಡಮ್ಮಿ ಅಭ್ಯರ್ಥಿ ಹಾಕಬಹುದು. ಇದು ‘ಟಾರ್ಗೆಟ್ ಸಿದ್ದರಾಮಯ್ಯ’ಯೋಜನೆ ಭಾಗ-2!

ಇನ್ನು ಪ್ರತಿಪಕ್ಷಗಳ ಟಾರ್ಗೆಟ್ ಸಿದ್ದರಾಮಯ್ಯ ಅವರೊಬ್ಬರಿಗೆ ಮಾತ್ರ ಸೀಮಿತವಾಗಿಲ್ಲ. ಅವರ ಪುತ್ರ ಡಾ. ಯತೀಂದ್ರ ಸ್ಪರ್ಧಿಸಿರುವ ವರುಣಾ ಕ್ಷೇತ್ರಕ್ಕೂ ವಿಸ್ತರಣೆಯಾಗಿದೆ. ಕ್ರಮವಾಗಿ ಲಿಂಗಾಯತರು, ದಲಿತರು ಹಾಗೂ ನಾಯಕರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ನಿರ್ಣಯಿಸಲಾಗಿದ್ದರೂ ಈ ಕ್ಷಣದವರೆಗೆ ಅವರ ಹೆಸರು ಪ್ರಕಟಿಸಿಲ್ಲ. ಬಹುತೇಕ ಅವರೇ ಅಭ್ಯರ್ಥಿ. ಜೆಡಿಎಸ್ ಅಂತೂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿಲ್ಲ. ಚಾಮುಂಡೇಶ್ವರಿಯಂತೆ ಇಲ್ಲಿಯೂ ಕೂಡ ಪಕ್ಷದ ಹೊರಗಿನ, ಒಳಗಿನ ಸಿದ್ದರಾಮಯ್ಯ ವಿರೋಧಿಗಳೆಲ್ಲ ಅವರ ಪುತ್ರನನ್ನೂ ಸೋಲಿಸಲು ಕೈಕೈ ಮಿಲಾಯಿಸಿದ್ದಾರೆ. ಇದು ಟಾರ್ಗೆಟ್ ಸಿದ್ದರಾಮಯ್ಯ ಯೋಜನೆ ಭಾಗ-3!

ಇನ್ನು ಪಕ್ಷಾಂತರದಲ್ಲಿ ಪಿಎಚ್‌ಡಿ ಪಡೆದು, ಯಾವುದೇ ಸರಕಾರದಲ್ಲೂ ಮಂತ್ರಿಯಾಗುವ ಕಲೆ ಕರಗತ ಮಾಡಿಕೊಂಡಿರುವ ಸಚಿವ ಆರ್.ವಿ. ದೇಶಪಾಂಡೆ ಅವರ ವಿಚಾರ. ಧನಬಲದ ಮ್ಯಾಚ್ ಫಿಕ್ಸಿಂಗ್‌ಗೆ ಇವರು ಹೆಸರುವಾಸಿ. ಉತ್ತರ ಕನ್ನಡ ಜಿಲ್ಲೆೆಯ ಹಳಿಯಾಳ-ಜೋಯಿಡಾ ಇವರ ಕಾರ್ಯಕ್ಷೇತ್ರ. ಸರಿಯಾಗಿ ಚುನಾವಣೆ ಕಾಲಕ್ಕೆ ಫಿಕ್‌ಸ್‌ ಆಗುವ ಡೀಲ್ ದೇಶಪಾಂಡೆ ಗೆಲುವಿನ ರಹದಾರಿ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಸುನಿಲ್ ಹೆಗಡೆ ಜತೆ ನೇರ ಸ್ಪರ್ಧೆ ಏರ್ಪಟ್ಟಿತು. ಕಾರಣ ಬಿಜೆಪಿಯ ಡಮ್ಮಿ ಅಭ್ಯರ್ಥಿ ರಾಜು ಧೂಳಿ. ಅವರೇ ಅಭ್ಯರ್ಥಿ ಆಗವಂತೆ ನೋಡಿಕೊಳ್ಳುವಲ್ಲಿ ದೇಶಪಾಂಡೆ ಯಶಸ್ವಿಯಾಗಿದ್ದರು. ತತ್ಪರಿಣಾಮ ಗೆಲುವು ಅವರ ಜೇಬಿನಲ್ಲಿತ್ತು. ಸಹಕರಿಸಿದವರ ಜೇಬಿಗೆ ಸಲ್ಲಬೇಕಾದ್ದು ಸಂದಿತ್ತು. ಈಗ ದೇಶಪಾಂಡೆ ವಿರುದ್ಧ ಬೆಂಗಳೂರು ಮೂಲದ ಕೆ.ಆರ್. ರಮೇಶ್ ಜೆಡಿಎಸ್ ಅಭ್ಯರ್ಥಿ. ಅವರು ಪ್ರಬಲ ಸ್ಪರ್ಧಿ. ಆದರೆ ಹಿಂದೆ ಜೆಡಿಎಸ್‌ನಲ್ಲಿದ್ದ ಸುನಿಲ್ ಹೆಗಡೆ ಈಗ ಬಿಜೆಪಿ ಅಭ್ಯರ್ಥಿ. ಸ್ವತಃ ದೇಶಪಾಂಡೆ ಅವರೇ ಬಿಜೆಪಿಗೆ ಹೋಗುತ್ತಾರೆ ಎನ್ನುವ ಮಾತುಗಳು ಚುನಾವಣೆಪೂರ್ವದಲ್ಲಿ ಚಾಲ್ತಿ ಪಡೆದಿದ್ದವು. ಆದರೆ ಅವರು ಕಾಂಗ್ರೆಸ್ ಬಿಡಲಿಲ್ಲ. ಅಲ್ಪಸಂಖ್ಯಾತ, ಹಿಂದುಳಿದವರ ಮತಗಳ ಮೇಲೆ ಕಣ್ಣಿಟ್ಟಿರುವ ದೇಶಪಾಂಡೆ ಮೂರನೇ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯುವಂತೆ ನೋಡಿಕೊಂಡು ಮತವಿಭಜನೆ ಕಾಯಕದಲ್ಲಿ ಮಗ್ನರಾಗಿದ್ದಾರೆ. ಆದರೆ ಹಿಂದೆ ಜೆಡಿಎಸ್ ತೆಕ್ಕೆಗೆ ಜಾರಿದ್ದ ಕ್ಷೇತ್ರದಲ್ಲಿ ರಮೇಶ್ ಎಬ್ಬಿಸಿರುವ ಹವಾ ದೇಶಪಾಂಡೆ ಕಳವಳಕ್ಕೆ ಕಾರಣವಾಗಿದೆ. ಆದರೆ ಬಿಜೆಪಿ ಮತಗಳ ಫಿಕ್‌ಸ್‌‌ಗೆ ದೇಶಪಾಂಡೆ ನಡೆಸಿರುವ ಯತ್ನ ಯಶಸ್ವಿಯಾಗುತ್ತದೋ ಅಥವಾ ಕಣದಲ್ಲಿ ಅವರನ್ನೇ ಫಿಕ್‌ಸ್‌ ಮಾಡಿ ಉರುಳಿಸುತ್ತದೋ ಎಂಬುದು ಕುತೂಹಲ ಕೆರಳಿಸಿರುವ ಪ್ರಶ್ನೆ.

ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ವಿಚಿತ್ರ ತಿರುವು. ಚಾಮುಂಡೇಶ್ವರಿ, ಬಾದಾಮಿ ಹಾಗೂ ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ  ಏರ್ಪಟ್ಟಿದ್ದರೆ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಳ ಒಪ್ಪಂದವಾಗಿದೆ. ಇಲ್ಲಿ ಕುಮಾರಸ್ವಾಮಿ ನೆರವಿಗೆ ಡಿ.ಕೆ. ಶಿವಕುಮಾರ್ ನಿಂತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಚಿವ ಮಾಗಡಿಯ ಎಚ್.ಎಂ. ರೇವಣ್ಣ  ಇಲ್ಲಿ ನೆಪ ಮಾತ್ರ. ಹೇಗಿದ್ದರೂ ಮೇಲ್ಮನೆ ಸದಸ್ಯರಾಗಿರುವ ರೇವಣ್ಣ ಇಲ್ಲಿನ ಸೋಲು-ಗೆಲುವಿನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರಿಗೆ ಸಮಾನ ವೈರಿಯಾಗಿರುವ ಯೋಗೇಶ್ವರ್ ಅವರನ್ನು ಸೋಲಿಸುವುದೊಂದೇ ಗುರಿ. ಇನ್ನು ರಾಮನಗರದಲ್ಲಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಇಕ್ಬಾಲ್ ನೆಪ ಮಾತ್ರಕ್ಕೆ. ಇಲ್ಲಿ ಕುಮಾರಸ್ವಾಮಿ ಅವರಿಗೆ ತಮ್ಮದೇ ಆದ ಪ್ರಾಬಲ್ಯವಿದೆ. ಜತೆಗೆ ಶಿವಕುಮಾರ್ ಸಹಕಾರವಿದೆ. ಇದಕ್ಕೆ ಪ್ರತಿಯಾಗಿ ಶಿವಕುಮಾರ್ ಸ್ಪರ್ಧಿಸಿರುವ ಕನಕಪುರದಲ್ಲಿ ಬಿ. ನಾರಾಯಣಗೌಡ ಜೆಡಿಎಸ್‌ನ ಡಮ್ಮಿ ಅಭ್ಯರ್ಥಿ. ಶಿವಕುಮಾರ್ ಉಪಕಾರಕ್ಕೆ ಕುಮಾರಸ್ವಾಮಿ ಪ್ರತ್ಯುಪಕಾರ!

ಮಂಡ್ಯ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಶ್ರೀರಂಗಪಟ್ಟಣ ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಜೆಪಿ ‘ಬಿ ಫಾರಂ’ಗಳಿಗೆ ಯಡಿಯೂರಪ್ಪನವರ ಬದಲು ಮಾಜಿ ಪ್ರಧಾನಿ ದೇವೇಗೌಡರೇ ಸಹಿ ಹಾಕಿದಂತಿದೆ. ಅಷ್ಟರ ಮಟ್ಟಿಿಗೆ ಬಿಜೆಪಿ ಡಮ್ಮಿ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಕಮಲ ಚಿಹ್ನೆಯನ್ನೇ ಅಣಕಿಸುವಂತಿದ್ದಾರೆ. ಕೆಲವರಿಗಂತೂ ತಮಗೇ ಬಿಜೆಪಿ ‘ಬಿ ಫಾರಂ’ ಸಿಕ್ಕಿರುವ ಬಗ್ಗೆ ಶಾಕ್ ಆಗಿದೆ. ಕಾರಣ,ಇಷ್ಟೇ. ಈಗ ಕಣದಲ್ಲಿರುವವರಿಗಿಂತಲೂ ಪ್ರಬಲ ಅಭ್ಯರ್ಥಿಗಳು ಆ ಭಾಗದಲ್ಲಿದ್ದರೂ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಅವರಿಗೇನಾದರೂ ಕೊಟ್ಟಿದ್ದರೆ ಅವರು ಜೆಡಿಎಸ್ ಮತಗಳನ್ನು ಸೆಳೆದು ಕಾಂಗ್ರೆಸ್ಸಿಗೆ ಅನುಕೂಲವಾಗುತ್ತಿತ್ತು. ಹೀಗಾಗಿ ಕಾಂಗ್ರೆಸ್ ಬಲಿ ಹಾಕಲು ಬಿಜೆಪಿ ಮೃದುಧೋರಣೆ ತಳೆದಿರುವ ಪರಿಣಾಮ ಮಂಡ್ಯದಲ್ಲೀಗ ಡಮ್ಮಿ ಅಭ್ಯರ್ಥಿಗಳ ಬೆನ್ನ ಮೇಲೆ ಜೆಡಿಎಸ್ ಸವಾರಿ ಮಾಡುತ್ತಿದೆ. ಶ್ರೀರಂಗಪಟ್ಟಣದ ನಂಜುಂಡೇಗೌಡರು ಆರು ಬಾರಿ ಸೋತಿದ್ದರೂ ಸಾಕಷ್ಟು ಮತಗಳನ್ನು ಸೆಳೆದವರು. ಅವರು ಮೊದಲೇ ಅರ್ಜಿ ಹಾಕಿಕೊಂಡಿದ್ದರಿಂದ ಡಮ್ಮಿ ಅಭ್ಯರ್ಥಿಗಳ  ಸಾಲಿನಿಂದ ನುಣುಚಿಕೊಂಡಿದ್ದಾರೆ.

ಬೆಂಗಳೂರಿನ ಸರ್ವಜ್ಞನಗರದಲ್ಲಿ ಕಾಂಗ್ರೆಸ್, ಸಿಎಂ ಸಿದ್ದರಾಮಯ್ಯ ಪರಮಾಪ್ತ, ‘ಧನ ಧುರೀಣ’ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಕಳೆದ ಬಾರಿ 40 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದ ಬಿಜೆಪಿಯ ಪದ್ಮನಾಭ ರೆಡ್ಡಿ ಬದಲು ಎಂ.ಎನ್. ರೆಡ್ಡಿಿ ಎಂಬುವರನ್ನು ಕಣಕ್ಕಿಳಿಸಲಾಗಿದೆ. ಪದ್ಮನಾಭ ರೆಡ್ಡಿ ಜಾರ್ಜ್ ಧನಬಲಕ್ಕೆ ಹೆದರಿದ್ದರೆ, ಎಂ.ಎನ್. ರೆಡ್ಡಿ ಅದಕ್ಕೇ ಆಕರ್ಷಿತರಾಗಿದ್ದಾರೆಂಬ ಮಾತುಗಳಿವೆ. ಬ್ಯಾಟರಾಯನಪುರದಲ್ಲಿ ಸಚಿವ ಕೃಷ್ಣಬೈರೇಗೌಡ ವಿರುದ್ಧ 2008 ರ ಚುನಾವಣೆಯಲ್ಲಿ 15 ಸಾವಿರ ಮತಗಳ ಅಂತರದಿಂದ, 2013 ರಲ್ಲಿ 30 ಸಾವಿರ ಮತಗಳಿಂದ ಸೋತಿದ್ದ ಬಿಜೆಪಿಯ ಎ. ರವಿ ಅವರಿಗೇ ಮೂರನೇ ಬಾರಿಯೂ ಟಿಕೆಟ್ ಕೊಟ್ಟಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವಣ ಮ್ಯಾಚ್ ಫಿಕ್ಸಿಂಗ್ ಪರಿಣಾಮ. ಚುನಾವಣೆಯಿಂದ ಚುನಾವಣೆಗೆ ಸೋಲಿನ ಅಂತರ ದುಪ್ಪಟ್ಟು ಮಾಡಿಕೊಂಡ ಅಭ್ಯರ್ಥಿಗೇ ಟಿಕೆಟ್ ಕೊಟ್ಟಿದ್ದಾರೆಂದರೆ ಬಿಜೆಪಿಯ ‘ಹೃದಯ ವೈಶಾಲ್ಯ’ ಎಷ್ಟು ದೊಡ್ಡದಿರಬಹುದು!

ಇವೆಲ್ಲ ಬರೀ ಸ್ಯಾಂಪಲ್‌ಗಳಷ್ಟೇ. ಕರ್ನಾಟಕದ ಉದ್ದಗಲಕ್ಕೂ ಇಂಥ ಅನೇಕ ಪ್ರಕರಣಗಳು ತೋರುಬೆರಳು ಮಡಚಿ-ಬಿಚ್ಚಿ ಚುನಾವಣೆ ಪಾವಿತ್ರ್ಯವನ್ನೇ ಅಣಕಿಸುತ್ತಿವೆ. ತಾನು ನಂಬಿಕೆ ಇಟ್ಟ ಪಕ್ಷದ ಬಗ್ಗೆ ಮತದಾರ ತನ್ನದೇ ಆದ ಕನಸು ಕಂಡಿರುತ್ತಾನೆ. ಆಯಾ ಪಕ್ಷದ ಕಾರ್ಯಕರ್ತರು ತನು-ಮನ ಅರ್ಪಿಸಿ ಅಹರ್ನಿಶಿ ದುಡಿಯುತ್ತಿರುತ್ತಾರೆ. ಆದರೆ ನಾಯಕರು, ಅಭ್ಯರ್ಥಿಗಳು ಮಾತ್ರ ಅವರೆಲ್ಲರ ನಂಬಿಕೆಗಳಿಗೆ ಲಂಗೋಟಿ ತೊಡಿಸಿ ಸ್ವಾರ್ಥ ಮಾರ್ಗದ ನಾಗಾಲೋಟದಲ್ಲಿದ್ದಾರೆ.

ಲಗೋರಿ: ಬಿಚ್ಚುಗತ್ತಿ ಹಿಡಿದವರೆಲ್ಲ ಯೋಧರಲ್ಲ.

Leave a Reply