ನಂಗೆ ವಯಸ್ಸಾಯ್ತು ಅದಕ್ಕೆ ಚುನಾವಣೆಯಿಂದ ಹಿಂದೆ ಸರಿದೆ

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಕ್ಷೇತ್ರದ ಟಿಕೆಟ್ ವಿಚಾರವಾಗಿ ತಮ್ಮ ಅಹಂನಿಂದ ಕಾಂಗ್ರೆಸ್ ನಾಯಕರನ್ನು ತಿರುಗಾಡಿಸಿರುವ ರೆಬಲ್ ಸ್ಟಾರ್ ಅಂಬರೀಶ್, ಈಗ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರ್ಜಿ ಹಾಕದಿದ್ದರೂ ಪಕ್ಷ ಟಿಕೆಟ್ ನೀಡಿ, ಬಿ-ಫಾರಂ ಅನ್ನು ಅಂಬಿ ಮನೆಗೆ ಕಳುಹಿಸಿಕೊಟ್ಟಿತ್ತು. ಆದರೂ ನಾಯಕರನ್ನು ಭೇಟಿಯಾಗದೆ ಆಟವಾಡಿಸಿದ್ದರು. ಇದು ಸಹಜವಾಗಿಯೇ ಕಾಂಗ್ರೆಸ್ ನಾಯಕರ ಸಿಟ್ಟು ನೆತ್ತಿಗೇರಿಸಿತ್ತು. ಇಂದು ತಮ್ಮ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅಂಬಿ ಹೇಳಿದಿಷ್ಟು…

‘ನನಗೆ ವಯಸ್ಸಾಗಿದ್ದು, ಓಡಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದು, ಸಕ್ರೀಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ.  ಮುಂಚೆಯೇ ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೆ, ಅಲ್ಲದೇ ನನಗೆ ಎಲ್ಲಾ ರಾಜಕೀಯ ಪಕ್ಷಗಳಿಂದ ಆಹ್ವಾನವಿತ್ತು. ಆದರೆ ನಾನು ಹೋಗಲಿಲ್ಲ. ನನಗೆ ಬೇರೆ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲು ಒತ್ತಡ ಇತ್ತು. ಆದರೆ ನಾನೇ ನಿರಾಕರಿಸಿದ್ದೇನೆ. ನನಗೆ ಯಾವುದೇ ಬೇಸರವಿಲ್ಲ. ಅಂಬಿಗೆ ಬೇಸರ ಆಗುವುದೂ ಇಲ್ಲ. ನನಗೆ ಶಾಸಕ ಸ್ಥಾನ ಬೇಕೆಂದು ಇಲ್ಲ. ನನ್ನ ಹೆಸರಿನಲ್ಲೇ ಮಂಡ್ಯ ಶಾಸಕ ಸ್ಥಾನ ಇದೆ.

ನನಗೆ ಯಾರ ಬಗ್ಗೆಯೂ ಬೇಸರ ಇಲ್ಲ, ಮುಖ್ಯಮಂತ್ರಿಯಾಗೋ ಕನಸೂ ಇಲ್ಲ.ಬೇರೆಯವರ ಪರವಾಗಿ ಪ್ರಚಾರಕ್ಕೆ ಹೋಗುವುದಿಲ್ಲ. ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಗುಂಡೂರಾವ್ ಮನೆಗೆ ಬಂದು ಗೆಲ್ಲುವುದಿಲ್ಲ ಎಂಬ ಇಂಟಲಿಜೆನ್ಸ್ ರಿಪೊರ್ಟ್ ಇದೆ ಎಂದು ಹೇಳಿದ್ದರು. ಅವರ ಹೇಳಿಕೆ ಬೇಸರ ತರಿಸಿದೆ. ಸಿದ್ದರಾಮಯ್ಯ ಸಿ.ಎಂ ಆಗಲೂ ನಾನೂ ಕಾರಣ, ಸಿದ್ದರಾಮಯ್ಯಗೆ ಧೈರ್ಯ ಬೇಕು. ಚಾಮುಂಡೇಶ್ವರಿಯಲ್ಲಿ ಮಾತ್ರ ನಿಲ್ಲಬೇಕಿತ್ತು. ಎರಡು ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ನನ್ನ ಸಹಮತ ಇಲ್ಲ.

ಮಂಡ್ಯದಲ್ಲಿ ನಾನಿಲ್ಲ ಅಂದರೆ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ. ಅವನ್ಯಾವವನೋ ಗಣಿಗ ರವಿ, ರಮ್ಯಾಗೆ ಟಿಕೆಟ್ ನೀಡಬಹುದಿತ್ತು.’

Leave a Reply