ಸಿಎಂ ಆಪ್ತ ಎಚ್.ಸಿ ಮಹದೇವಪ್ಪ ಮನೆ ಮೇಲೆ ಐಟಿ ದಾಳಿ

(ಇಂಟರ್ನೆಟ್ ಚಿತ್ರ)
ಡಿಜಿಟಲ್ ಕನ್ನಡ ಟೀಮ್:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಚಿವರಾದ ಎಚ್.ಸಿ ಮಹದೇವಪ್ಪ ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಚುನಾವಣೆ ಹೊಸ್ತಿಲಲ್ಲಿರುವಾಗ ನಡೆದಿರುವ ಈ ಐಟಿ ದಾಳಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದು, ರಾಜಕೀಯವಾಗಿ ಸಂಚಲನ ಮೂಡಿಸಿದೆ.
ಮಂಗಳವಾರ ಬೆಳಗ್ಗೆ ಮೈಸೂರಿನ ನಿವಾಸದ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ‘ಇದು ಕೇಂದ್ರ ಸರ್ಕಾರದ ನೀಚ ಕೃತ್ಯ’ ಎಂದು ಕಿಡಿ ಕಾರಿದ್ದಾರೆ.
ಚುನಾವಣೆಗೆ ಒಂದೊಂದು ದಿನ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿನ ಚಟುವಟಿಕೆ ಕಾವು ಕೂಡ ಒಂದೊಂದು ಹಂತಕ್ಕೆ ಏರುತ್ತಿದೆ. ಅದರಲ್ಲೂ ಈ ಬಾರಿ ಮೈಸೂರು ಜಿಲ್ಲೆ ಎಲ್ಲರ ಗಮನವನ್ನು ತನ್ನತ್ತ ಸೆಳೆದಿಟ್ಟುಕೊಂಡಿದೆ. ಪರಿಣಾಮ ದಿನ ನಿತ್ಯ ಈ ಜಿಲ್ಲೆ ಸಾಕಷ್ಟು ಬೆಳವಣಿಗೆಗಳಿಗೆ ವೇದಿಕೆಯಾಗಿದೆ.
ನಿನ್ನೆ ಬಿಜೆಪಿ ಹೈ ಕಮಾಂಡ್ ವರುಣಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರರನ್ನು ಹಿಂದಕ್ಕೆ ಪಡೆದ ನಂತರ ಸಾಕಷ್ಟು ಗೊಂದಲದವಾತಾವರಣಕ್ಕೆ ಸಾಕ್ಷಿಯಾಗಿತ್ತು. ಇಂದು ಮೈಸೂರಿನಲ್ಲಿರುವ ಮಹದೇವಪ್ಪ ಅವರ ಮನೆ ಮೇಲೆ ಐಟಿ ದಾಳಿ ನಡೆದಿರುವುದು ಮತ್ತೊಂದು ರೀತಿಯ ಕುತೂಹಲಕ್ಕೆ ಕಾರಣವಾಗಿದೆ.
ಮೇಲ್ನೋಟಕ್ಕೆ ವಿಜಯೇಂದ್ರ ಟಿಕೆಟ್ ವಂಚಿತರಾದ ಸುದ್ದಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಈ ದಾಳಿ ನಡೆಸಿರಬಹುದಾ ಎಂಬ ಪ್ರಶ್ನೆ ಉದ್ಭವಿಸಿದೆಯಾದರೂ, ಏನೇ ಆಗಲಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರರನ್ನು ಸೋಲಿಸಲೇಬೇಕೆಂಬ ಬಿಜೆಪಿ ಪಟ್ಟು ಈ ದಾಳಿಯ ಹಿಂದೆ ಕೆಲಸ ಮಾಡಿರುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

Leave a Reply