ಅಸಾರಾಮ್‌ ಅತ್ಯಾಚಾರಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

ಡಿಜಿಟಲ್ ಕನ್ನಡ ಟೀಮ್:
2013ರಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಮ್‌ ಬಾಪು ಮತ್ತು ಇನ್ನಿಬ್ಬರನ್ನು ದೋಷಿಗಳೆಂದು ಜೋಧ್‌ಪುರ ಎಸ್‌ಸಿ/ಎಸ್‌ಟಿ ನ್ಯಾಯಾಲಯ ತೀರ್ಪು ನೀಡಿದೆ.
ಮಧ್ಯಪ್ರದೇಶದ ಚಿಂದ್ವಾರದಲ್ಲಿರುವ ಅಸಾರಾಮ್ ಬಾಪು ಅವರ ಆಶ್ರಮದಲ್ಲಿ ಉತ್ತರ ಪ್ರದೇಶದ ಶಹಜಹಾನ್ಪುರ ಮೂಲದ ಬಾಲಕಿ ಶಿಕ್ಷಣ ಪಡೆಯುತ್ತಿದ್ದಳು. ಈಕೆಯ ಮೇಲೆ ಅಸರಾಮ್ ಬಾಪು ಹಾಗೂ ಮತ್ತಿತರರು ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಇವರನ್ನು ದೋಷಿಗಳೆಂದು ಪ್ರಕಟಿಸಿದೆ. ಇವರಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ವಿಚಾರಣೆ ಅವಧಿಯಲ್ಲಿ ಅಸಾರಾಮ್ ಬಾಪು ಅವರು ಜಾಮೀನು ಕೋರಿ 12 ಬಾರಿ  ಅರ್ಜಿ ಸಲ್ಲಿಸಿದ್ದು, ಪ್ರತಿಬಾರಿಯೂ ಜಾಮೀನು ಪಡೆಯುವಲ್ಲಿ ವಿಫಲರಾಗಿದ್ದರು. ಆ ಪೈಕಿ ಆರು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದರೆ, ಮೂರನ್ನು ರಾಜಸ್ಥಾನ ಹೈಕೋರ್ಟ್‌ ಹಾಗೂ ಉಳಿದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.
ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತೆಯ ತಂದೆ ಹೇಳಿರುವುದಿಷ್ಟು…
‘ಅಸಾರಾಮ್ ದೋಷಿ ಎಂದು ಸಾಬೀತಾಗಿದೆ. ನಮಗೆ ನ್ಯಾಯ ಸಿಕ್ಕಿದೆ. ಈ ಕಾನೂನು ಹೋರಾಟದಲ್ಲಿ ನಮ್ಮ ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ನಂಬಿದ್ದೇನೆ. ಕೇವಲ ನನಗೆ ಮಾತ್ರವಲ್ಲ ಪ್ರಕರಣದಲ್ಲಿ ಕೊಲೆ ಹಾಗೂ ನಾಪತ್ತೆಯಾದ ಸಾಕ್ಷಿದಾರರಿಗೂ ನ್ಯಾಯ ಸಿಗುವ ವಿಶ್ವಾಸವಿದೆ.’

Leave a Reply