ನಾನು ಜೆಡಿಎಸ್‌ಗೇ ವೋಟ್ ಹಾಕೋದು, ಮಾಜಿ ಗೆಳೆಯನ ಮಾತನಾಡಿಸಿ ಕೆಟ್ಟ ಮುಖ್ಯಮಂತ್ರಿ

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಸದನ ಸೇರಿದಂತೆ ಸಾಮಾನ್ಯವಾಗಿ ಹಾಸ್ಯಾಸ್ಪದವಾಗಿ ಮಾತನಾಡುವುದು ರೂಡಿ. ಅದೇ ರೀತಿ ನಿನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಮಾತನಾಡಿಸಿ ಪೇಚಿಗೆ ಸಿಲುಕಿದ ಘಟನೆ ನಡೆಯಿತು. ಹಳೇಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುವಾಗ ಎದುರಿಗೆ ಸಿಕ್ಕ ದಲಿತ ಮುಖಂಡ ಮರಿಸ್ವಾಮಿ ಅವರನ್ನು ಸಾರ್ವಜನಿಕವಾಗಿ ಮಾತನಾಡಿಸಿದ್ರು. ಏಕವಚನದಲ್ಲಿ ಮಾತನಾಡಿಸಿದ ಮುಖ್ಯಮಂತ್ರಿಗೆ ಮರಿಸ್ವಾಮಿ ಕೂಡ ಏಕವಣನದಲ್ಲೇ ಉತ್ತರ ಕೊಡುವ ಮೂಲಕ ಸರಿಯಾಗಿಯೇ ಬಿಸಿ ಮುಟ್ಟಿಸಿದ್ರು. ಸಿದ್ದರಾಮಯ್ಯ ಹಾಗೂ ಮರಿಸ್ವಾಮಿ ನಡುವೆ ನಡೆದ ಸಂಭಾಷಣೆ ನೋಡೋದಾದ್ರೆ..

ಹೇ ಮರಿಸ್ವಾಮಿ ನೀ ನನ್ನ ಜೊತೆ ಇದ್ದಲ್ಲಯ್ಯ ಬಾ ಅಂತ ಸಿದ್ದರಾಮಯ್ಯ ಮೈಕ್ ಮೂಲಕ ಕರೆದ್ರು. ಇದಕ್ಕೆ ಉತ್ತರಿಸಿದ ಮರಿಸ್ವಾಮಿ, ನಾನು ಜೆಡಿಎಸ್‌ನಲ್ಲಿದ್ದೇನೆ ಬರೋಲ್ಲ ಎಂದು ಉತ್ತರಿಸಿದ್ರು. ಆಯ್ತು ನೀ ಬರಬೇಡ ವೋಟು ಹಾಕು ಸಾಕು ಎಂದು ಸಿದ್ದರಾಮಯ್ಯ ಕಿಚ್ಚಾಯಿಸಿದ್ರು. ಇದಕ್ಕೆ ಅದೇ ಸ್ಟೈಲ್‌ನಲ್ಲಿ ಉತ್ತರಿಸಿದ ಮರಿಸ್ವಾಮಿ, ನಾ ಬರೋದು ಇಲ್ಲ, ಕಾಂಗ್ರೆಸ್‌ಗೆ ವೋಟು ಹಾಕೋಲ್ಲ ಎಂದು ಖಡಕ್ ಉತ್ತರ ಕೊಟ್ರು. ಈ ವೇಳೆ ಆಯ್ತು ಬರಬೇಡ ಹೋಗು ಎಂದ ಸಿದ್ದರಾಮಯ್ಯ ಟಾಂಗ್ ಕೊಟ್ರೆ, ನೀವು ನಮ್ಮ ಊರಿ‌‌ನಲ್ಲಿ ಇರೋದು ನೀವೆ ಹೋಗಿ, ನಾನು ಇಲ್ಲೇ ಇರೋವ್ನು ಎಂದು ಮರಿಸ್ವಾಮಿ ತಿರುಗೇಟು ಕೊಟ್ರು.
ನಿಮ್ಮನ್ನ ಉಪಮುಖ್ಯಮಂತ್ರಿ ಮಾಡಿದ ಮಹಸ್ವಾಮಿಗೆ ದೊಡ್ಡ ನಮಸ್ಕಾರ ಎಂದ ಮರಿಸ್ವಾಮಿ ಟೀಕಿಸಿದ್ರು. ಅದಕ್ಕೆ ಶಾಂತವಾಗಿ ಉತ್ತರಿಸಿದ ಮುಖ್ಯಮಂತ್ರಿ ಅದು ಆಗ ಕಣಯ್ಯ ಈಗ ನಾನು ಮುಖ್ಯಮಂತ್ರಿ ಎಂದು ಹೇಳಿದ್ರು.. ಕೊನೆಗೆ ಹೇ ಅವನು ಯಾವುದಕ್ಕಾದ್ರು ಮಾಡಲಿ ನೀವು ಕಾಂಗ್ರೆಸ್‌ಗೆ ವೋಟ್ ಮಾಡಿ ಎಂದ ಸಿದ್ದರಾಮಯ್ಯ ನೆರೆದಿದ್ದ ಜನರಿಗೆ ಹೇಳಿದ್ರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮುಂದೇಯೇ ಜೆಡಿಎಸ್‌ ಶಾಸಕ ಜಿ.ಟಿ.ದೇವೆಗೌಡರಿಗೆ ಜೈಕಾರ ಹಾಕಿದ ಕಾರ್ಯಕರ್ತರು ಮುಖ್ಯಮಂತ್ರಿಗೆ ಮುಜುಗರ ತಂದ್ರು.

ಆ ಬಳಿಕ ಮಾಧ್ಯಮಗಳಲ್ಲಿ ಮಾತನಾಡಿದ ಮರಿಸ್ವಾಮಿ, ನಾನು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದು, ಮುಖ್ಯಮಂತ್ರಿ ಆದರೂ ನಮಗೇ ಏನು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ರು. ಸಿದ್ದರಾಮಯ್ಯ ಕೇವಲ ದಲಿತ ನಾಯಕರನ್ನು ತುಳಿದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಈಗಲೂ ಮುಂದಿನ ಮುಖ್ಯಮಂತ್ರಿ ದಲಿತರು ಎಂದು ಘೋಷಣೆ ಮಾಡಿದ್ರೆ ನಾನು ಸಿದ್ದರಾಮಯ್ಯ ಅವರನ್ನು ಬೆಂಬಲಿಸ್ತೀನಿ ಅಂದ್ರು. ಆದ್ರೆ ಸಿಎಂ ಸಿದ್ದರಾಮಯ್ಯ ಇರಲಾರದೆ ಇರುವೆ ಬಿಟ್ಟುಕೊಂಡರು ಎನ್ನುವ ಹಾಗೆ ಮಾತನಾಡಿಸಿ ಮುಜುಗರ ಅನುಭವಿಸಿದ್ರು. ಕೊನೆಗೆ ನಾನೆಲ್ಲೆಲ್ಲೋ ಮಾತನಾಡಿಸಿದೆ ಎಂದು ಸಿಎಂ ಹೇಳಿದ್ರೆ ನಾನೇನು ಮಾತಾಡಿಸಿ ಅಂತ ಹೇಳಿದ್ನಾ ಅಂತ ನೇರವಾಗಿ ಮುಖಕ್ಕೆ ಹೊಡೆದಂತೆ ಉತ್ತರ ಕೊಟ್ಟಿದ್ದಾರೆ ಮರಿಸ್ವಾಮಿ.

Leave a Reply