ಜನಾರ್ದನ ರೆಡ್ಡಿ ನಮ್ಮವನೇ ‘ಅಲ್ಲ’..!?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಜೈಲಿನಿಂದ ಬೇಲ್ ಮೇಲೆ ಹೊರಬಂದ ಬಳಿಕವೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಆಗದ ಸ್ಥಿತಿಗೆ ತಲುಪಿದ್ದು, ಮುಂದೇನು ಮಾಡಬೇಕು ಅನ್ನೋ ಗೊಂದಲದ ಸುಳಿಗೆ ಸಿಲುಕಿದ್ದಾರೆ. ಅದರಲ್ಲೂ ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಬಿಜೆಪಿ ಗೆಲ್ಲಿಸಲು ಪಣ ತೊಟ್ಟ ಬಳಿಕ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ‌ ನಾಯಕರು ಭಿನ್ನ ನಿಲುವು ತೆಗೆದುಕೊಂಡಿದ್ದು ಮುಂದೇನು ಮಾಡೋದು ಅನ್ನೋ ಚಿಂತೆಯಲ್ಲಿ‌ ಮುಳುಗಿದ್ದಾರೆ. ಮೊಳಕಾಲ್ಮೂರಿನಲ್ಲಿ ಹೊಸದಾಗಿ ಮಾಡಿರುವ ಮನೆಯಲ್ಲಿ ಠಿಕಾಣಿ ಹೂಡಿದ್ದು ಸ್ನೇಹಿತ ಶ್ರೀರಾಮುಲು ಹೊರತು ಪಡಿಸಿ ಬೇರೆ ಯಾರನ್ನೂ ಭೇಟಿ ಮಾಡಿಲ್ಲ.

ಬಳ್ಳಾರಿ ಪ್ರವಾಸವನ್ನೇ ರದ್ದು ಮಾಡಿದ ಶಾ..!

ಶುಕ್ರವಾರ ಬಳ್ಳಾರಿ ಹಾಗೂ ಕೊಪ್ಪಳದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ ನಿಗದಿಯಾಗಿತ್ತು. ಆದರೆ ಜನಾರ್ದನ ರೆಡ್ಡಿ ಭಾಗಿಯಾಗಿರೋದ್ರಿಂದ ಮುಜುಗರ ಅನುಭವಿಸಬೇಕಾಗುತ್ತೆ ಅನ್ನೋ ಕಾರಣಕ್ಕೆ ಪ್ರವಾಸವನ್ನೇ ಮೊಟಕು ಮಾಡಿ ಮಧ್ಯಾಹ್ನದ ಬಳಿಕ ಕೊಪ್ಪಳ ಜಿಲ್ಲಾ ಪ್ರವಾಸವನ್ನು ಮಾತ್ರ ಮಾಡಿದ್ರು. ಈ ನಡುವೆ ರೆಡ್ಡಿ ಬಳಗಕ್ಕೆ ಖಡಕ್ ಸಂದೇಶ ರವಾನಿಸಿದ ಅಮಿತ್ ಶಾ, ಯಾವುದೇ ಕಾರಣಕ್ಕೂ ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡೋದು ಬೇಡ ಎಂದು ತಿಳಿಸಿದ್ರು. ಇದರಿಂದ ಗೊಂದಲಕ್ಕೆ ಒಳಗಾದ ಜನಾರ್ದನ ರೆಡ್ಡಿ ದಿನಪೂರ್ತಿ ಮನೆ ಬಿಟ್ಟು ಹೊರಗೆ ಕಾಣಿಕೊಳ್ಳಲಿಲ್ಲ. ಮೊಳಕಾಲ್ಮೂರಿನ ಫಾರ್ಮ್ ಹೌಸ್‌ಗೆ ಬಂದ ಶ್ರೀರಾಮುಲು ನಡೆದ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ರು. ಜೊತೆಗೆ ಒಂದಷ್ಟು ಸಮಾಧಾನದ ಮಾತನಾಡಿ ತೆರಳಿದ್ರು.

ಅಮಿತ್ ಶಾ ನಿರ್ಧಾರ ವಿರೋಧಿಸಿದ್ರಾ ಬಿಎಸ್‌ವೈ..!?

ಬಿಎಸ್ ಯಡಿಯೂರಪ್ಪ ಜನಾರ್ದನ ರೆಡ್ಡಿ ಬಿಜೆಪಿ ಪರ ಪ್ರಚಾರ ಮಾಡಿದ್ರೆ ಆರೇಳು ಕ್ಷೇತ್ರದ ಫಲಿತಾಂಶ ನಮ್ಮ ಪರವಾಗಿ ಬರುತ್ತೆ ಎಂದು ಹೇಳುವ ಮೂಲಕ ಅಮಿತ್ ಶಾ ಸಂದೇಶಕ್ಕೆ‌ ಕೌಂಟರ್ ಕೊಡುವ ರೀತಿ‌ ಮಾತನಾಡಿದ್ದಾರೆ. ಈಗಾಗಲೇ ಮಗನಿಗೆ ವರುಣಾ ಟಿಕೆಟ್ ಕೈ ತಪ್ಪಿದ್ರಿಂದ ಕುಪಿತರಾಗಿರುವ ಯಡಿಯೂರಪ್ಪ ಕಮಲ ಹೈಕಮಾಂಡ್ ಮೇಲೆ‌ ಬಹಿರಂಗವಾಗಿ ಸಮರ ಸಾರುತ್ತಿದ್ದಾರಾ ಅನ್ನೊ ಮಾತುಗಳು ಮಾಧ್ಯಮ ಕಚೇರಿಯ ಮಾತಾಗಿದೆ. ಇನ್ನೊಂದು ಕಡೆ ಸ್ನೇಹಿತನಾಗಿ ನನ್ನ ಪರ ಜನಾರ್ದನ ರೆಡ್ಡಿ ಪ್ರಚಾರ ಮಾಡಿದ್ರೆ ತಪ್ಪೇನು ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ. ಅಮಿತ್ ಶಾ ಪ್ರಚಾರ ಮಾಡೋದು‌ ಬೇಡ ಎಂದು ಹೇಳಿದ ಬಳಿಕವೂ ಜನಾರ್ದನ ರೆಡ್ಡಿ ಒಂದು ವೇಳೆ ಪ್ರಚಾರ ಮಾಡಲು ಮುಂದಾದ್ರೆ, ರಾಜ್ಯದ ಬಿಎಸ್‌ವೈ ವಿರೋಧಿ ವಲಯದ ಬಿಜೆಪಿ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ಕಂಗಾಲಾಗೋದ್ರಲ್ಲಿ ಅನುಮಾನವಿಲ್ಲ. ಶ್ರಿ ರಾಮುಲು ನಾಮಪತ್ರ ಸಲ್ಲಿಸುವ ದಿನ ಇದ್ದ ಸಡಗರ‌, ಸಂಭ್ರಮ ಬಿಎಸ್‌ವೈ ಹಾಗೂ ರೆಡ್ಡಿ ಮುಖದ ಮಂದಹಾಸ ಅಮಿತ್ ಶಾರಿಂದ ಮಂಕಾಗಿದೆ. ಬಿಎಸ್ ಯಡಿಯೂರಪ್ಪ ನಿರ್ಧಾರಗಳಿಗೆ ಬ್ರೇಕ್ ಹಾಕುವ ಮೂಲಕ ಬಿಎಸ್‌ವೈ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡ್ತಿದೆ. ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್ ಶಾ ಹಾಗೂ ಬಿಎಸ್‌ವೈ ಎದುರಾಳಿ ಪಡೆ ಹೇಳ್ತಿದ್ರೆ, ರೆಡ್ಡಿ ಬಳಗ ನಮ್ಮದೇ, ಜನಾರ್ದನ ರೆಡ್ಡಿ ಪ್ರಚಾರದಿಂದ ಬಿಜೆಪಿ ಆರೇಳು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಯಡಿಯೂರಪ್ಪ ಟೀಂ ಸಾರುತ್ತಿದೆ. ಮುಂದೆ ಯಾವೆಲ್ಲಾ ನಿರ್ಧಾರ ತೆಗೆದುಕೊಳ್ತಾರೆ. ರೆಡ್ಡಿಗೆ ಮನೆಯೇ ಗತಿನಾ ಅಥವಾ ಅಖಾಡಕ್ಕೆ ಬರ‌್ತಾರಾ ಅನ್ನೋದನ್ನು ಕಾದು ನೋಡ್ಬೇಕು.

Leave a Reply