ಕರ್ನಾಟಕದಲ್ಲಿರೋದು ಬಿಜೆಪಿ ಅಲೆಯಲ್ಲ, ಸುಂಟರಗಾಳಿ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

 “ನಾನು ಇಲ್ಲಿಗೆ ಬರುವ ಮುನ್ನ, ಕರ್ನಾಟಕದಲ್ಲಿ ಬಿಜೆಪಿ ಅಲೆ ಇದೆ ಎಂದು ಕೇಳಿದ್ದೆ. ನಾನು ಈಗ ಇಲ್ಲಿಗೆ ಬಂದಿದ್ದೇನೆ, ಇದೀಗ ಅಲೆ ಇನ್ನಷ್ಟು  ಜೋರಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಲೆ ಇಲ್ಲ, ಬದಲಾಗಿ ಸುಂಟರಗಾಳಿ ಇದೆ” ಇದು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಹೇಳಿದ ಮಾತು.

ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಾ ರಾಜ್ಯದ ಜನತೆ ತಮ್ಮ ಪಕ್ಷದ ಮೇಲಿಟ್ಟಿರುವ ಭರವಸೆಯನ್ನು ಬಣ್ಣಿಸಿದರು. ಮೋದಿ ಭಾಷಣದ ಪ್ರಮುಖ ಅಂಶಗಳು ಹೀಗಿವೆ…

 • ಕರ್ನಾಟಕದ ಜನತೆಯ ಭರವಸೆಯಾಗಿರುವ ಬಿ ಎಸ್‌ ಯಡಿಯೂರಪ್ಪ ಭವಿಷ್ಯದ ಮುಖ್ಯಮಂತ್ರಿ ಯಾಗಲಿದ್ದಾರೆ.
 • ಏಪ್ರಿಲ್‌ 28ರಂದು ದೇಶದ ಎಲ್ಲ ಗ್ರಾಮಗಳು ವಿದ್ಯುದೀಕರಣವಾಗಿದೆ. ಇದರ ಹಿಂದಿನ  ಪರಿಶ್ರಮಕ್ಕಾಗಿ ಎಲ್ಲ ಶ್ರಮಿಕರು ಹಾಗು ಕಾರ್ಮಿಕರಿಗೆ ಧನ್ಯವಾದ ಸಲ್ಲಿಸುತ್ತೇನೆ.
 • 2009ರ ಒಳಗೆ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್‌ ಒದಗಿಸುವುದಾಗಿ, ಸೋನಿಯಾ ಗಾಂಧಿ ಸರಕಾರದ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದರು. ಆದರೆ ಏನಾಯಿತು? ಸುಗ್ರೀವಾಜ್ಞೆಯನ್ನೇ ಹರಿಸುಹಾಕಿ ಖುದ್ದು ಮನಮೋಹನ್‌ ಸಿಂಗ್‌ರನ್ನೇ ಅವಮಾನಿಸಿದ ಕಾಂಗ್ರೆಸ್‌ ಮಾಜಿ ಪ್ರಧಾನಿಯನ್ನು ನಡೆಸಿಕೊಂಡ ರೀತಿಯನ್ನು ನಾವು ನೋಡಿದ್ದೇವೆ.
 • ನಿಮ್ಮ ಸರಕಾರದ ಸಾಧನೆಗಳ ಕುರಿತು, ಕೈಯಲ್ಲಿ ಯಾವುದೇ ಕಾಗದ ಇಟ್ಟುಕೊಳ್ಳದೇ 15 ನಿಮಿಷಗಳಲ್ಲಿ ಹೇಳಬಲ್ಲಿರಾ?
 • ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ. ಗೌರವಾನ್ವಿತ ಲೋಕಾಯುಕ್ತರೇ ಸುರಕ್ಷಿತವಲ್ಲ ಎಂದ ಮೇಲೆ ಸಾಮಾನ್ಯ ಜನತೆ ಹೇಗೆ ಸುರಕ್ಷಿತವಾಗಿರಲು ಸಾಧ್ಯ?
 • ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮನೆಗಳಲ್ಲಿ ಎಷ್ಟು ಹಣ ದೊರಕಿದೆ ಎಂದು ಗೊತ್ತೇ? ಈ ಹಣವೆಲ್ಲಾ ಯಾರಿಗೆ ಸೇರಬೇಕೋ ಅವರಿಗೇ ಮರಳಿಸುವ ಸಮಯ ಬರುತ್ತಿದೆ.
 • ಮೇ 12ರಂದು ಕರ್ನಾಟಕದ ಜನತೆ ತಮ್ಮ ಶಾಸಕರನ್ನು ಆಯ್ಕೆ ಮಾಡಲು ಮತದಾನ ಮಾಡುತ್ತಿಲ್ಲ. ರಾಜ್ಯದ ಭವಿಷ್ಯ ಹಾಗು ಮುಂದಿನ ಹಾದಿಯನ್ನು ಜನತೆ ನಿರ್ಧರಿಸಲಿದ್ದಾರೆ.
 • 10% ಕಮಿಷನ್‌ ಸರಕಾರ ಎಷ್ಟರಮಟ್ಟಿನ ಧ್ವಂಸ ಮಾಡಿದೆ ಎಂದು ಕರ್ನಾಟಕದ ಜನತೆ ಚೆನ್ನಾಗಿ ತಿಳಿದಿದ್ದಾರೆ.
 • ಸ್ವಚ್ಛ, ಸುಂದರ ಹಾಗು ಸುರಕ್ಷಿತ ಕರ್ನಾಟಕವೇ ಬಿಜೆಪಿಯ ಗುರಿಯಾಗಿದೆ.
 • ರೈತರ ಜೀವನಮಟ್ಟ ಸುಧಾರಿಸಲು ಎನ್‌ಡಿಎ ಸರಕಾರ ಪ್ರಯತ್ನಿಸುತ್ತಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳಿಂದ ಕರ್ನಾಟಕದ ರೈತರಿಗೆ ಸಾಕಷ್ಟು ಅನುಕೂಲ ದೊರೆತಿದೆ.
 • ಚಾಮರಾಜನಗರದ ಜನತೆಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇಲ್ಲಿನ ಪ್ರವಾಸೋದ್ಯಮದ ಸಾಧ್ಯತೆಯನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ರಾಜ್ಯ ಸರಕಾರ ಏನು ಮಾಡುತ್ತಿದೆ?
 • ಎಲ್ಲೆಲ್ಲಿ ಕಾಂಗ್ರೆಸ್‌ ಇದೆಯೋ, ಅಲ್ಲೆಲ್ಲಾ ಅಭಿವೃದ್ಧಿಯ ಪಥಗಳು ಮುಚ್ಚಿಹೋಗಿವೆ. ಅಲ್ಲೆಲ್ಲಾ ಬರಿ ಭ್ರಷ್ಟಾಚಾರ ಹಾಗು ಸಾಮರಸ್ಯದ ಕೊರತೆ ಇದೆ.
 • ಕಾಂಗ್ರೆಸ್‌ನಲ್ಲಿ ಹೆಸರುಗಳ ಆರ್ಭಟದ ಮುಂದೆ ಕಾರ್ಯಕರ್ತರ ದನಿ ಅಡಗಿಹೋಗಿದೆ.
 • ಕರ್ನಾಟಕದ ನಿದ್ದೆ ಮುಖ್ಯಮಂತ್ರಿ ಇದೀಗ ಕುಟುಂಬ ರಾಜಕಾರಣಕ್ಕೆ ಮುಂದಾಗಿದ್ದಾರೆ.  ಸೋಲಿನ ಭೀತಿ ಇರುವ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಫರ್ಧಿಸುತ್ತಿದ್ದು, ತಾವು ಸ್ಫರ್ಧಿಸುತ್ತಿದ್ದ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಕಣಕ್ಕಿಳಿಸಿದ್ದಾರೆ.
 • ಸದಾ ನಮ್ಮ ಮೇಲೆ ಗೂಬೆ ಕೂರಿಸುತ್ತಾ ಕೂರುವವರಿಗೆ, ದೇಶದಲ್ಲಿ ಇನ್ನೂ ನಾಲ್ಕು ಕೋಟಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲವೆಂದು ತಿಳಿದಿಲ್ಲ. ಇದೇ ಕಾರಣಕ್ಕೆ ನಾವು ಭಾಗ್ಯಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದೇವೆ.

Leave a Reply