ಗೌಡರನ್ನು ಹೊಗಳಿದ್ದ ಮೋದಿಯಿಂದ ಜೆಡಿಎಸ್ ಗೆ ಗುನ್ನ!

ಡಿಜಿಟಲ್ ಕನ್ನಡ ಟೀಮ್:
ಮೊನ್ನೆ ಮಾಜಿ ಪ್ರಧಾನಿ ದೇವೇಗೌಡರನ್ನು ಯದ್ವಾತದ್ವಾ ಹೊಗಳಿದ್ದ ಪ್ರಧಾನಿ ನರೇಂದ್ರ ಮೋದಿ ಇವತ್ತು ಜೆಡಿಎಸ್ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಶಕ್ತಿ ಜೆಡಿಎಸ್ ಗೆ ಇಲ್ಲ. ಅದೇನಿದ್ದರೂ ಮೂರನೇ ಸ್ಥಾನದಲ್ಲಿ ಕುಂಟುತ್ತಾ-ತೆವಳುತ್ತಾ ಸಾಗುತ್ತಿದೆ. ಇಲ್ಲಿ ಪರ್ಯಾಯ ಸರಕಾರ ರಚನೆ ತಾಕತ್ತು ಇರೋದು ಬಿಜೆಪಿಗೆ ಮಾತ್ರ. ಹೀಗಾಗಿ ಜೆಡಿಎಸ್ ಗೆ ಮತ ಹಾಕುವ ಮೂಲಕ ನಿಮ್ಮ ಹಕ್ಕನ್ನು ವ್ಯರ್ಥ ಮಾಡಬೇಡಿ ಎಂದು ಬೆಂಗಳೂರಿನಲ್ಲಿ ಗುರುವಾರ ಬಿಜೆಪಿ ಸಮಾವೇಶದಲ್ಲಿ ತಿಳಿಸಿದರು.
ಅವರು ಒಟ್ಟಾರೆ ಹೇಳಿದ್ದಿಷ್ಟು: ಜೆಡಿಎಸ್ ಗೆ ಸರಕಾರ ರಚಿಸುವ ತಾಕತ್ತಾಗಲಿ, ಕಾಂಗ್ರೆಸ್ ಸರಕಾರ ತೆಗೆಯುವ ಸಾಮರ್ಥ್ಯವಾಗಲಿ ಇಲ್ಲ. ಅದಿರುವುದು ಬಿಜೆಪಿಗೆ ಮಾತ್ರ. ಹೀಗಾಗಿ ಜೆಡಿಎಸ್ ಗೆ ವೋಟ್ ಮಾಡಬೇಡಿ. ಮತ ಅಪವ್ಯಯ ಮಾಡಬೇಡಿ. ಹಲವು ರಾಜ್ಯಗಳಲ್ಲಿ ಸೋಲುವ ಭೀತಿ ಎದುರಿಸುತ್ತಿದ್ದ ಕಾಂಗ್ರೆಸ್ ಆಗೆಲ್ಲ ಅತಂತ್ರ ಸರಕಾರ ಪರಿಸ್ಥಿತಿ ಬಗ್ಗೆ ಅಪಪ್ರಚಾರ ಮಾಡುತ್ತದೆ. ಕಾಂಗ್ರೆಸ್ ಹಾಗೆ ಅಪಪ್ರಚಾರ ಮಾಡುತ್ತಿದೆ ಎಂದರೆ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದೇ ಅರ್ಥ. ಹೀಗಾಗಿ ನಿಮ್ಮ ಮತವನ್ನು ಬಿಜೆಪಿಗೆ ಹಾಕಿ. ಸದೃಢ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಿ.
ಕರ್ನಾಟಕದ ಮುಖ್ಯಮಂತ್ರಿ, ಅವರ ಸಂಪುಟದ ಮಂತ್ರಿಗಳೆಲ್ಲರೂ ಸೋಮಾರಿಗಳು. ಅವರಿಗೆ ಸದೃಢ ರಾಜ್ಯ ನಿರ್ಮಾಣದ ಬಗ್ಗೆ ಅಸ್ಥೆಯೂ ಇಲ್ಲ, ಆಸಕ್ತಿಯೂ ಇಲ್ಲ. ಕಮಿಷನ್ ನೆಪದಲ್ಲಿ ಬರೀ ಲೂಟಿ ಮಾಡುವುದಷ್ಟೇ ಅವರ ಕಾಯಕ. ಇಂಥವರು ನಿಮಗೇ ಬೇಕೇ?
ಬೆಂಗಳೂರು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರಕಾರ ಅನೇಕ ಅನುದಾನಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ಸರಕಾರ ಅದನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಬದಲಿಗೆ ಕೇಂದ್ರದ ಮೇಲೆ ಗೂಬೆ ಕೂರಿಸಿ ತನ್ನ ಹೊಣೆಗೇಡಿತನ ಮರೆಮಾಚಿಕೊಳ್ಳಲು ಯತ್ನಿಸುತ್ತಿದೆ. ಅಂಥ ಕಾಂಗ್ರೆಸ್ ಸರಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಕಿತ್ತೊಗೆಯಿರಿ.

Leave a Reply