ಜೆಡಿಎಸ್ ಗೆ ಅಂಬಿ ಬಲ?

ಡಿಜಿಟಲ್ ಕನ್ನಡ ಟೀಮ್:
ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಮಹತ್ವ ಪಡೆದಿರುವ ಮಂಡ್ಯ ಜಿಲ್ಲೆಯ ರಾಜಕಾರಣ ಈ ಬಾರಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಣ ಸ್ಪರ್ಧೆ ಇರುವ ಈ ಕ್ಷೇತ್ರದಲ್ಲಿ ಈ ಬಾರಿಯ ಚಿತ್ರಣ ಸಂಪೂರ್ಣ ಬದಲಾಗಿದ್ದು, ಕಾಂಗ್ರೆಸ್ ಟಿಕೆಟ್ ನಿರಾಕರಿಸಿರುವ ರೆಬಲ್ ಸ್ಟಾರ್ ಅಂಬರೀಶ್, ಜೆಡಿಎಸ್ ಗೆ ಬೆಂಬಲ ಸೂಚಿಸುತ್ತಿದ್ದಾರಾ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ಇದಕ್ಕೆ ಕಾರಣವಾಗಿರೋದು, ಶನಿವಾರ ರಾತ್ರಿ ಅಂಬರೀಶ್ ತಮ್ಮ ನಿವಾಸದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು. ಈ ಸಭೆಯಲ್ಲಿ ಏನು ಚರ್ಚೆ ಮಾಡಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಚುನಾವಣೆ ಹೊತ್ತಲ್ಲಿ ರಾಜಕೀಯ ಹೊರತಾಗಿ ಕಷ್ಟ ಸುಖ ಮಾತನಾಡಲು ಈ ಇಬ್ಬರು ಭೇಟಿ ಮಾಡಿರುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಅಂಬರೀಶ್ ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿ ಜೆಡಿಎಸ್ ಗೆ ಬೆಂಬಲ ಸೂಚಿಸುವ ಲಕ್ಷಣಗಳು ಕಾಣುತ್ತಿದೆ.
ನಿಜ, ಅಂಬರೀಶ್ ಅವರ ಇತ್ತೀಚಿನ ನಡೆ ಹಾಗೂ ಸೋರಿಕೆಯಾದ ಅಂಬಿ ಮತ್ತು ಸಿದ್ದರಾಮಯ್ಯನವರ ನಡುವಣ ದೂರವಾಣಿ ಸಂಭಾಷಣೆ ರೆಬಲ್ ಸ್ಟಾರ್, ಕೈ ಪಾಳೆಯದ ವಿರುದ್ಧ ಮುನಿಸಿಕೊಂಡಿರುವುದನ್ನು ಸಾಬೀತುಪಡಿಸುತ್ತದೆ. ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಮುನಿದಿದ್ದ ಅಂಬಿಯನ್ನು ಸಮಾಧಾನಪಡಿಸಲು ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದರು. ಇದಾದ ನಂತರವೂ ಪಕ್ಷದಲ್ಲಿ ತನ್ನ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂಬುದನ್ನು ಅರಿತ ಅಂಬಿ ಸಹಜವಾಗಿಯೇ ಆರೋಗ್ಯ ಕಾರಣವನ್ನು ಮುಂದಿಟ್ಟುಕೊಂಡು ಮನೆ ಬಾಗಿಲಿಗೆ ಬಂದಿದ್ದ ಕಾಂಗ್ರೆಸ್ ಟಿಕೆಟ್ ಅನ್ನು ತಮ್ಮ ಎಡಗಾಲಿನಿಂದ ಒದ್ದಿದ್ದರು.
ಈ ಬೆಳವಣಿಗೆ ನಡೆಯುತ್ತಿರುವ ಹೊತ್ತಲ್ಲೇ ಅತ್ತ ಕುಮಾರಸ್ವಾಮಿ ಅಂಬರೀಶ್ ಅವರು ರಾಜಕೀಯದಿಂದ ನಿವೃತ್ತಿ ಪಡೆಯುವುದು ಅಸಾಧ್ಯದ ಮಾತು ಎಂಬ ಹೇಳಿಕೆ ಅಂಬಿ ಹಾಗೂ ಜೆಡಿಎಸ್ ಬಾಂಧವ್ಯ ಬೆಸುಗೆಯ ಸೂಚನೆ ನೀಡಿತ್ತು. ಈಗ ಅಂಬಿ ಹಾಗೂ ಎಚ್ ಡಿಕೆ ಭೇಟಿ ಅದನ್ನು ಮತ್ತಷ್ಟು ಬಲವಾಗುವಂತೆ ಮಾಡಿದೆ.
ಒಂದು ವೇಳೆ ಅಂಬರೀಶ್ ಚುನಾವಣೆಯಲ್ಲಿ ಜೆಡಿಎಸ್ ಗೆ ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿ ಬೆಂಬಲ ನೀಡಿದ್ದೇ ಆದರೆ ಮಂಡ್ಯದಲ್ಲಿ ಜೆಡಿಎಸ್ ಮುಂದೆ ಕಾಂಗ್ರೆಸ್ ನಿಲ್ಲುವುದು ಅಸಾಧ್ಯವಾಗಲಿದೆ. ಈವರೆಗೂ ಜಿಲ್ಲೆಯಲ್ಲಿ ಎಸ್.ಎಂ ಕೃಷ್ಣ ಹಾಗೂ ಅಂಬರೀಶ್ ಮೂಲಕ ನಿಯಂತ್ರಣ ಹೊಂದಿದ್ದ ಕಾಂಗ್ರೆಸ್ ಈಗ ಇಬ್ಬರೂ ಒಕ್ಕಲಿಗ ನಾಯಕರನ್ನು ಕಳೆದುಕೊಂಡಿದೆ. ಈಗ ಕಾಂಗ್ರೆಸ್ ಹಾಗೂ ಮಂಡ್ಯದ ನಡುವೆ ಸಂಪರ್ಕ ಕೊಂಡಿಯಾಗಿರುವುದು ನಾಗಮಂಗಲದ ಶಾಸಕ ಚಲುವರಾಯಸ್ವಾಮಿ ಮಾತ್ರ. ಜೆಡಿಎಸ್ ಗೆ ದ್ರೋಹ ಬಗೆದಿರುವ ಆರೋಪ ಹೊತ್ತಿರುವ ಚೆಲುವರಾಯಸ್ವಾಮಿಯನ್ನು ನಾಗಮಂಗಲದ ಜನರೇ ಒಪ್ಪಿಕೊಳ್ಳುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಈ ಚುನಾವಣೆ ಫಲಿತಾಂಶದರೆಗೂ ಕಾಯಬೇಕಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗುವುದರಲ್ಲಿ ಅನುಮಾನವೇ ಇಲ್ಲ.

Leave a Reply