ದೇವೇಗೌಡರು ನನ್ನನ್ನು ಬೆಳೆಸಿಲ್ಲ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

‘ಮಾಜಿ ಪ್ರಧಾನಿ ದೇವೇಗೌಡರು ನನನ್ನು ಬೆಳೆಸಿಲ್ಲ . ನಾನು ರಾಜಕೀಯ ಪ್ರವೇಶಿಸಿದ್ದು ಸಮಾಜವಾದಿ ಪಕ್ಷದ ಮೂಲಕ’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಗತಿ ಕುರಿತು ನೀಡಿರುವ ಹೇಳಿಕೆ.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು… ‘ನಾನು ರಾಜಕೀಯವನ್ನು ಸಮಾಜವಾದಿ ಪಕ್ಷದ ಮೂಲಕ ಪ್ರವೇಶಿಸಿದ್ದೇನೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಹೇಳುತ್ತಿರುವಂತೆ ಜೆಡಿಎಸ್ ರಾಜಕೀಯ ಪ್ರತಿ ಸ್ಪರ್ಧಿಯಲ್ಲ, ಅದಕ್ಕೆ ಅಸ್ಥಿತ್ವವೇ ಇಲ್ಲ.

ಪ್ರಧಾನಿ ಮೋದಿ ಅವರ ಬಗ್ಗೆ ಅಪಾರವಾದ ಗೌರವವಿದೆ. ಆದರೆ ಅವರು ತಮ್ಮ ಸ್ಥಾನಕ್ಕೆ ಗೌರವ ತರುವಂತೆ ಮಾತನಾಡಬೇಕು. ಅವರು ಕೀಳುಮಟ್ಟದಲ್ಲಿ ಮಾತಾನಾಡಿದರೆ, ನಾವು ಅದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ. ಅಡ್ವಾಣಿ, ಯಶವಂತ್ ಸಿನ್ಹಾ ಅಂಥವರಿಗೆ ಮೋದಿ ಗೌರವ ನೀಡಿಲ್ಲ. ಈ ಹಿಂದೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸಬೇಕು ಎಂದು ಮೋದಿ ಹೇಳಿದ್ದರು. ಆದರೀಗ ಚುನಾವಣೆಗಾಗಿ ಈ ದೇವೇಗೌಡರ ಬಗ್ಗೆ ಮಾತನಾಡುತ್ತಿದ್ದಾರೆ. ಎರಡು ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಅನೇಕ ಊಹಾಪೋಹಗಳು ಕೇಳಿ ಬರುತ್ತಿವೆ. ಆದರೆ ಉತ್ತರ ಕರ್ನಾಟಕದ ಜನರು ಹಾಗೂ ಹೈಕಮಾಂಡ್ ಸೂಚನೆ ಮೇರೆಗೆ ಬಾದಾಮಿಯಿಂದ ಸ್ಪರ್ಧಿಸುತ್ತಿದ್ದೇನೆ ಹೊರೆತು, ಸೋಲುವ ಭೀತಿಯಿಂದಲ್ಲ. ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಟೇಕ್ ಆಫ್ ಆಗಿಲ್ಲವೆಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದ ಜನತೆಗೆ ಅನೇಕ ಯೋಜನೆ ನೀಡಿದ್ದಾರೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದ ಗತಿ ಏನಾಗಿದೆ? ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ ವಿರುದ್ಧ ಅನೇಕ ಕ್ರಿಮಿನಲ್ ಮೊಕದ್ದಮೆಗಳಿವೆ. ಅದರ ವಿರುದ್ಧ ಏಕೆ ಮಾತನಾಡುವುದಿಲ್ಲ?’

Leave a Reply