ಸಿಎಂ ಪಟ್ಟದ ಕನಸಿನ ವಾರಸುದಾರರು ಯಾರು?

ಕರ್ನಾಟಕ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಜನ ಮತ್ತು ನಾಯಕರ ಕುತೂಹಲದ ಚುಂಗನ್ನು ಹಿಡಿದೆಳೆದೆಳೆದು ಜಗ್ಗುತ್ತಿದೆ. ಕಳೆದೈದು ವರ್ಷದ ಕರ್ತವ್ಯವಿಮುಖ ದೇಹಾಲಸ್ಯ ನಿವಾಳಿಸಿ ಬಿಸಾಡುವಂತೆ ಒಂದೂವರೇ ತಿಂಗಳಿಂದ ನಾನಾ ರಾಜಕೀಯ ಪಕ್ಷಗಳ ಮುಖಂಡರು ಹಗಲಿರುಳು ಬಿಡುವಿಲ್ಲದಂತೆ ಸುರಿಸಿರುವ ಬೆವರ ಹನಿ ಮುತ್ತಾಗುವುದೋ ಇಲ್ಲವೇ ಅವರ ಮೊಗದ ಮೇಲೆ ಮತ್ತಷ್ಟು ಹನಿಗಳನ್ನು ಕೂಗಿ ಕರೆಯುವುದೋ ಎಂದರಿಯಲು ಇನ್ನೆಂಟು ದಿನ ಮಾತ್ರ ಬಾಕಿ ಉಳಿದಿದೆ.
ಎಲ್ಲ ಪಕ್ಷಗಳ ನಾಯಕರೂ ಭರವಸೆ ಮತ್ತು ವಿಶ್ವಾಸದ ಕಡಲಲ್ಲಿ ಮುಳುಗೇಳುತ್ತಿದ್ದಾರೆ. ಅಲ್ಲಿ ಕಾಣುತ್ತಿರುವ ಸಾಲು ಅಲೆಗಳೆಲ್ಲವೂ ಅವರನ್ನು ವಿಧಾನಸೌಧದ ಮೂರನೇ ಮಹಡಿಗೆ ಕರೆದೊಯ್ದಂತೆ ಭಾಸವಾಗುತ್ತಿದೆ. ಕನಸು ಯಾರಪ್ಪನ ಆಸ್ತಿಯೂ ಅಲ್ಲ. ಹೀಗಾಗಿ ಯಥೇಚ್ಛವಾಗಿ ಕಾಣಬಹುದು. ಆದರೆ ಮೂರು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಿಗೂ ಒಂದೇ ಕನಸು ಬೀಳುತ್ತಿದ್ದು, ಅದರ ಒಡೆಯರು ತಾವೇ ಎಂಬುದನ್ನು ರುಜುವಾತು ಮಾಡಿಕೊಳ್ಳಲು ಪರಸ್ಪರರನ್ನು ಚಿವುಟಿಕೊಳ್ಳುತ್ತಿದ್ದಾರೆ. ಮೂವರಿಗೂ ಒಂದೇ ಅನುಭವ. ಹೀಗಾಗಿ ಕನಸಿನ ಹಿತಭಾವ ಚಿವುಟಿಕೆಯ ಮಿತನೋವಿನಲ್ಲಿ ಕರಗಿ ಹೋಗುತ್ತಿರುವುದರಿಂದ ಅಲ್ಲೊಂದು ಭ್ರಮಾಲೋಕ ಸೃಷ್ಟಿಯಾಗಿದ್ದು, ಎಲ್ಲರೂ ಅದರಲ್ಲಿ ಈಸುತ್ತಿದ್ದಾರೆ, ವಿಧಾನಸೌಧದ ಕಡೆಗೆ ಕೈ ಬೀಸುತ್ತಿದ್ದಾರೆ.
ನಿಜ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಹಿಡಿಯಲೇ ಆಗುತ್ತಿಲ್ಲ. ಎಲ್ಲ ಪಕ್ಷಗಳ ಮುಖಂಡರೂ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲು ಈಗಾಗಲೇ ಸೂಟುಬೂಟಿಗೆ ಆರ್ಡರ್ ಕೊಟ್ಟುಬಿಟ್ಟಿದ್ದಾರೆ. ಅಧಿಕಾರ ಹಿಡಿಯುವ ವಿಚಾರದಲ್ಲಿ ಮನಸ್ಸಿನೊಳಗೆ ಏನಿದೆಯೋ ಎಂತೋ  ಗೊತ್ತಿಲ್ಲ. ಆದರೆ ಎಲ್ಲರ ಬಾಯಲ್ಲೂ ಅಧಿಕಾರದ ರಾಕೆಟ್ ಉಡಾವಣೆಯಾಗುತ್ತಿದೆ. ಈ ಬಾರಿ ಅಧಿಕಾರ ತಮ್ಮದೇ, ಬೇರೆ ಯಾರಿಗೂ ಇಲ್ಲ. ಈ ವಿಚಾರದಲ್ಲಿ ತಾವು ಹೇಳುತ್ತಿರುವುದೇ ಸತ್ಯ, ಅನ್ಯರದು ಮಿಥ್ಯ ಎಂಬ ಅಧಿಕಾರ ಭ್ರಮಾಧೀನ ವರ್ತುಲದೊಳಗೆ ಪರಿಭ್ರಮಣ ಮಾಡುತ್ತಿದ್ದಾರೆ. ಆದರೆ ಈ ವರ್ತುಲವನ್ನು ಶೂನ್ಯವಾಗಿ ಪರಿವರ್ತಿಸುವ ಶಕ್ತಿಯೊಡೆಯರಾದ ಮತದಾರರು ಎಲ್ಲರ ಆಟಾಟೋಪಗಳನ್ನು ಹುಸಿನಗೆಬೆರೆತ ವಾರೆನೋಟದಿಂದಲೇ ನೋಡಿ ಮನರಂಜನೆ ತೆಗೆದುಕೊಳ್ಳುತ್ತಿದ್ದಾರೆ.
ಮೊದಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿಚಾರ ತೆಗೆದುಕೊಳ್ಳೋಣ. ಮೇ 17 ರಂದು ಗುರುವಾರ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದು ಸೂರ್ಯಚಂದ್ರರಷ್ಟೇ ಸತ್ಯ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ತಾವು ಹೇಳುತ್ತಿರುವ ಮಾತನ್ನು ಬರೆದಿಟ್ಟುಕೊಳ್ಳಿ ಎಂದು ಹೇಳುತ್ತಿದ್ದಾರೆ. ಅವರ ಮಾತಿನಲ್ಲಿ ಅದೆಂಥ ಅದಮ್ಯ ವಿಶ್ವಾಸ ಇದೆಯೆಂದರೆ, ‘ಮೇ 17 ರಂದು ಗುರುವಾರವೇ ಏಕೆ’ ಎಂದು ಯಾರಾದರೂ ತಿರುಗಿಸಿ ತಮಾಷೆಗಾಗಿ ಪ್ರಶ್ನೆೆ ಕೇಳಿದರೆ ಬಹಳ ಮುಗ್ಧವಾಗಿ ಹೇಳುತ್ತಾರೆ; ‘ಗುರುವಾರ ರಾಯರ ದಿನ. ನನ್ನ ಪಾಲಿನ ಅದೃಷ್ಟದ ದಿನ. ಹೀಗಾಗಿ ಪ್ರಮಾಣ ವಚನ ಸ್ವೀಕಾರವನ್ನು ಅವತ್ತಿಗೇ ಫಿಕ್ಸ್ ಮಾಡಿದ್ದೇನೆ’ ಎಂದು. ಯಡಿಯೂರಪ್ಪನವರ ಈ ವಿಶ್ವಾಸದ ಮಟ್ಟಕ್ಕೆೆ ಏಣಿ ಹಾಕೋದಿಕ್ಕೂ ಸಾಧ್ಯವಿಲ್ಲ. ಅಷ್ಟೆತ್ತರದಲ್ಲಿದೆ ಅದು. ಒಂದೇ ಕಲ್ಲಲ್ಲಿ, ಒಂದೇ ಬೀಸಿಗೆ ಇಡೀ ಮರದ ಮಾವಿನ ಹಣ್ಣುಗಳನ್ನು ಉದುರಿಸುವ ವಿಶ್ವಾಸ ಅವರ ಮಾತುಗಳೇ ನಾಚಿ ನೀರಾಗುವಂತೆ ಮಾಡಿದೆ.
ಅಲ್ಲ, ಮೊನ್ನೆೆ, ಮೊನ್ನೆೆವರೆಗೂ ಪ್ರಧಾನಿ ಮೋದಿ ಬಂದು ಗುದ್ದುವವರೆಗೂ ಬಿಜೆಪಿ ಬೋಗಿ ಅಲ್ಲಾಡಿರಲಿಲ್ಲ. ಆರೇಳು ತಿಂಗಳಿಂದ ಅಮಿತ್ ಶಾ ಅವರು ಹತ್ತಾರು ಬಾರಿ ದಿಲ್ಲಿಯಿಂದ ಕರ್ನಾಟಕಕ್ಕೆೆ ದಂಡಯಾತ್ರೆೆ ಕೈಗೊಂಡಿದ್ದರೂ ರಾಜ್ಯ ಬಿಜೆಪಿ ನಾಯಕರ ಕೆಮಿಸ್ಟ್ರಿಯೇ ಅರ್ಥ ಆಗಿರಲಿಲ್ಲ. ಅವರು ಎಷ್ಟೇ ಕೆಮ್ಮಿದರೂ, ಕೆಮ್ಮಿನ ಔಷಧಿ ಕುಡಿದರೂ ರಾಜ್ಯ ಬಿಜೆಪಿಗೆ ತಗುಲಿದ್ದ ಆಲಸ್ಯ ಜಾಡ್ಯ ಮಾತ್ರ ನಿವಾರಣೆ ಆಗಿರಲಿಲ್ಲ. ಅಮಿತ್ ಶಾ ದಂಡಯಾತ್ರೆೆ ನಿಜಕ್ಕೂ ದಂಡವಾಗಿತ್ತು. ರಾಜ್ಯ ನಾಯಕರ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಸಮನ್ವಯದ ಕೊರತೆ, ಆ ಜಾಗದಲ್ಲಿ ಲಾವಾರಸದಂತೆ ಉಕ್ಕಿ ಹರಿಯುತ್ತಿದ್ದ ದ್ವೇಷಾಸೂಯೆ, ಸೇಡು, ಅಸಹಿಷ್ಣುತೆ, ಅಸಹಕಾರ ಬಿಜೆಪಿಯನ್ನು ಪ್ಲಗ್ಗಿಲ್ಲದ ಲ್ಯಾಂಬ್ರೆೆಟಾ ಸ್ಕೂಟರನ್ನು ಕಿಕ್‌ಸ್ಟಾರ್ಟ್ ಮಾಡಲು ಯತ್ನಿಸಿದಂತಿತ್ತು. ಅಂಥ ಬಿಜೆಪಿಗೆ ನಿಜಕ್ಕೂ ಟಾನಿಕ್ ಸಿಕ್ಕಿರುವುದು ಮೋದಿ ರಾಜ್ಯದಲ್ಲಿ ನಡೆಸಿರುವ ಸಾಲು ಸಮಾವೇಶಗಳ ನಂತರ.
ನಾಲ್ಕೂಮುಕ್ಕಾಲು ವರ್ಷಗಳಿಂದ ರಸ್ಟು ಹಿಡಿದು ಹೋಗಿದ್ದ ಬಿಜೆಪಿ ನೊಗ ಹೊತ್ತು ರಾಜ್ಯಾದ್ಯಂತ ಸುಂಟರಗಾಳಿಯಂತೆ ತಿರುಗಿರುವ ಯಡಿಯೂರಪ್ಪನವರಿಗೆ ಮೋದಿ ಮ್ಯಾಜಿಕ್, ಚಮಕ್ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆೆ ನಿತಾಂತವಿಲ್ಲ. ಹೀಗಿರುವಾಗಿ ಯಡಿಯೂರಪ್ಪನವರು ಈಗಾಗಲೇ ಸಿಎಂ ಸ್ಥಾನದಲ್ಲಿ ತಮ್ಮನ್ನು ಪ್ರತಿಷ್ಠಾಪನೆ ಮಾಡಿಟ್ಟುಕೊಂಡಿರುವುದರ ಹಿಂದಿನ ವಿಶ್ವಾಸವನ್ನು ಮೆಚ್ಚತಕ್ಕದ್ದೇ!
ಯಡಿಯೂರಪ್ಪನವರು 1999 ರ ಚುನಾವಣೆ ಮುಗಿದ ಮರುದಿನವೇ ಬೆಂಗಳೂರಿನ ಯಶವಂತಪುರದ ಗೋಪಾಲ್ ಚಿತ್ರಮಂದಿರದ ಹಿಂದಿನ ಛತ್ರದಲ್ಲಿ ಬಿಜೆಪಿ ಮುಖಂಡರ ಸಭೆ ಕರೆದು ತಮ್ಮನ್ನು ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿದ್ದಲ್ಲದೇ ಇತರ ಮುಖಂಡರಿಗೂ ಇಂತಿಂಥ ಮಂತ್ರಿ ಸ್ಥಾನ ಎಂದು ಸಂಪುಟದ ಖಾತೆಗಳನ್ನು ಹಂಚಿಕೆ ಮಾಡಿಬಿಟ್ಟಿದ್ದರು. ಇದಾದ ಎರಡೇ ದಿನದಲ್ಲಿ ಫಲಿತಾಂಶ ಬಂದು ಯಡಿಯೂರಪ್ಪನವರು ಸಿಎಂ ಆಗೋದಿರಲಿ, ಪ್ರತಿಪಕ್ಷ ನಾಯಕನೂ ಆಗಲಿಲ್ಲ. ಕಾರಣ ಚುನಾವಣೆಯಲ್ಲಿ ಸ್ವತಃ ತಾವೇ ಸೋತು ಮಲಗಿದ್ದರು. ಒಂದೊಂದು ಸಾರಿ ಅತಿಯಾದ ಆತ್ಮವಿಶ್ವಾಸ ಈ ರೀತಿಯಾಗಿಯೂ ಕೈಕೊಡುತ್ತೆೆ ಅನ್ನೋದಕ್ಕಷ್ಟೇ ಈ ಉಲ್ಲೇಖ. ಆದರೆ ಈ ಬಾರಿಯೂ ಅದೇ ರೀತಿ ಆಗುತ್ತದೆ ಎಂದು ಇದರ ಅರ್ಥವಲ್ಲ. ಯಡಿಯೂರಪ್ಪನವರ ವಿಶ್ವಾಸ ಅವರನ್ನು ಕಾಪಾಡಲಿ!
ಮೈಸೂರಿನ ವರುಣಾದಲ್ಲಿ ಕಣಕ್ಕಿಳಿಬಯಸಿದ್ದ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಹೈಕಮಾಂಡ್ ಟಿಕೆಟ್ ಕೊಡದೇ ಹೋದಾಗ ಯಡಿಯೂರಪ್ಪ ಒಂದು ಮಾತು ಹೇಳಿದ್ದರು.  ‘ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದು ಯಾರು ಅಂತ ನನಗೆ ಗೊತ್ತು. ಯಾರು, ಯಾರು ಪಿತೂರಿ ಮಾಡಿದ್ದಾರೆಂತಲೂ ಗೊತ್ತು.’ ಅಂದರೆ ಅದರ ಅರ್ಥ, ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ನಂತರ ರಾಜ್ಯ ಬಿಜೆಪಿಗೆ ಹಿಡಿದಿರುವ ‘ಅಸಹಕಾರದ ಶನಿ’ ಚುನಾವಣೆಗೆ ಹದಿನೈದು ದಿನ ಇರೋವಾಗಲೂ ಬಿಟ್ಟಿಲ್ಲ. ಒಳಜಗಳ ಇನ್ನೂ ಚಲಾವಣೆಯಲ್ಲಿದೆ ಎಂದಂತಾಯಿತು. ಈಗ ಯಡಿಯೂರಪ್ಪನವರು ತಾವು ಸಿಎಂ ಆಗುತ್ತಿರುವುದರಿಂದ ತಮ್ಮ ಮಗ ಕೂಡ ಶಾಸನಸಭೆಗೆ ಬರೋದು ಬೇಡ ಅಂತ ಈ ತೀರ್ಮಾನ ತೆಗೆದುಕೊಂಡಿದೆ ಅಂತ ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದಾರೆ. ಆದರೆ ಅವರ ಮೊದಲ ಮತ್ತು ನಂತರ ಮಾತಿನ ನಡುವೆ ಇರುವ ವ್ಯತ್ಯಾಸ ಬಿಜೆಪಿ ಪರಿಸ್ಥಿತಿಯ ಮೇಲೆ ಕನ್ನಡಿ ಹಿಡಿದಿದೆ. ಆದರೆ ಮೋದಿ ಚಿಮುಕಿಸುತ್ತಿರುವ ಮಂತ್ರದ ನೀರು ಯಡಿಯೂರಪ್ಪನವರ ವಿಶ್ವಾಸವನ್ನು ರಕ್ಷಿಸುತ್ತದೆಯೇ ಎಂಬುದನ್ನು ಬಿಜೆಪಿ ನಸೀಬು ಹೇಳಬೇಕು.
ಇನ್ನು ಕಾಂಗ್ರೆೆಸ್ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ಒನ್ ಮ್ಯಾನ್ ಆರ್ಮಿ’ ರಾಜ್ಯ ಕಾಂಗ್ರೆೆಸ್‌ನ ಅಧಿಕಾರ ವಿಶ್ವಾಸದ ಸಂಜೀವಿನಿ. ಅವರು ಕೂಡ ದಿಕ್ಕುದೆಸೆಯಿಲ್ಲದೆ ರಾಜ್ಯದೆಲ್ಲೆೆಡೆ ಇದನ್ನು ಚೆಲ್ಲುತ್ತಾ ಸಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಾರೋಟು ನಡೆಸಲು ಮೋದಿ, ಅಮಿತ್ ಶಾ ಅವರಂಥ ರಾಷ್ಟ್ರೀಯ ನಾಯಕರ ಆಸರೆಯೇ ಚುಂಬಕಶಕ್ತಿ. ಆದರೆ ಕಾಂಗ್ರೆೆಸ್ ವಿಚಾರಕ್ಕೆೆ ಬಂದಾಗ ಅದು ಉಲ್ಟಾ. ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರು ಇಲ್ಲಿ ನೆಪಮಾತ್ರ. ಅವರು ಬಂದು ಸಿದ್ದರಾಮಯ್ಯ ಸರಕಾರದ ಸಾಧನೆ ಬಗ್ಗೆೆ ಬರೆದುಕೊಟ್ಟದ್ದಷ್ಟೇ ಮಾತಾಡಬೇಕು. ಪ್ರಧಾನಿ ಮೋದಿ ಅವರನ್ನು ಜವಾರಿ ಭಾಷೆಯಲ್ಲಿ ತಡಕಿಕೊಳ್ಳಬೇಕು ಅಂದ್ರೆೆ ಮತ್ತಿದೇ ಸಿದ್ದರಾಮಯ್ಯನವರೇ ಆಗಬೇಕು. ಹೀಗಾಗಿ ಸಿದ್ದರಾಮಯ್ಯನವರೇ ಕಾಂಗ್ರೆೆಸ್ ಫಿರಂಗಿಯ ಮೂತಿಭಾಗ. ಉಳಿದವರೆಲ್ಲ ಅದರ ಹಿಂದೆ-ಹಿಂದೆ. ಕಳೆದೊಂದು ದಶಕದಿಂದ ಅಹಿಂದ ಮಂತ್ರ ಜಪಿಸುತ್ತಲೇ ಮುಂದೆ, ಮುಂದೆ ಸಾಗಿರುವ ಸಿದ್ದರಾಮಯ್ಯನವರು ಶಕ್ತಿ, ಅದೃಷ್ಟ ಎಲ್ಲವನ್ನೂ ತಮ್ಮೊಳಗೇ ಆವಾಹನೆ ಮಾಡಿಕೊಂಡು, ಯಾರೊಬ್ಬರೂ ಅದರ ಹತ್ತಿರವೂ ಸುಳಿಯದಂತೆ ಎಚ್ಚರ ವಹಿಸಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಸಂಕಲ್ಪ ತೊಟ್ಟಿದ್ದಾರೆ.
ಹೀಗಾಗಿಯೇ ಸಿದ್ದರಾಮಯ್ಯನವರು ಕೂಡ ಹೋದಲ್ಲಿ-ಬಂದಲ್ಲಿ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. 132 ಸ್ಥಾನಬಲದ ಸ್ಪಷ್ಟ ಬಹುಮತದೊಂದಿಗೆ ಏಕಾಂಗಿಯಾಗಿಯೇ ಅಧಿಕಾರಕ್ಕೆೆ ಬರುವುದಾಗಿ, ಸರಕಾರ ರಚನೆಗೆ ಪರಾಶ್ರಯದ ಅಗತ್ಯವೂ ಇಲ್ಲ, ಜೆಡಿಎಸ್ ಜತೆ ಹೋಗುವ ಪ್ರಶ್ನೆೆಯೂ ಇಲ್ಲ ಮರುಚ್ಛರಿಸುತ್ತಿರುವುದರ ಹಿಂದೆ ಮತ್ತದೇ ಅತೀವ ವಿಶ್ವಾಸ ಗರಿಬಿಚ್ಚಿ ಕುಣಿಯುತ್ತಿದೆ. ಸಿದ್ದರಾಮಯ್ಯನವರು ಹೋಗುತ್ತಿರುವ ವೇಗಕ್ಕೆೆ ತಮ್ಮನ್ನು ಹೊಂದಿಸಿಕೊಳ್ಳಲಾರದೆ ಲೋಕಸಭೆಯಲ್ಲಿ ಕಾಂಗ್ರೆೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಸಚಿವ ಡಿ.ಕೆ. ಶಿವಕುಮಾರ್ ಇದ್ದಲ್ಲಿಂದಲೇ ಏದುಸಿರು ಬಿಡುತ್ತಿಿದ್ದಾರೆ. ಆದರೆ ಪರಮೇಶ್ವರ, ಖರ್ಗೆ ಅವರು ಮುಂದಿನ ಸಿಎಂ ಆಯ್ಕೆ ಶಾಸಕಾಂಗ ಸಭೆಯಲ್ಲಾಗುತ್ತದೆ ಎಂದು ಹೇಳುವ ಮೂಲಕ ತಾವು ರೇಸಿನಲ್ಲಿದ್ದೇವೆ ಎಂಬ ಸಂದೇಶ ರವಾನಿಸ್ತುತ್ತಿದ್ದಾರೆ. ಮೇಲ್ವರ್ಗ ಮುನಿಸು, ಲಿಂಗಾಯತ ಪ್ರತ್ಯೇಕ ಧರ್ಮದ ನಡುವೆ ಅಹಿಂದ ಝಂಡಾ ಹಿಡಿದು ಸಾಗಿರುವ ಸಿದ್ದರಾಮಯ್ಯನವರು ಅದನ್ನೆೆಲ್ಲಿ ಸಿಕ್ಕಿಸುತ್ತಾರೆ ಎಂದು ನೋಡಬೇಕು. ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರದಿಂದಲೂ ಸ್ಪರ್ಧಿಸಿರುವ ಸಿದ್ದರಾಮಯ್ಯನವರ ವಿಶ್ವಾಸದ ಬುಡ ಎಷ್ಟು ಆಳದಲ್ಲಿದೆ ಎಂಬುದರ ಪ್ರತೀಕ. ಮತ್ತೆೆ ಸಿಎಂ ಆಗುವ ಅವರ ವಿಶ್ವಾಸದ ಮಾತು ಬೇಗುದಿಯಲ್ಲಿ ಬೇಯುತ್ತಿರುವುದರ ಸಂಕೇತ. ಆದರೂ ಅವರ ಮಾತು ಯಡಿಯೂರಪ್ಪನವರ ನಂಬಿಕೆಯ ಜತೆ ಪೈಪೋಟಿಗಿಳಿದಿದೆ.
ಈಗ ಜೆಡಿಎಸ್ ವಿಚಾರಕ್ಕೆೆ ಬರುವುದಾದರೆ ಅದರ ವಿಶ್ವಾಸಕ್ಕೆೆ ಪಾರವೇ ಇಲ್ಲ. ಮೇ 18 ಕ್ಕೆೆ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ. ಆ ಹುಟ್ಟುಹಬ್ಬದ ಉಡುಗೊರೆಯಾಗಿ ಅವರ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಾಗೆಂದು ಸ್ವತಃ ದೇವೇಗೌಡರೇ ಬಹಿರಂಗವಾಗಿ ಹೇಳಿದ್ದಾರೆ. ಕುಮಾರಸ್ವಾಮಿ ಕೂಡ ಇದೇ ಮಾತನ್ನು ಬೇರೆ ಸ್ವರೂಪದಲ್ಲಿ ಹೇಳಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆೆಸ್ಸಿಗೆ ಒಂದಷ್ಟು ಭ್ರಮೆಗಳಿವೆ. ತಾವೇ ಅಧಿಕಾರಕ್ಕೆೆ ಬರುವುದಾಗಿ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಜನರ ಲೆಕ್ಕಾಚಾರವೇ ಬೇರೆ ಇದೆ. ಜೆಡಿಎಸ್‌ಗೆ 115 ಸ್ಥಾನಗಳು ಬರುತ್ತವೆ. ತಾವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ದೃಢ ಮಾತುಗಳಲ್ಲಿ ಹೇಳಿದ್ದಾರೆ. ಅವರ ಮಾತು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರ ಅಧಿಕಾರದ ನಂಬಿಕೆಯನ್ನೂ ಅಣಕಿಸುವ ರೀತಿಯಲ್ಲಿದೆ. ಕಾಂಗ್ರೆೆಸ್ ಮತ್ತು ಬಿಜೆಪಿ ಹಗ್ಗಜಗ್ಗಾಟದ ನಡುವೆ ಅಧಿಕಾರದ ಕೋಲಾಟ ಆಡುವ ಸ್ಥಿತಿಯಲ್ಲಿರುವ ಜೆಡಿಎಸ್ ಮುಖಂಡರ ಆತ್ಮವಿಶ್ವಾಸ ಮತ್ತು ಸ್ಥೈರ್ಯ ಕೂಡ ಮೆಚ್ಚುವಂತದ್ದೇ. ಎಲ್ಲ ಸಮೀಕ್ಷೆೆಗಳ ಪ್ರಕಾರ ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಆದರೆ ಉಳಿದೆರಡು ಪಕ್ಷಗಳು ಅಧಿಕಾರಕ್ಕೆೆ ಅಗತ್ಯವಾದಷ್ಟು ಸ್ಥಾನ ಹಿಡಿಯುವ ಬಗ್ಗೆೆ ಅನುಮಾನ ಇರೋವುದೇ ಜೆಡಿಎಸ್ ಅಧಿಕಾರದ ಕನಸಿನ ಶ್ರೀರಕ್ಷೆೆ. ಹಾಗೇನಾದರೂ ಆದರೆ ಯಾರೊಂದಿಗೆ, ಏನು ಎಂಬುದಷ್ಟೇ ಅದರ ಮುಂದಿರುವ ಆಯ್ಕೆ. ಬಿಜೆಪಿ ಮತ್ತು ಕಾಂಗ್ರೆೆಸ್ ಸ್ಪಷ್ಟ ಬಹುಮತದಿಂದ ಎಷ್ಟು ದೂರ ಸರಿಯುತ್ತವೆಯೋ ಅಷ್ಟಷ್ಟು ಜೆಡಿಎಸ್‌ಗೆ ಲಾಭ.
ಆದರೆ ಇಲ್ಲೊಂದು ಆಪಾಯವಿದೆ. ಈಗಿರುವ ಬಹುತೇಕ ಸಮೀಕ್ಷೆೆಗಳ ಪ್ರಕಾರ ಯಾವುದೇ ಪಕ್ಷ ನೂರರ ಗಡಿ ದಾಟುವುದಿಲ್ಲ. ಅದರ ಹತ್ತಿರ ಹೋಗುವ ಸಾಧ್ಯತೆ ಇರುವುದು ಕಾಂಗ್ರೆೆಸ್ ಮತ್ತು ಬಿಜೆಪಿಗೆ ಮಾತ್ರ. ಜೆಡಿಎಸ್ ನಲ್ವತ್ತು ಸ್ಥಾನಗಳನ್ನು ದಾಟಿದರೆ ಪಕ್ಷವು ಭದ್ರ. ಅದರ ಅಧಿಕಾರದ ಕನಸೂ ಸುಭದ್ರ. ಒಂದೊಮ್ಮೆ ಕಡಿಮೆ ಸ್ಥಾನಗಳು ಬಂದರೆ ಕಾಂಗ್ರೆೆಸ್ ಮತ್ತು ಬಿಜೆಪಿ ನಿಸ್ಸಂಶಯವಾಗಿ ಜೆಡಿಎಸ್ ಅನ್ನು ವಿಭಜಿಸಲು, ವಿಭಜಿತ ಗುಂಪು ಖರೀದಿಗೆ ಇಳಿಯುತ್ತವೆ. ಇಂಥ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಅಸ್ತಿತ್ವಕ್ಕೇ ಆಪತ್ತು. ಹೀಗಾಗಿ ಜೆಡಿಎಸ್ ಅಧಿಕಾರಬಲ ಹೆಚ್ಚಲು ಸ್ಥಾನಬಲ ಹಿಗ್ಗಲೇಬೇಕು. ಈ ಹಿಗ್ಗು ಏಕೋಪಶಾಲೆಯ ಮುಖ್ಯೋಪಾಧ್ಯಾಯರಂತಿರುವ ದೇವೇಗೌಡ ಮತ್ತು ಕುಮಾರಸ್ವಾಮಿ ಅವರದೂ ಆಗುತ್ತದೆ. ಒಂದೊಮ್ಮೆ ಜೆಡಿಎಸ್ ಬಿಟ್ಟು ಅಧಿಕಾರ ಹಿಡಿಯಲಾಗದ ಸ್ಥಿತಿ ಬಂದೊದಗಿದರೆ ಈಗ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಜೆಡಿಎಸ್ ಮತ್ತದರ ಮುಖಂಡರ ಬಗ್ಗೆೆ ಲಘುವಾಗಿ ಮಾತಾಡಿರುವ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಖಂಡಿತವಾಗಿಯೂ ಮುಖ್ಯಮಂತ್ರಿ ಪಟ್ಟದ ಆಸೆ ಬಿಡಬೇಕಾಗುತ್ತದೆ. ಯಾರು, ಏನಾಗಬೇಕು ಎಂಬುದನ್ನು ನಿರ್ಧರಿಸುವ, ತಮ್ಮ ಮನಸಿಗೆ ಬಂದ ದಾಯ ಉರುಳಿಸಿ, ಕೈಗೆ ಸಿಕ್ಕ ಇಲಿಮರಿ ಜತೆ ಚೆಲ್ಲಾಟವಾಡುವ ಬೆಕ್ಕಿನ ಜಾಗದಲ್ಲಿ ಜೆಡಿಎಸ್ ಇರುತ್ತದೆ. ಕುಮಾರಸ್ವಾಮಿ ಅವರ ಸಿಎಂ ಆಗುವ ಆಸೆ ಜೀವಂತವಾಗಿಟ್ಟಿರುವುದು ಇದೇ ನಂಬಿಕೆ. ಆದರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಕೂಡ ಈ ನಂಬಿಕೆಯ ಭಾಗಿದಾರರಾಗಿರುವುದರಿಂದ ಮತದಾರರು ಇವರ ಅದೃಷ್ಟವನ್ನು ಹೇಗೆ ಬರೆಯುತ್ತಾರೋ ನೋಡಬೇಕು!
ಲಗೋರಿ: ಬದ್ಧತೆ ಇಲ್ಲದಿದ್ದರೆ ಆತ್ಮಬಲಕ್ಕೂ ಬೆಲೆ ಬಾರದು! 
(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply