ಮೋದಿ ಗೌಡರನ್ನು ಹೊಗಳಿದ್ದೇಕೆ? ಜಾವಡೇಕರನ್ನು ಝಾಡಿಸಿದ್ದೇಕೆ?

ಪಿ. ತ್ಯಾಗರಾಜ್
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ದೇವೇಗೌಡರನ್ನು ಏಕಾಏಕಿ ಹೊಗಳಿದ್ದರ ಹಿಂದೆ ನಾನಾ ಕಾರಣಗಳಿವೆ. ಅವರನ್ನು ಹೊಗಳುವಂಥ ಪರಿಸ್ಥಿತಿ ನಿರ್ಮಿಸಿಟ್ಟ ಕೇಂದ್ರ ಸಚಿವ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ ಪ್ರಕಾಶ ಜಾವಡೇಕರ್ ಅವರನ್ನು ಹಿಗ್ಗಾಮುಗ್ಗಾ ಮೋದಿ ಝಾಡಿಸಿದ್ದರಿಂದ ಒಂದೆರಡು ದಿನ ಅವರು ಚುನಾವಣೆ ಪ್ರಚಾರದಿಂದ ಕಣ್ಮರೆಯೂ ಆಗಿದ್ದರು. ಆದರೆ ಇದು ವ್ಯತಿರಿಕ್ತ ಸಂದೇಶ ಸಾರುತ್ತದೆ ಎಂದು ಗೊತ್ತಾದ ಮೇಲೆ ಜಾವಡೇಕರ್ ಅವರನ್ನು ಮತ್ತೆ ಪ್ರಚಾರ ಕಾರ್ಯಕ್ಕೆ ಬಿಟ್ಟುಕೊಂಡರಷ್ಟೇ ಅಲ್ಲ, ಜೆಡಿಎಸ್ ಅನ್ನು ಹೊಗಳಿದ್ದರಿಂದ ಪಕ್ಷಕ್ಕೆ ಆಗಿದ್ದ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಮತ್ತದನ್ನು ತೆಗಳಿದ್ದಾರೆ.
ಮೋದಿ ಅವರ ಈ ಆಶ್ಚರ್ಯಕರ ದ್ವಂದ್ವ ನಡೆ ಹಿಂದೆ ರಾಷ್ಟ್ರ ಹಾಗೂ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡಿವೆ. ಹಾಗೆ ಚುನಾವಣೆ ಸಮರ ಸಂದರ್ಭದಲ್ಲಿ ಇಂಥ ಅನಪೇಕ್ಷಿತ ರಾಜಕೀಯ ಶ್ರಮದಾನಕ್ಕೆ ಕಾರಣಕರ್ತರಾದ ಪ್ರಕಾಶ ಜಾವಡೇಕರ್, ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದಕ್ಕೆ ಕಾರಣಗಳು ಸುಕ್ಕುಗಟ್ಟಿರುವುದು ಇಂತಿದೆ:
ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತದೆಂಬ ನಾನಾ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಚುನಾವಣೆ ತಂತ್ರಗಾರಿಕೆ ಬದಲಿಸಲು ಮೋದಿ, ಅಮಿತ್ ಶಾ, ಕೇಂದ್ರ ಸಚಿವರಾದ ಪಿಯೂಶ್ ಗೋಯೆಲ್ ಹಾಗೂ ಪ್ರಕಾಶ್ ಜಾವಡೇಕರ್ ವಾರದ ಹಿಂದೆ ದಿಲ್ಲಿಯಲ್ಲಿ ಸಭೆ ನಡೆಸಿದರು. ಅತಂತ್ರ ವಿಧಾನಸಭೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಜೆಡಿಎಸ್‌ಅನ್ನು ಹೇಗಾದರೂ ಮಾಡಿ ಚುನಾವಣೆಯಲ್ಲಾಗಲಿ ಅಥವಾ ಚುನಾವಣೆ ನಂತರವಾಗಲಿ ನಿರ್ನಾಮ ಮಾಡಿಬಿಡಬೇಕು ಎಂದು ಅದಕ್ಕೆ ಹೇಗೆಲ್ಲ ಒಳತಂತ್ರ ಮಾಡಬೇಕೆಂಬುದರ ಬಗ್ಗೆ ಚರ್ಚಿಸಲಾಯಿತು. ಈ ಸಭೆ ಬರಕಾಸ್ತಾದ ನಂತರ ಜಾವಡೇಕರ್ ಬೆಂಗಳೂರಿಗೆ ಬರಬೇಕಿತ್ತು. ಆದರೆ, ಹಾಗೆ ಮಾಡದ ಜಾವಡೇಕರ್ ದೇವೇಗೌಡರು ಹಾಗೂ ತಮಗೂ ಸ್ನೇಹಿತರಾದ ನಾಯಕರೊಬ್ಬರಿಗೆ ದೂರವಾಣಿ ಕರೆ ಮಾಡಿ ಪೂನಾಕ್ಕೆ ಬರುವಂತೆ ಹೇಳಿದರು. ಅವರೂ ಬೆಂಗಳೂರಿಗೆ ಬಾರದೆ ಪೂನಾಕ್ಕೆ ಹೋದರು. ಅಲ್ಲಿ ತಮ್ಮನ್ನು ಭೇಟಿಯಾದ ಆ ನಾಯಕರಿಗೆ ಜೆಡಿಎಸ್ ಮುಗಿಸಲು ಬಿಜೆಪಿ ವರಿಷ್ಠರ ಸಭೆಯಲ್ಲಾದ ಚರ್ಚೆ ಬಗ್ಗೆ ಯಥಾವತ್ ಮಾಹಿತಿ ನೀಡಿದರು. ಆ ನಾಯಕರು ಅದನ್ನು ದೇವೇಗೌಡರಿಗೆ ತಲುಪಿಸಿದರು. ಇದರಿಂದ ಗೌಡರು ಕೆಂಡಮಂಡಲರಾದರು.
ಜಾವಡೇಕರ್ ಮತ್ತು ಗೌಡರ ಸಮಾನ ಸ್ನೇಹಿತರಾದ ನಾಯಕರು ಮೊದಲು ಜೆಡಿಎಸ್‌ನಲ್ಲಿದ್ದು ಈಗ ಬಿಜೆಪಿಗೆ ಬಂದವರು. ಈ ವಿಚಾರವನ್ನು ಗೌಡರಿಗೆ ವರ್ಗಾಯಿಸಿದ್ದರ ಹಿಂದೆ ಅವರದೇ ವೈಯಕ್ತಿಕ ಲೆಕ್ಕಾಚಾರವಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಬಿಜೆಪಿ ಮತ್ತು ಜೆಡಿಎಸ್ ಸೇರಿ ಸರಕಾರ ರಚಿಸಿದಾಗ ಆ ಸರಕಾರದಲ್ಲಿ ತಮಗೆ ಗೌಡರ ಕಡೆಯಿಂದ ಕಿಮ್ಮತ್ತು ಸಿಗಲಿ ಎಂಬ ಕಾರಣಕ್ಕೆ ಅವರಿಗೆ ಸುದ್ದಿ ಮುಟ್ಟಿಸಿದ್ದರು. ಆದರೆ, ಈ ವಿಷಯ ತಿಳಿಯುತ್ತಿದ್ದಂತೆ ಗೌಡರು ಪ್ರಧಾನಿಗಳ ಕಚೇರಿ ಮೂಲಕ ಮೋದಿ ಅವರನ್ನು ಸಂಪರ್ಕಿಸಲು ಸತತ ಪ್ರಯತ್ನ ನಡೆಸಿದರು. ಆದರೆ, ಮೋದಿ ಅವರು ಸಿಗದೆ ಹೋದಾಗ ಬಿಜೆಪಿಯ ಬೇರೆ ಮುಖಂಡರ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರ ಮೋದಿ ಅವರ ಕಿವಿಗೆ ಬಿತ್ತು. ತಾವು ನಾಲ್ಕು ನಾಯಕರು ಮಾಡಿಕೊಂಡ ಚರ್ಚೆ ಗೌಡರ ಕಿವಿಗೆ ಬಿದ್ದಿದ್ದರ ಬಗ್ಗೆ ಆಶ್ಚರ್ಯ ಹಾಗೂ ಸಿಟ್ಟು ಎರಡೂ ಉಂಟಾಯಿತು. ದೂರವಾಣಿ ಕರೆ ಮತ್ತು ಪ್ರವಾಸ ವಿವರ ತೆಗೆಸಿ ನೋಡಿದಾಗ ಈ ಕೆಲಸ ಜಾವಡೇಕರ್ ಅವರದೇ ಎಂದು ಮನದಟ್ಟಾಗಿ ಅವರನ್ನು ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡರು. ಕರ್ನಾಟಕದ ಕಡೆ ತಲೆ ಹಾಕದಂತೆ ಸೂಚನೆ ಕೊಟ್ಟರು. ಹೀಗಾಗಿ ಮೂರ್ನಾಲ್ಕು ದಿನ ಜಾವಡೇಕರ್ ಕರ್ನಾಟಕದಲ್ಲಿ ಕಾಣಿಸಿಕೊಳ್ಳಲಿಲ್ಲ.
ಇತ್ತ ಗೌಡರು ಕೆಂಡಮಂಡಲರಾಗಿದ್ದಾರೆಂದು ಗೊತ್ತಾದ ಮೋದಿ, ಸಾಂತ್ವನ ಮಾಡುವ ಉದ್ದೇಶದಿಂದ ಕಳೆದ ವಾರ ಚುನಾವಣೆ ಪ್ರಚಾರ ಭಾಷಣದಲ್ಲಿ ಗೌಡರನ್ನು ಯದ್ವಾತದ್ವಾ ಹೊಗಳಿದರು. ಗೌಡರು ತಮ್ಮ ದಿಲ್ಲಿ ಮನೆಗೆ ಬಂದಾಗಲೆಲ್ಲ ತಾವೇ ಹೋಗಿ ಅವರ ಕಾರಿನ ಬಾಗಿಲು ತೆರೆಯುವುದರಿಂದ ಹಿಡಿದು ಅವರನ್ನು ಟೀಕಿಸುತ್ತಿರುವ ರಾಹುಲ್ ಗಾಂಧಿ ಅವರನ್ನು ಮನಬಂದಂತೆ ತರಾಟೆಗೆ ತೆಗೆದುಕೊಳ್ಳುವುದರವರೆಗೂ ಜಾಣ್ಮೆಯ ಅಸ್ತ್ರಗಳನ್ನೆಲ್ಲ ಪ್ರಯೋಗಿಸಿದರು. ಆದರೆ, ಹಾಗೆ ಗೌಡರನ್ನು ಹೊಗಳಿದ್ದರಿಂದ ಚುನಾವಣೆಯಲ್ಲಿ ಬೇರೆಯದೇ ಸಂದೇಶ ರವಾನೆಯಾಗುತ್ತದೆ, ಬಿಜೆಪಿಗೆ ಯಡವಟ್ಟಾಗುತ್ತದೆ ಎಂದು ರಾಜ್ಯ ನಾಯಕರು ಕೊಟ್ಟ ಮಾಹಿತಿ ಮೇರೆಗೆ ಮತ್ತೆ ಜೆಡಿಎಸ್ ಅನ್ನು ಹಿಗ್ಗಾಮುಗ್ಗಾ ತೆಗಳಿದರು. ಮೂರನೇ ಸ್ಥಾನದಲ್ಲಿ ತೆವಳುತ್ತಿರುವ ಜೆಡಿಎಸ್‌ಗೆ ಮತಹಾಕಿ ವೇಸ್ಟು ಮಾಡಬೇಡಿ ಎಂದು ಮತದಾರರಿಗೆ ಕರೆ ಕೊಟ್ಟರು.
ಈ ಮಧ್ಯೆ ದೇವೇಗೌಡರು ಎರಡು ಹೇಳಿಕೆಗಳನ್ನು ಕೊಟ್ಟಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಹಾಗೇನಾದರೂ ಮಾಡಿದರೆ ಅವರಿಗೂ ತಮಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು. ಈಗಾಗಲೇ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಹೋಗುವುದಿಲ್ಲ ಎಂದು ಆ ಪಕ್ಷದ ನಾಯಕಿ ಮಾಯಾವತಿ ಅವರಿಗೆ ಮಾತು ಕೊಟ್ಟಾಗಿದೆ ಎಂದು. ಇದರ ಹಿಂದೆಯೂ ಗೌಡರ ಲೆಕ್ಕಾಚಾರ ಬೇರೆ ಇದೆ. ಕೇಂದ್ರದಲ್ಲಿ ತೃತೀಯ ರಂಗ ಚಿಗುರಿಕೊಳ್ಳುತ್ತಿರುವ ಹೊತ್ತಿನಲ್ಲಿ ತಾವೇನಾದರೂ ಬಿಜೆಪಿ ಜತೆ ಹೋದರೆ ಮನಸ್ಸಿನ ಆಳದಲ್ಲೆಲ್ಲೋ ಮನೆ ಮಾಡಿರುವ ತಾವು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಬಯಕೆಗೆ ತಣ್ಣೀರು ಬೀಳುತ್ತದೆ. ಬಿಜೆಪಿ ಜತೆ ಹೋಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗದಿದ್ದರೂ ಪರವಾಗಿಲ್ಲ. ಕಾಂಗ್ರೆಸ್ ಜತೆ ಹೋಗಿ ಸಿದ್ದರಾಮಯ್ಯ ಹೊರತುಪಡಿಸಿ ಬೇರೆಯವನ್ನು ಸಿಎಂ ಮಾಡಿ, ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿದರಾಯಿತು. ಆದರೆ, ತೃತೀಯ ರಂಗ ನಿರ್ಮಾಣದಲ್ಲಿ ತಮಗಿರುವ ಅಸ್ಥೆ ಬಗ್ಗೆ ಮಾಯಾವತಿ, ಮುಲಯಂ ಸಿಂಗ್‌ ಯಾದವ್, ಮಮತಾ ಬ್ಯಾನರ್ಜಿ, ಲಾಲುಪ್ರಸಾದ್ ಯಾದವ್, ಚಂದ್ರಬಾಬು ನಾಯ್ಡು, ಕೆ. ಚಂದ್ರಶೇಖರ ರಾವ್, ಶರದ್ ಯಾದವ್ ಅವರ ನಂಬಿಕೆ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ. ರಾಜಕೀಯ ಪರಿಸ್ಥಿತಿ ಹೀಗೇ ಬರುತ್ತದೆ ಎಂದು ಗೊತ್ತಿಲ್ಲ. ಹೀಗಾಗಿ ಹುಷಾರಾಗಿ ಹೆಜ್ಜೆ ಇಡಬೇಕು ಎಂಬುದು ಅವರ ಎಣಿಕೆ.
ಇದು ಗೊತ್ತಾಗಿಯೇ, ತೃತೀಯ ರಂಗ ಬಲಿಯಲು ಬಿಡಬಾರದು, ಆ ರಂಗದ ಅಂಗಪಕ್ಷಗಳೆಲ್ಲವನ್ನೂ ಮುಗಿಸಿಬಿಡಬೇಕು ಎಂದು ಪ್ರಧಾನಿ ಮೋದಿ ಎಣೆದಿರುವ ತಂತ್ರದ ಭಾಗವೇ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಾಯಿತು, ನಂತರವಾಯಿತು ಜೆಡಿಎಸ್‌ಅನ್ನು ಆಪೋಶನ ತೆಗೆದುಕೊಳ್ಳಬೇಕು ಎಂದು ದಿಲ್ಲಿಯಲ್ಲಿ ನಡೆದ ಸಭೆಯ ನಿರ್ಣಯ. ಆದರೆ, ಈ ಮಾಹಿತಿ ಪ್ರಕಾಶ ಜಾವಡೇಕರ್ ಮೂಲಕ ಸೋರಿಕೆಯಾಗಿ ಚುನಾವಣೋತ್ತರ ಸಂಭವನೀಯ ಮೈತ್ರಿ ಸನ್ನಿವೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ, ಜಾವಡೇಕರ್ ಅವರನ್ನು ತೀರಾ ಚುನಾವಣೆ ಪ್ರಚಾರ ಪ್ರಕ್ರಿಯೆಯಿಂದ ದೂರ ಇಟ್ಟರೆ ಕಾರಣಗಳ ಬಗ್ಗೆ ಕುತೂಹಲ ಕೆರಳಿ, ಇಡೀ ಪ್ರಸಂಗ ಬಹಿರಂಗವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಅವರನ್ನು ಮತ್ತೆ ಕರ್ನಾಟಕದ ಒಳಗೆ ಬಿಟ್ಟುಕೊಳ್ಳಲಾಗಿದೆ. ಅದಾದ ನಂತರವೇ ಅವರು ಇಲ್ಲಿ ಮತ್ತೆ ಕಾಣಿಸಿಕೊಂಡು ಶಾಸಕ ವಿಜಯಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ, ಮಾಧ್ಯಮ ಸಂವಾದದಲ್ಲಿ ಭಾಗವಹಿಸಿರುವುದು. ಆದರೆ, ತಮ್ಮ ಪಕ್ಷ ಮುಗಿಸಬೇಕೆಂಬ ಮೋದಿ ಅವರ ಎಣಿಕೆ ಗೌಡರ ತಲೆಯಲ್ಲಿ ಬಿಜೆಪಿ ವಿಮುಖ ತಂತ್ರಗಾರಿಕೆಗಳಿಗೆ ಆಸ್ಪದ ಕೊಟ್ಟಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿಟ್ಟಿದೆ.

Leave a Reply