ಚುನಾವಣೋತ್ತರ ಸಮೀಕ್ಷೆ ಎಷ್ಟು ನಿಜ? ಇವುಗಳ ಟ್ರ್ಯಾಕ್ ರೆಕಾರ್ಡ್ ಏನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಯೂ ಬಂದಿವೆ. ಇಂಡಿಯಾ ಟುಡೇ ಕಾಂಗ್ರೆಸ್ ಹಾಗೂ ಟುಡೇ ಚಾಣಕ್ಯ ಬಿಜೆಪಿ ಪರವಾಗಿ ಭವಿಷ್ಯ ನುಡಿದಿವೆ. ಉಳಿದೆಲ್ಲ ಸಮೀಕ್ಷೆ ಅತಂತ್ರ ಮಂತ್ರ ಜಪಿಸಿವೆ.

ಹೀಗಾಗಿ ಮೇ 15ರ ಫಲಿತಾಂಶ ಕುತೂಹಲ ಹುಟ್ಟಿಸಿದೆ. ಈ ಸಂದರ್ಭದಲ್ಲಿ ಕಳೆದ ಚುನಾವಣೆಗಳಲ್ಲಿ ಸಮೀಕ್ಷೆಗಳ ನಿಖರತೆ ಹೇಗಿತ್ತು ಎಂಬುದನ್ನು ನೋಡಿದಾಗ ಈಗಿನ ಸಮೀಕ್ಷೆ ಅರಿಯಲು ನೆರವಾಗುತ್ತದೆ.

ಬಿಹಾರ 2015: ಮಹಾ ಮೈತ್ರಿಗೆ ವೇದಿಕೆಯಾಗಿದ್ದ ಬಿಹಾರ ಚುನಾವಣೆ ಫಲಿತಾಂಶಕ್ಕೂ ಸಮೀಕ್ಷೆ ಅಂಕಿ ಅಂಶಗಳಿಗೂ ಅಂತರ ದೊಡ್ಡದಾಗಿತ್ತು. ಎಬಿಪಿ-ನೆಲ್ಸನ್ ಸಂಸ್ಥೆ ನಡೆಸಿದ ಸಮೀಕ್ಷೆ ಮಹಾಮೈತ್ರಿಗೆ 130, ಬಿಜೆಪಿಯ ಮೈತ್ರಿಗೆ 108, ಟೈಮ್ಸ್ ನೌ- ಸಿ ವೋಟರ್ ಪ್ರಕಾರ ಮಹಾಮೈತ್ರಿಗೆ 122, ಬಿಜೆಪಿಯ ಮೈತ್ರಿಗೆ 111 ಎಂದು ತಿಳಿಸಿತ್ತು. ಆದರೆ ಫಲಿತಾಂಶದಲ್ಲಿ ಮಹಾಮೈತ್ರಿಗೆ 178 ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿತು.

ಉತ್ತರ ಪ್ರದೇಶ 2017: ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿರೀಕ್ಷೆ ಮಾಡಲಾಗಿತ್ತಾದರೂ ಬಿಜೆಪಿ ಜಯದ ಪ್ರಮಾಣ ಹೇಳುವಲ್ಲಿ ಸಮೀಕ್ಷೆ ವಿಫಲವಾಗಿದ್ದವು. ಟುಡೇಸ್ ಚಾಣಕ್ಯ ಬಿಜೆಪಿಗೆ 267-303 ಸೀಟು ಸಿಗುತ್ತದೆ ಎಂದು ಹೇಳಿ ಫಲಿತಾಂಶದ ಸಮೀಪದಲ್ಲಿತ್ತು. ಫಲಿತಾಂಶ ಪ್ರಕಟವಾದಾಗ ಬಿಜೆಪಿ 324 ಕ್ಷೇತ್ರದಲ್ಲಿ ಜಯಿಸಿತ್ತು.

ಪಂಜಾಬ್ 2017: ಕಳೆದ ವರ್ಷ ನಡೆದ ಪಂಜಾಬ್ ಚುನಾವಣೆ ಸಂದರ್ಭದಲ್ಲೂ ಸಮೀಕ್ಷೆಗಳ ಲೆಕ್ಕ ತಪ್ಪಾಗಿತ್ತು. ಆಮ್ ಆದ್ಮಿ ಪಕ್ಷದ ಹೀನಾಯ ಸೋಲು ಯಾರು ನಿರೀಕ್ಷೆ ಮಾಡಿರಲಿಲ್ಲ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಆಪ್ ನಡುವಣ ಜಿದ್ದಾಜಿದ್ದಿ ಹೋರಾಟದ ನಿರೀಕ್ಷಿಸಿದ್ದವು. ಆದರೆ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಇಂಡಿಯಾ ಟಿವಿ-ಸಿ ವೋಟರ್ ಆಮ್ ಪಕ್ಷಕ್ಕೆ 59-67 (117), ನ್ಯೂಸ್ 24-ಚಾಣಕ್ಯ ಹಾಗೂ ನ್ಯೂಸ್ ಎಕ್ಸ್-ಎಂಸಿಆರ್ ಕಾಂಗ್ರೆಸ್ ಮತ್ತು ಎಎಪಿ ಸ್ಪರ್ಧೆ ನಿರೀಕ್ಷೆ ಮಾಡಿತ್ತು. ಇಂಡಿಯಾ ಟುಡೇ-ಆಕ್ಸಿಸ್ ಕಾಂಗ್ರೆಸ್ ಗೆ 62-71 ಹಾಗೂ ಎಎಪಿಗೆ 42-51 ಕ್ಷೇತ್ರ ಸಿಗಲಿದೆ ಎಂದಿತ್ತು. ಕಾಂಗ್ರೆಸ್ ಬಹುಮತ ಪಡೆದರೆ ಎಎಪಿ ವಿರೋಧ ಪಕ್ಷವಾಗಲಿದೆ ಎಂದಿದ್ದವು. ಆದರೆ ಫಲಿತಾಂಶ ಪ್ರಕಟವಾದಾಗ ಎಎಪಿ ಕೇವಲ 20 ಕ್ಷೇತ್ರ ಗೆದ್ದಿತ್ತು.

ಗುಜರಾತ್ 2018: ಇದೇ ವರ್ಷ ನಡೆದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದ ಜಯ ದಾಖಲಿಸಿದೆ ಎಂದು ಸಮೀಕ್ಷೆಗಳು ತಿಳಿಸಿದ್ದರೂ ಗೆಲುವಿನ ಅಂತರ ತಿಳಿಸಲು ವಿಫಲವಾಗಿದ್ದವು. ಟುಡೇಸ್ ಚಾಣಕ್ಯದ ಬಿಜೆಪಿ 135 ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂಬ ಸಮೀಕ್ಷೆ ಸಂಪೂರ್ಣ ಉಲ್ಟಾ ಹೊಡೆದಿತ್ತು. ಟೈಮ್ಸ್ ನೌ-ವಿಎಂಆರ್ ಬಿಜೆಪಿಗೆ 115, ರಿಪಬ್ಲಿಕ್-ಸಿ ವೋಟರ್ ಬಿಜೆಪಿಗೆ 108 ಕ್ಷೇತ್ರದಲ್ಲಿ ಜಯ ಎಂದು ತಿಳಿಸಿತ್ತು.

Leave a Reply