ಮುಖಂಡರ ಮತಿಗೆಡಿಸಿರುವ ಮತಗಟ್ಟೆ ಸಮೀಕ್ಷೆ!

ಕರ್ನಾಟಕ ವಿಧಾನಸಭೆ ಚುನಾವಣೋತ್ತರದ ಹತ್ತಾರು ಸಮೀಕ್ಷೆಗಳು ಜನ ಮತ್ತು ಜನನಾಯಕರ ಮನಸ್ಸನ್ನು ಕಲಸಿ ಮೊಸರು ಮಾಡಿಟ್ಟಿವೆ. ಒಂದು ಸಮೀಕ್ಷೆ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದರೆ ಮತ್ತೊಂದು ಬಿಜೆಪಿಯನ್ನು ಆ ಸ್ಥಾನದಲ್ಲಿ ತಂದು ಕೂರಿಸಿದೆ. ಒಂದೆರಡು ಬಿಟ್ಟರೆ ಉಳಿದ ಯಾವುದೇ ಸಮೀಕ್ಷೆಯೂ ನಿರ್ದಿಷ್ಟ ಪಕ್ಷಕ್ಕೆ ನಿಚ್ಚಳ ಬಹುಮತ ಬರುತ್ತದೆ ಎಂದು ಹೇಳಿಲ್ಲ. ಬಹುಮತದ ಅಂಚಿಗೆ ಎರಡು ಪಕ್ಷಗಳನ್ನೂ ತಂದು ಕೂರಿಸಿ ಅವುಗಳ ತಲೆ ಹಾಳು ಮಾಡಿಟ್ಟಿದೆ. ಅತಂತ್ರ ವಿಧಾನಸಭೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂಬುದನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಿಂಬಿಸಿವೆ. ಈ ಸಮೀಕ್ಷೆಗಳಿಂದ ಯಥೇಚ್ಛವಾಗಿ ಹೊರಹೊಮ್ಮಿರುವ ಅಂಶ ಎಂದರೆ ಬರೀ ಗೊಂದಲ, ಗೊಂದಲ, ಗೊಂದಲ ಮಾತ್ರ!

ನಿಜ, ಚುನಾವಣೋತ್ತರ ಸಮೀಕ್ಷೆಗಳು ಸಾಧಿಸಿರುವ ಯಶಸ್ಸು ಎಂದರೆ ಮೇ 15 ರಂದು ಮಂಗಳವಾರ ನಡೆಯಲಿರುವ ಮತಎಣಿಕೆ ಕುರಿತ ಜನರ ಸಹಜ ಕುತೂಹಲವನ್ನು ಹಾಗೇ ಕಾಯ್ದಿಟ್ಟಿರುವುದು. ಅಡ್ಡಗೋಡಮೇಲೆ ದೀಪವಿಟ್ಟಂತಿರುವ ಈ ಸಮೀಕ್ಷೆಗಳನ್ನು ನೋಡಿ ಏನೂ ಅರ್ಥವಾಗದ ಜನ ನಾಳಿನ ಫಲಿತಾಂಶವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಜನನಾಯಕರ ಸ್ಥಿತಿಯೂ ಭಿನ್ನವಾಗಿಲ್ಲ. ಆದರೆ ಈ ಚುನಾವಣೆ ಹಣೆಬರಹದ ನೇರ ವಾರಸುದಾರರು ಅವರೇ ಆಗಿರುವುದರಿಂದ ನಿಂತಲ್ಲಿ ನಿಲ್ಲಲಾಗದೆ, ಕೂತಲ್ಲಿ ಕೂರಲಾಗದೆ ಒದ್ದಾಡುತ್ತಿದ್ದಾರೆ. ಒಂದೊಂದು ಸಮೀಕ್ಷೆಯೂ ಒಂದೊಂದು ಪಕ್ಷವನ್ನು (ಕಾಂಗ್ರೆಸ್ ಹಾಗೂ ಬಿಜೆಪಿ) ಎತ್ತಿ ಹಿಡಿದಿರುವುದರಿಂದ ತಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿಕೊಳ್ಳಲು ಧೈರ್ಯ ಸಾಲದೆ ಸರಕಾರ ರಚನೆ ಕುರಿತು ಹಲಬಗೆ ತೊಳಲಾಟದಲ್ಲಿ ನರಳೇಳುತ್ತಿದ್ದಾರೆ.  ಮೇಲ್ನೋಟಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದರೂ ಅಂತರಂಗದಲ್ಲಿ ಯಾರೊಬ್ಬರಿಗೂ ಆ ವಿಶ್ವಾಸ ಇಲ್ಲ. ಬದಲಿಗೆ ಭೀತಿ ಕಾಡುತ್ತಿದೆ. ಕತ್ತಲರಾತ್ರಿ ಕಾಡುದಾರಿಯಲ್ಲಿ ನಡೆದುಹೋಗುವ ಒಬ್ಬಂಟಿ ಭಯಸ್ಥ ತನ್ನ ಭೀತಿ ಕಳೆದುಕೊಳ್ಳಲು ಜೋರು ಧ್ವನಿಯಲ್ಲಿ ಹಾಡೇಳಿಕೊಂಡೋ, ಕೂಗಿಕೊಂಡು ಹೋಗುವಂತೆ ಅಧಿಕಾರದ ತಮ್ಮದೇ ಎಂದು ಅರಚಿಕೊಂಡು ತಿರುಗುತ್ತಿದ್ದಾರೆ.

ನಾಳಿನ ಚುನಾವಣೆ ಫಲಿತಾಂಶ ಏನಾಗುತ್ತದೋ ಅದು ಬೇರೆ ಪ್ರಶ್ನೆ. ಆದರೆ ಮತಗಟ್ಟೆ ಸಮೀಕ್ಷೆಗಳು ಜನನಾಯಕರ ಮೇಲೆ ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ಅತ್ತ ಖುಷಿಯಿಂದ ಬೀಗಲೂ ಬಾರದು, ಇತ್ತ ಕತೆ ಮುಗಿಯಿತು ಎಂದು ಸೊರಟಿ ಬೀಳಬಾರದು. ಹಾಗೆ ಅಡಕತ್ತರಿಯಲ್ಲಿ ಅವರ ನಂಬಿಕೆ ಮತ್ತು ವಿಶ್ವಾಸವನ್ನು ಸಿಕ್ಕಿಸಿ, ಮುಂದೇನೂ ಎಂಬ ಮನಸ್ಥಿತಿಗೆ ದೂಡಿವೆ. ಆ ಮನಸ್ಥಿತಿ ಅಡಿಯಾಳಾದ ಒಬ್ಬೊಬ್ಬ ನಾಯಕರದು ಒಂದೊಂದು ವರ್ತನೆ, ಒಂದೊಂದು ಲೆಕ್ಕಾಚಾರ. ಒಬ್ಬರು ಗಾಯದ ಮೇಲೆ ಮುಲಾಮು ಬಿದ್ದಂತೆ ಆಡುತ್ತಿದ್ದರೆ, ಮತ್ತೊಬ್ಬರು ಖಾರದಪುಡಿ ಸುರಿದಂತೆ ಕುಣಿದಾಡುತ್ತಿದ್ದಾರೆ. ಕೆಲವರ ಭ್ರಮಾಧೀನ ಮನಸ್ಥಿತಿಯಂತೂ ಅನುಕಂಪ ಮೂಡಿಸುವಂತಿದೆ. ಅತೀವ ಆತ್ಮವಿಶ್ವಾಸ ಅವರ ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ಮೂಡಿಸುವಂತಿದೆ. ಪಾಪ, ಅವರು ಅಂದುಕೊಂಡಂತೆಯೇ ನಡೆದರೆ ಪರವಾಗಿಲ್ಲ, ಆದರೆ ಅದಕ್ಕೆ ವ್ಯತಿರಿಕ್ತವಾಗಿ ಘಟಿಸಿಬಿಟ್ಟರೆ ಅವರ ಸ್ಥಿತಿ ಏನಾಗಬಹುದು ಎಂದು ನೆನೆಸಿಕೊಂಡಾಗ ಅನುಕಂಪದ ಜಾಗದಲ್ಲಿ ಅಪಹಾಸ್ಯ ಗೋಚರಿಸುತ್ತದೆ!

ಇರಲಿ ಅವರವರ ವಿಶ್ವಾಸ ಅವರವರಿಗೆ ದೊಡ್ಡದು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಂತೂ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗುತ್ತಿದ್ದಂತೆ ತೀವ್ರ ನಿರಾಸೆಯಲ್ಲಿ ಮುಳುಗಿದಂತೆ ಕಾಣುತ್ತಿದ್ದಾರೆ. ಸಮೀಕ್ಷೆ ಪ್ರಕಟವಾದ ಮರುಕ್ಷಣ ಅವರು ತಮಗಾದ ಭ್ರಮನಿರಸನ ಕಳೆದುಕೊಳ್ಳಲು ದಿಲ್ಲಿಯಲ್ಲಿ ಕುಟುಂಬಸಮೇತರಾಗಿ ಟಿ-20 ಕ್ರಿಕೆಟ್ ಮ್ಯಾಚ್ ನೋಡುತ್ತಾ ಕುಳಿತಿದ್ದರು. ಇಡೀ ದೇಶದಲ್ಲಿ ತಮ್ಮ ರಾಜಕೀಯ ಮತ್ತು ಚುನಾವಣೆ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಬಿಕರಿ ಮಾಡಿದ್ದ ಅಮಿತ್ ಶಾ ಅವರಿಗೆ ಯಾಕೋ ಏನೋ ಕರ್ನಾಟಕ ಮೊದಲಿಂದಲೂ ದುಬಾರಿಯಾಗಿತ್ತು. ಎಷ್ಟೆಲ್ಲ ಪ್ರಯತ್ನಪಟ್ಟರೂ ಹಿಡಿತಕ್ಕೆ ಸಿಕ್ಕಿರಲಿಲ್ಲ. ಪಕ್ಷದ ಸ್ಥಳೀಯ ಮುಖಂಡರ ಕೆಮಿಸ್ಟ್ರಿಯೇ ಅವರಿಗೆ ಅರ್ಥವಾಗಿರಲಿಲ್ಲ. ಆದರೂ ನಿರಂತರ ಪ್ರಯತ್ನ ಮುಂದುವರಿಸಿದ್ದರು. ಅಂತಿಮ ಹಂತದಲ್ಲಿ ಪ್ರಧಾನಿ ಮೋದಿ ಅವರು ಚುನಾವಣೆ ಪ್ರಚಾರಕ್ಕೆ ಇಳಿದ ಮೇಲೆಯೇ ಬಿಜೆಪಿಗೆ ಇಲ್ಲೊಂದು ರಂಗು ಬಂದದ್ದು. ಕೊನೇಕ್ಷಣದ ಅವರ ಭಾಷಣಗಳಿಂದಾಗಿ ಪಕ್ಷಕ್ಕೆ 15 ರಿಂದ 20 ಸೀಟುಗಳು ಹೆಚ್ಚು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅಷ್ಟಾಗಿಯೂ ಬಿಜೆಪಿಗೆ ಸ್ಪಷ್ಟ ಬಹುಮತದ ಬಗ್ಗೆ ಮತಗಟ್ಟೆ ಸಮೀಕ್ಷೆಗಳೆಲ್ಲವೂ ಠಸ್ಸೆ ಒತ್ತದಿರುವುದು ಅಮಿತ್ ಶಾ ಕರ್ನಾಟಕದಲ್ಲಿ ಏಳೆಂಟು ತಿಂಗಳಿಂದ ಧಾರೆಯೆರೆದಿದ್ದ ಶ್ರಮವನ್ನು ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತೆ ಮಾಡಿದೆ. ನಾಳೆ ಫಲಿತಾಂಶ ಏನಾದರೂ ಆಗಬಹುದು. ಆದರೆ ಮತಗಟ್ಟೆ ಸಮೀಕ್ಷೆಗಳಂತೂ ಅವರ ನಂಬಿಕೆಯನ್ನು ಹಿಂಡಿ ಹಿಪ್ಪೆಕಾಯಿ ಮಾಡಿಟ್ಟಿದೆ.

ಆದರೆ ಯಡಿಯೂರಪ್ಪನವರ ವಿಚಾರ ಹಾಗಿಲ್ಲ. ಅವರು ಅಕ್ಷರಶಃ ಈಗಾಗಲೇ ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿತರಾವರಂತೆಯೇ ವರ್ತಿಸುತ್ತಿದ್ದಾರೆ. ಮೆಚ್ಚಬೇಕು ಅವರ ಆತ್ಮವಿಶ್ವಾಸವನ್ನು. ಮೇ 15 ಫಲಿತಾಂಶ ದಿನದಂದು ತಾವು ದಿಲ್ಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಜತೆ ಚರ್ಚಿಸಿ ಮುಖ್ಯಮಂತ್ರಿಯಾಗಿ ತಾವು ಪ್ರಮಾಣ ವಚನ ಸ್ವೀಕರಿಸಬೇಕಾದ ದಿನಾಂಕ ಗೊತ್ತು ಮಾಡಿಕೊಂಡು ಬರುವುದಾಗಿ ಹೇಳುತ್ತಿದ್ದಾರೆ. ಆತ್ಮವಿಶ್ವಾಸ ಇರಬೇಕು. ಆದರೆ ಈ ಪರಿ ಅತೀವ ಆತ್ಮವಿಶ್ವಾಸ ಕೊಂಚ ಯಡವಟ್ಟಿನ ಮಟ್ಟದ್ದೇ. ಜನ ಕೂಡ ಯಡಿಯೂರಪ್ಪ ಅವರಿಗೇನಾಗಿ ಹೋಗಿದೆ ಎಂದೇ ಮಾತಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದ ನಂತರ ಆಡಬೇಕಾದ ಮಾತನ್ನು ಅವರು ಫಲಿತಾಂಶಕ್ಕೆ ಮೊದಲೇ ರಾಕೆಟ್‌ನಂತೆ ಉಡಾಯಿಸುತ್ತಿರುವುದು ಸ್ವಲ್ಪ ಅತಿಯಾಯಿತು ಎಂಬ ಭಾವವನ್ನು ಜನಮಾನಸದಲ್ಲಷ್ಟೇ ಅಲ್ಲ, ಅವರದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲೂ ಮೂಡಿಸಿರುವುದು ಸುಳ್ಳಲ್ಲ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಆಡಿರುವ ಮಾತು ಹಲವಾರು ಸಂದೇಶಗಳನ್ನು ಚಿಮ್ಮಿಸಿದೆ. ಹೈಕಮಾಂಡ್ ಹಾಗೂ ಕಾಂಗ್ರೆಸ್ ಶಾಸಕಾಂಗ ಒಪ್ಪಿದರೆ ದಲಿತರನ್ನು ಮುಂದಿನ ಸಿಎಂ ಮಾಡಲು ತಮ್ಮದೇನೂ ಅಭ್ಯಂತರ ಇಲ್ಲ. ಆದರೆ  ಇದಕ್ಕೆ ಹೈಕಮಾಂಡ್ ಮಾತ್ರವಲ್ಲದೇ ಶಾಸಕರೂ ಒಪ್ಪಬೇಕು. ಇಲ್ಲದಿದ್ದರೆ ಸರಕಾರ ನಡೆಸೋದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಜತೆಗೆ ಯಾರೇನೇ ಹೇಳಿದರೂ ಈ ಬಾರಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರೋದು ಎಂದೂ ಸೇರಿಸಿದ್ದಾರೆ. ತಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳೋದು ಆಯಾ ಪಕ್ಷದ ನಾಯಕರ ರಾಜಕೀಯ ಕರ್ತವ್ಯ. ಹೀಗಾಗಿ ಇದರಲ್ಲಿ ವಿಶೇಷವೇನೂ ಇಲ್ಲ. ಏಕೆಂದರೆ ಹೇಳಿದವರೆಲ್ಲರ ಪಕ್ಷಗಳೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಯಾವುದಾದರೂ ಒಂದೋ ಅಥವಾ ಸಮ್ಮಿಶ್ರ ಸರಕಾರವಾದರೆ ಇಬ್ಬರೋ ಸೇರಿ ರಚನೆ ಮಾಡಬೇಕು. ಆ ವಿಚಾರ ಪಕ್ಕಕ್ಕಿರಲಿ. ಆದರೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯನವರು ದಲಿತ ಸಿಎಂ ಬಗ್ಗೆ ಪ್ರಸ್ತಾಪ ಮಾಡಿರುವುದು ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆ ಎಂಬುದರ ಬಗ್ಗೆ ಅವರಿಗಿರುವ ವಿಶ್ವಾಸದ ಕೊರತೆಯೋ ಅಥವಾ ಚಾಮುಂಡೇಶ್ವರಿ ಹಾಗೂ ಚಾಮುಂಡೇಶ್ವರಿ ಎರಡೂ ಕಡೆ ಗೆಲ್ಲುವ ಬಗ್ಗೆ ಅವರಿಗಿರುವ ಅನುಮಾನದ ಪ್ರತಿಫಲನವೋ ಗೊತ್ತಾಗುತ್ತಿಲ್ಲ. ಏಕೆಂದರೆ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅವರು ಮುಖ್ಯಮಂತ್ರಿ ಆಸೆ ಕೈಬಿಡಬೇಕು ಎಂದರೆ ಒಂದೋ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಸಿಗುವ ಬಗ್ಗೆ ಅನುಮಾನವಿರಬೇಕೋ ಅಥವಾ ತಮ್ಮ ಗೆಲುವಿನ ಬಗ್ಗೆ ಅಪನಂಬಿಕೆ ಇರಬೇಕು. ಹೀಗಾಗಿ ಸಿದ್ದರಾಮಯ್ಯನವರ ಮಾತು ಆಂತರ್ಯಮಂಥನದ ಪ್ರತಿರೂಪ ಎಂದು ಹೇಳಬಹುದು. ಒಂದೊಮ್ಮೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಸರಕಾರ ರಚನೆಗೆ ಜೆಡಿಎಸ್ ಅವಲಂಬನೆ ಅನಿವಾರ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ದೇವೇಗೌಡರು ಒಪ್ಪುವುದಿಲ್ಲ. ಒಂದೋ ಕುಮಾರಸ್ವಾಮಿ ಅವರನ್ನು ಮಾಡುತ್ತಾರೆ. ಅದಕ್ಕೆ ಕಾಂಗ್ರೆಸ್ ಒಪ್ಪುವುದಿಲ್ಲ. ಆಗ ಅವರೇನಿದ್ದರೂ ಜಾತಿಬಲ ಇಲ್ಲದ ಆರ್.ವಿ. ದೇಶಪಾಂಡೆ ಅವರಂಥ ಕಾಂಗ್ರೆಸ್ ಮುಖಂಡರೊಬ್ಬರನ್ನು ಮಾನ್ಯ ಮಾಡುತ್ತಾರೆ. 2004 ರಲ್ಲಿ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿದಂತೆ. ಯಾವುದೇ ಕಾರಣಕ್ಕೂ ಪ್ರಭಾವಿ ಜಾತಿಯವರನ್ನು ಆಗಗೊಡುವುದಿಲ್ಲ. ಈ ಧರ್ಮಸೂಕ್ಷ್ಮ ಅರಿತೇ ಸಿದ್ದರಾಮಯ್ಯವರು ದಲಿತ ಸಿಎಂ ದಾಳವನ್ನು ಮುಂಜಾಗರೂಕತೆಯಿಂದ ಉರುಳಿಸಿರಬಹುದು. ಈಗ ಪರಿಶಿಷ್ಟರು ಕರ್ನಾಟಕದ ಪ್ರಭಾವಿ ಜಾತಿಗಳಲ್ಲಿ ಒಬ್ಬರಾಗಿದ್ದಾರೆ. ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲೇ ದಲಿತ ಸಿಎಂ ಕೂಗು ಕೇಳಿಬಂದಿತ್ತು. ಡಾ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಈ ಕೂಗಿಗೆ ಹಿನ್ನೆಲೆಯಾಗಿದ್ದರು. ನಾಳೆ ಏನಾದರೂ ಮೈತ್ರಿ ಸರಕಾರದ ಅನಿವಾರ್ಯತೆ ಸೃಷ್ಟಿಯಾದಲ್ಲಿ ದಲಿತರನ್ನೇ ಸಿಎಂ ಮಾಡಲಿ. ಅಂಥ ಕೂಗಿಗೆ ತಮ್ಮದೂ ಒಂದು ಧ್ವನಿ ಸೇರಿಸಿ  ತಾವು ದಲಿತ ಸಿಎಂ ವಿರೋಧಿ ಎಂಬ ಕಳಂಕ ಕಳೆದುಕೊಳ್ಳುವುದು ಅವರ ಈ ಹೇಳಿಕೆ ಹಿಂದಿನ ಲೆಕ್ಕಾಚಾರವಿರಬಹುದು.

ಇದು ಒಂದು ಕೋನವಾದರೆ ಅದೇ ಕಾಲಕ್ಕೆ ಇಲ್ಲಿ ಮತ್ತೊಂದು ಅಂಶವೂ ಇದೆ. ಹೈಕಮಾಂಡ್ ಜತೆಗೆ ಶಾಸಕರು ಒಪ್ಪಿದರೆ ಮಾತ್ರ, ಇಲ್ಲದಿದ್ದರೆ ಸರಕಾರ ನಡೆಸೋದು ಕಷ್ಟವಾಗುತ್ತದೆ ಎಂಬ ಒಕ್ಕಣೆಯನ್ನೂ ಸಿದ್ದರಾಮಯ್ಯನವರು ಸೇರಿಸಿದ್ದಾರೆ. ಅದರ ಅರ್ಥ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರೂ ತಮಗೆ ಅಡ್ಡಬರಬಾರದು ಎಂಬ ಮುನ್ನೆಚ್ಚರಿಕೆಯನ್ನೂ ವಹಿಸಿದ್ದಾರೆ. ಏಕೆಂದರೆ ಈಗ ದಲಿತ ಸಿಎಂ ಕೂಗಿನ ಗುರಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಲಿ, ಡಾ. ಜಿ. ಪರಮೇಶ್ವರ ಅವರಿಗಾಗಲಿ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧವಾಗಿ ಬೆಂಬಲ ಸಿಗುವುದು ಕಷ್ಟ. ಏಕೆಂದರೆ ಅಷ್ಟರ ಮಟ್ಟಿಗೆ ಶಾಸಕರ ಮೇಲೆ ಸಿದ್ದರಾಮಯ್ಯನವರು ಹಿಡಿತ ಹೊಂದಿದ್ದಾರೆ. ಒಂದೈವತ್ತು ಮಂದಿ ಶಾಸಕರನ್ನು ಬೆನ್ನಿಗಿಟ್ಟುಕೊಳ್ಳುವ ತಾಕತ್ತಿದ್ದರೆ ಖರ್ಗೆ ಅವರೆಂದೂ ಮಾಜಿ ಸಿಎಂ ಆಗಿರುತ್ತಿದ್ದರು. ಹಾಗೆಂದು ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸಿಎಂ ಆಗಿದ್ದವರೆಲ್ಲರಿಗೂ ಶಾಸಕರ ಬೆಂಬಲ ಇತ್ತು ಎಂದೇನೂ ಅಲ್ಲ. ಆಗ ಹೈಕಮಾಂಡ್ ಸೂಚಿಸಿದವರೇ ಸಿಎಂ ಆಗಿರುತ್ತಿದ್ದರು. ಆದರೆ ಈಗ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಕಾಲವಲ್ಲ. ಹೈಕಮಾಂಡ್ ಬಹಳ ದುರ್ಬಲವಾಗಿದೆ. ಇಡೀ ದೇಶದಲ್ಲಿ ಗುಡಿಸಿ ಗುಂಡಾಂತರವಾದ ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಕಾಪಿಟ್ಟುಕೊಂಡಿರುವ ಸಿದ್ದರಾಮಯ್ಯ ಹೈಕಮಾಂಡ್‌ಗಿಂತಲೂ ಪ್ರಬಲರಾಗಿದ್ದಾರೆ. ಒಂದು ಲೆಕ್ಕದಲ್ಲಿ ಹೈಕಮಾಂಡ್ ಮೇಲೆಯೇ ಅವರು ಮೇಲುಗೈ ಸಾಧಿಸಿದ್ದಾರೆ. ಇದು ಗೊತ್ತಿದ್ದೆ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯನವರ ಹೇಳಿಕೆಯನ್ನು ನಾನಾ ಮೂಲೆಗಳಿಂದ ಅಳೆದು ತೂಗಿ ನೋಡಿ ಹೇಳಿಕೆ ನೀಡಿದ್ದಾರೆ. ‘ನಾನು ದಲಿತ ಎಂಬ ಕಾರಣಕ್ಕೆ ಸಿಎಂ ಪದವಿ ನೀಡುವುದು ಬೇಡ. ಕಾಂಗ್ರೆಸ್‌ನ ನಿಷ್ಠಾವಂತ ನಾಯಕ, ಕಾರ್ಯಕರ್ತ ಎಂದು ಕೊಡಲಿ’ ಎಂದು. ಅದರರ್ಥ ತಾವು ಸಿಎಂ ಆಗಲು ಶಾಸಕಾಂಗ ಸಭೆಯಲ್ಲಿ ಬೆಂಬಲ ಸಿಗುವುದಿಲ್ಲ ಎಂದು. ಏಕೆಂದರೆ ಅವರು ಸದ್ಯ ಶಾಸಕರೂ ಅಲ್ಲ. ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿಲ್ಲ. ಹೈಕಮಾಂಡ್ ಕೃಪಾಕಟಾಕ್ಷದಿಂದ ಮಾತ್ರ ಅವರು ಸಿಎಂ ಆಗಬೇಕು. ಅದನ್ನಷ್ಟೇ ಅವರು ನಂಬಿಕೊಳ್ಳಬೇಕು. ಇದು ಗೊತ್ತಿದ್ದೇ ಸಿದ್ದರಾಮಯ್ಯ ಹೈಕಮಾಂಡ್ ಜತೆ ಶಾಸಕಾಂಗ ಒಪ್ಪಿದರೆ ದಲಿತರು ಸಿಎಂ ಆಗಲು ತಮ್ಮ ಅಭ್ಯಂತರವಿಲ್ಲ ಎಂದು ಹೇಳಿರುವುದು. ಇದನ್ನರಿತೇ ಖರ್ಗೆ ಕೂಡ ಪಕ್ಷನಿಷ್ಠೆ ಮಾನದಂಡವಾಗಲಿ ಎಂದು ಕೇವಿಯೆಟ್ ಹಾಕಿಕೊಂಡಿರುವುದು.

ಇಲ್ಲಿ ಇನ್ನೂ ಒಂದು ವಿಚಾರವಿದೆ. ಒಂದೊಮ್ಮೆ ಡಾ. ಜಿ. ಪರಮೇಶ್ವರ ಅವರು ಚುನಾವಣೆಯಲ್ಲಿ ಹಿಂದಿನಂತೆಯೇ ಮಗುಚಿಕೊಂಡರೆ ಈ ದಲಿತ ಸಿಎಂ ಕೂಗಿಗೆ ವಾರಸುದಾರರು ಇಲ್ಲದಂತಾಗುತ್ತದೆ. ಖರ್ಗೆಗೆ ಶಾಸಕರ ಬೆಂಬಲ ಸಿಗುವುದಿಲ್ಲ. ಸೋತರೆ ಪರಮೇಶ್ವರಗೆ ಬೆಂಬಲದ ಅವಶ್ಯಕತೆಯೇ ಬರುವುದಿಲ್ಲ. ಆಗ ಸಿದ್ದರಾಮಯ್ಯನವರಿಗೆ ಪೈಪೋಟಿಯೇ ಇಲ್ಲದಂತಾಗುತ್ತದೆ. ಆದರೂ ತಾವು ದಲಿತ ಸಿಎಂ ಕೂಗಿನ ಪರವಾಗಿ ಇದ್ದೆವು. ಆದರೆ ದುರದೃಷ್ಟವಶಾತ್ ಆ ಸ್ಥಾನಕ್ಕೆ ಅಭ್ಯರ್ಥಿಯೇ ಇಲ್ಲ ಎಂದು ಬಿಂಬಿಸುವುದು. ದಲಿತರನ್ನು ಸಿಎಂ ಮಾಡದಿದ್ದರೂ ಆ ಸಮುದಾಯದ ವಿಶ್ವಾಸ ಗಳಿಕೆ ಪ್ರಯತ್ನಕ್ಕೆ ಇದು ಇಂಬು ನೀಡುತ್ತದೆ ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ.

ಇನ್ನೂ ಜೆಡಿಎಸ್ ವಿಚಾರಕ್ಕೆ ಬರುವುದಾದರೆ ಕಾಂಗ್ರೆಸ್ ಮತ್ತು ಬಿಜೆಪಿ ದುರದೃಷ್ಟವಷ್ಟೇ ಅದರ ಅದೃಷ್ಟದ ಮೆಟ್ಟಿಲಾ ಗುತ್ತದೆ. ಆ ಪಕ್ಷಗಳು ಸ್ಪಷ್ಟಬಹುಮತದಿಂದ ಎಷ್ಟು ದೂರ ಸರಿಯುತ್ತವೆಯೇ ಜೆಡಿಎಸ್ ಅಧಿಕಾರಕ್ಕೆ ಅಷ್ಟು ಹತ್ತಿರವಾಗುತ್ತದೆ. ಜೆಡಿಎಸ್ ಬೆಂಬಲವಿಲ್ಲದೆ ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಆಗಲಿ ಅಧಿಕಾರ ಹಿಡಿಯುವ ಹಾಗಿಲ್ಲ ಎಂಬ ಸ್ಥಿತಿ ನಿರ್ಮಾಣವಾದರೆ ಅತ್ತ ಯಡಿಯೂರಪ್ಪನವರು ಸಿಎಂ ಆಗುವುದಿಲ್ಲ, ಇತ್ತ ಸಿದ್ದರಾಮಯ್ಯನವರೂ ಅದರ ಹತ್ತಿರ ಸುಳಿಯಲಾಗುವುದಿಲ್ಲ. ಒಂದೊಮ್ಮೆ ತೃತೀಯ ರಂಗದ ಕನಸಿಟ್ಟುಕೊಂಡು ದೇವೇಗೌಡರೇನಾದರೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾದರೆ ಕುಮಾರಸ್ವಾಮಿಯೂ ಸಿಎಂ ಆಗುವುದಿಲ್ಲ. ಗೌಡರು ಹೇಳಿದ ಜಾತಿಬಲವಿಲ್ಲದವರು ಕಾಂಗ್ರೆಸ್ ಸಿಎಂ ಆಗಿ, ಎಚ್.ಡಿ. ರೇವಣ್ಣ ಉಪ ಮುಖ್ಯಮಂತ್ರಿ ಆಗುತ್ತಾರೆ. ಅಲ್ಲಿಗೆ ಸಿಎಂ ಕುರ್ಚಿ ಮೇಲೆ ಟವೆಲು ಹಾಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಮೂವರಿಗೂ ಅದು ‘ಅಮರಾವತಿಯ ಐರಾವತ’!

ಇಷ್ಟಕ್ಕೂ ಮತಗಟ್ಟೆ ಸಮೀಕ್ಷೆಗಳನ್ನೇ ಗೊಂದಲಕ್ಕೆ ಸಿಕ್ಕಿಸಿರುವುದು ಸುಮಾರು 30 ರಿಂದ 40 ಕ್ಷೇತ್ರಗಳ ತೀರ್ಪು ನಿರ್ಣಯ ಆಗುವುದು ಕೇವಲ 500 ರಿಂದ 2000 ಮತಗಳ ಅಂತರದಿಂದ ಎಂಬ ಕಾರಣಕ್ಕೆ. ಇದು ಯಾವುದೇ ಪಕ್ಷದ ಪರ ಅಥವಾ ವಿರುದ್ಧವಾಗಿ ತಿರುಗಬಹುದು. ಇದರಿಂದ ಬಹುಮತದ ಅಂಚಿನಲ್ಲಿರುವ ಪಕ್ಷಗಳು 125 ಸ್ಥಾನಗಳನ್ನು ದಾಟಿ ಮುಂದಕ್ಕೆ ಹೋಗಬಹುದು. ತಮಗೇ 125 ಸ್ಥಾನಗಳು ಬರಬಹುದು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹೇಳುತ್ತಿರುವುದು ಇದಕ್ಕಾಗಿಯೇ. ಸರಕಾರದ ಭಾಗವಾಗುವ ಜೆಡಿಎಸ್ ಆಸೆಯನ್ನು ಜೀವಂತವಾಗಿಟ್ಟಿರುವುದು ಕೂಡ ಇದೇ ಆಗಿದೆ.

ಇವಿಷ್ಟೂ ನಾನಾ ಮತಗಟ್ಟೆ ಸಮೀಕ್ಷೆಗಳು ವಿವಿಧ ಪಕ್ಷಗಳ ವಲಯದಲ್ಲಿ ಉಡಾಯಿಸಿರುವ ಊಹಾತ್ಮಕ, ವ್ಯೂಹಾತ್ಮಕ ಲೆಕ್ಕಾ ಚಾರಗಳು. ಇದನ್ನೇನಾದರೂ ಮೀರಿಸಬೇಕೆಂದರೆ ಆ ಶಕ್ತಿ ಇರುವುದು ನಾಳಿನ ಫಲಿತಾಂಶಕ್ಕೆ ಮಾತ್ರ. ಇಷ್ಟಕ್ಕೂ ಚುನಾವಣೋತ್ತರ ಸಮೀಕ್ಷೆಗಳೂ ಸೀಮಿತ ಚೌಕಟ್ಟಿನ ಮೇಲೆ ಕಟ್ಟಿರುವ ಊಹಾಗೋಪುರವೇ ತಾನೇ!

ಲಗೋರಿ : ಲೆಕ್ಕ ಅಂದ್ಮೇಲೆ ತಪ್ಪು, ಸರಿ ಎರಡೂ ಇರುತ್ತದೆ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply