ಅದೃಷ್ಟದಾಟದಲ್ಲಿ ಮುಗ್ಗರಿಸಿ ಬಿದ್ದ ಬಿಜೆಪಿ, ಅಧಿಕಾರದತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ!

ಡಿಜಿಟಲ್ ಕನ್ನಡ ಟೀಮ್:
ನಿರೀಕ್ಷೆಯಂತೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಅದೃಷ್ಟದಾಟದಲ್ಲಿ ಮಗುಚಿ ಬಿದ್ದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಏರ್ಪಡಿಸಿಕೊಂಡು ಅಧಿಕಾರದ ಗದ್ದುಗೆಯತ್ತ ದಾಪುಗಾಲು ಹಾಕಿವೆ.
ಎಲ್ಲೋ ಒಂದೆರಡು ಹೊರತುಪಡಿಸಿ ಪಕ್ಷಗಳ ಬಲಾಬಲ ಲೆಕ್ಕಾಚಾರದಲ್ಲಿ ಮತಗಟ್ಟೆ ಸಮೀಕ್ಷೆಗಳೆಲ್ಲವೂ ತಲೆಕೆಳಗಾಗಿವೆ. 222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 105, ಕಾಂಗ್ರೆಸ್ 77, ಜೆಡಿಎಸ್ 39 ಹಾಗೂ ಇಬ್ಬರು ಪಕ್ಷೇತರರು ಗೆದ್ದುಬಂದಿವೆ. ಅತಂತ್ರ ಸ್ಥಿತಿ ಮನದಟ್ಟಾಗುತ್ತಿದ್ದಂತೆ ಕೊಂಚವೂ ತಡಮಾಡದೆ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತೀರ್ಮಾನಿಸಿದ್ದು, ಮೈತ್ರಿ ಸರಕಾರ ಬಹುತೇಕ ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುವ ಹಾದಿಯಲ್ಲಿದ್ದಾರೆ.
ಪ್ರತ್ಯೇಕ ಧರ್ಮ ರಚನೆಗೆ ಕೈಹಾಕಿ ಲಿಂಗಾಯತರ ವಿರೋಧ ಕಟ್ಟಿಕೊಂಡು, ದೇವೇಗೌಡರ ಮೇಲಿನ ಕೋಪವನ್ನು ಅವರು ಪ್ರತಿನಿಧಿಸುವ ಒಕ್ಕಲಿಗ ಸಮುದಾಯದ ಮೇಲೆ ತೋರಿದ ಸಿದ್ದರಾಮಯ್ಯನವರು ಇದಕ್ಕಾಗಿ ಭಾರೀ ಬೆಲೆ ತೆತ್ತಿದ್ದಾರೆ.  ಅದೇ ಕಾಲಕ್ಕೆ ತಾವು ಹಿಂದಿನಿಂದ ಪ್ರತಿಪಾದಿಸಿಕೊಂಡು ಬಂದಿದ್ದ ಅಹಿಂದ ಮತಗಳನ್ನು ಕ್ರೋಡೀಕರಿಸುವಲ್ಲಿ ವಿಫಲರಾಗಿದ್ದು, ತವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನ ಜಿ.ಡಿ. ದೇವೇಗೌಡರ ವಿರುದ್ಧ 32 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲುವ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ. ಯಾವುದಕ್ಕೂ ಇರಲಿ ಎಂದು ಸ್ಪರ್ಧಿಸಿದ್ದ ಬಾದಾಮಿಯಲ್ಲಿ ಗೆದ್ದಿದ್ದರೂ  ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಬಯಕೆಯಿಂದ ವಂಚಿತರಾಗಿದ್ದಾರೆ.
ಆಂತರಿಕ ಕಲಹದಿಂದ ನರಳುತ್ತಿದ್ದ ಬಿಜೆಪಿಗೆ ಪ್ರಧಾನಿ ಮೋದಿ ಅವರು ಚುನಾವಣೆ ಪ್ರಚಾರಕ್ಕೆ ಬಂದ ನಂತರ ಸಂಜೀವಿನಿ ಸಿಕ್ಕಂತಾಗಿತ್ತು. ಮೋದಿ ಅವರ ಅಂತಿಮ ಕ್ಷಣದ ರಾಲಿಗಳಿಂದಾಗಿ ಬಿಜೆಪಿಗೆ 15 ರಿಂದ 20 ಸ್ಥಾನಗಳು ಹೆಚ್ಚುವರಿಯಾಗಿ ಬಂದದ್ದು ಸುಳ್ಳಲ್ಲ. ಆದರೆ ಅದು ಅಧಿಕಾರದ ದಡ ಮುಟ್ಟಿಸುವಲ್ಲಿ ಕೊಂಚ ಹಿಂದೆ ಬಿದ್ದಿತು. ಡಿಯೂರಪ್ಪನವರು ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಲು ದಿನಾಂಕ, ವಾರ, ಗಳಿಗೆ ಎಲ್ಲ ನಿಗದಿ ಮಾಡಿಕೊಂಡಿದ್ದರು. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ರಾಜಕೀಯ ಕುಂಟಾಬಿಲ್ಲೆಯಲ್ಲಿ ಅವರು ಆ ಸ್ಥಾನದ ಬಳಿ ಎಡವಿ ಬಿದ್ದಿದ್ದಾರೆ. ಅಧಿಕಾರ ಹಿಡಿಯಲು ಬೇಕಾದ 112 ಸ್ಥಾನಗಳಿಗೆ ಕೊರತೆ ಬಿದ್ದ 7 ಸ್ಥಾನಗಳನ್ನು ಪಕ್ಷೇತರರು ಹಾಗೂ ಆಪರೇಷನ್ ಕಮಲದ ಮೂಲಕ ತುಂಬಿಕೊಳ್ಳಲು ಚಿಂತನೆ ಮಾಡುವಷ್ಟರಲ್ಲಿ ಕಾಂಗ್ರೆಸ್ ವರಿಷ್ಠರು ಜೆಡಿಎಸ್ ಜತೆ ಮೈತ್ರಿ ತೀರ್ಮಾನ ತೆಗೆದುಕೊಂಡಿದ್ದರಿಂದ ಬಿಜೆಪಿ ಅಧಿಕಾರದ ಆಸೆ ಸದ್ಯಕ್ಕೆ ಕಮರಿ ಬಿದ್ದಿದೆ. ಆದರೆ ಅಲ್ಪ ಬಹುಮತದೊಂದಿಗೆ ಆಟ ಆಡಬೇಕಿರುವ ಕಾಂಗ್ರೆಸ್-ಜಿೆಡಿಎಸ್ ಮೈತ್ರಿ ಮುರಿಯಲು ಬಿಜೆಪಿ ಪ್ರಯತ್ನ ಮುಂದುವರಿಸುವ ಸಾಧ್ಯತೆಗಳಿವೆ.
ಜೆಡಿಎಸ್ ನಿರೀಕ್ಷೆಯಂತೆ ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಭಾವ ಉಳಿಸಿಕೊಂಡಿದ್ದು, 39 ಸ್ಥಾನಗಳ ಜತೆ ಬಂಪರ್ ಅಧಿಕಾರದತ್ತ ಸಾಗಿದೆ. ಭಾರತದಲ್ಲಿ ಒಂದೊಂದೇ ರಾಜ್ಯವನ್ನು ಕಬಳಿಸುತ್ತಾ ಬಂದಿದ್ದ ಬಿಜೆಪಿಗೆ ಕಡಿವಾಣ ಹಾಕಲು ಕಾಂಗ್ರೆಸ್-ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದು, ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ಸಜ್ಜಿಕೆ ನಿರ್ಮಾಣಕ್ಕೆ ಇದೊಂದು ವೇದಿಕೆಯೂ ಆಗಲಿದೆ.

Leave a Reply