ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ಸ್ವೀಕಾರ ಗುರುವಾರ

ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ಶಾಸಕಾಂಗ ಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪನವರು ರಾಜಭವನದ ಗಾಜಿನ ಮನೆಯಲ್ಲಿ ಗುರುವಾರ ಬೆಳಗ್ಗೆ 9.30 ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವರು.
ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಬುಧವಾರ ರಾತ್ರಿ ಆಹ್ವಾನ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಯಡಿಯೂರಪ್ಪನವರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.
ಬಹುಮತದ ಕೊರತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಡಿಯೂರಪ್ಪ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದನ್ನುಸಾಬೀತುಪಡಿಸಿದ ನಂತರ ಪೂರ್ಣಪ್ರಮಾಣದ ಸಚಿವ ಸಂಪುಟ ರಚಿಸಲಿದ್ದಾರೆ. 104 ಸದಸ್ಯಬಲ ಹೊಂದಿರುವ ಬಿಜೆಪಿಗೆ ಸರಳ ಬಹುಮತಕ್ಕೆ ಇನ್ನೂ ಎಂಟು ಶಾಸಕರ ಅಗತ್ಯವಿದೆ. ಅದನ್ನುವರು ಆಪರೇಷನ್ ಕಮಲದ ಮೂಲಕ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಮಂಗಳವಾರ ಬೆಳಗ್ಗೆಯಿಂದ ಪಕ್ಷಕ್ಕೆ ಬಹುಮತ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದರು. ಬಿಜೆಪಿಗೆ ಬಹುಮತ ಕೊರತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್  ಮೈತ್ರಿಕೂಟ ರಚಿಸಿಕೊಂಡು ಸರಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಅಹವಾಲು ಸಲ್ಲಿಸಿದ್ದವು. ಆದರೆ ಅತಿದೊಡ್ಡ ಪಕ್ಷ ಬಿಜೆಪಿಗೇ ರಾಜ್ಯಪಾಲರು ಮೊದಲು ಈ ಅವಕಾಶ ಕಲ್ಪಿಸಿದ್ದಾರೆ.
ಈ ಮಧ್ಯೆ ಯಡಿಯೂರಪ್ಪನವರು ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಸಭೆಯಲ್ಲಿ ಪಕ್ಷದ ಎಲ್ಲ 104 ನೂತನ ಶಾಸಕರು ಪಾಲ್ಗೊಂಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ರಾಜಭವನಕ್ಕೆ ತೆರಳಿದ ಯಡಿಯೂರಪ್ಪ, ಅನಂತಕುಮಾರ್, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ ಮತ್ತಿತರ ನಾಯಕರು ಬಿಜೆಪಿಗೆ ಸರಕಾರ ರಚನೆ ಅವಕಾಶ ಪ್ರತಿಪಾದನೆ ಕುರಿತ ಪತ್ರ ಸಲ್ಲಿಸಿದರು.
ಜೆಡಿಎಸ್- ಕಾಂಗ್ರೆಸ್ ನಿಂದಲೂ ಮನವಿ
ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಪಕ್ಷಗಳ ಶಾಸಕಾಂಗ ಸಭೆ ನಡೆಸಿ ಸರಕಾರ ರಚಿಸಲು ತಮಗೇ ಅವಕಾಶ ನೀಡಬೇಕೆಂದು ರಾಜ್ಯಪಾಲರಿಗೆ ಜಂಟಿ ಮನವಿ ಸಲ್ಲಿಸಿದರು.
ಜೆಡಿಎಸ್ ಶಾಸಕಾಂಗ ನಾಯಕರಾಗಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಆದರೆ ಕಾಂಗ್ರೆಸ್ ಶಾಸಕಾಂಗ ಸಭೆ ಸೇರಿದರೂ ನಾಯಕನ ಆಯ್ಕೆ ಮಾಡಿಲ್ಲ. ಬದಲಿಗೆ ಜೆಡಿಎಸ್ ಜತೆ ಮೈತ್ರಿ ಹಾಗೂ ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿಗೆ ಬೆಂಬಲ ನೀಡುವ ನಿರ್ಣಯ ಕೈಗೊಳ್ಳಲಾಯಿತು.

Leave a Reply