ರಂಗೇರಿದ ರಾಜ್ಯ ರಾಜಕೀಯದಲ್ಲಿ ನಾಯಕರ ನವರಂಗಿ ಆಟಗಳು

ಡಿಜಿಟಲ್ ಕನ್ನಡ ಟೀಮ್:
ಅತಂತ್ರ ವಿಧಾನಸಭೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಈಗ ಜೆಪಿಯ ಜನಮತ ಹಾಗೂ ಕಾಂಗ್ರೆಸ್- ಜೆಡಿಎಸ್ ಬಹುಮತಗಳ ನಡುವಣ ಹಗ್ಗಜಗ್ಗಾಟ ಆರಂಭವಾಗಿದೆ. ಪರಿಣಾಮ ಬುಧವಾರ ಬೆಳಗ್ಗೆಯಿಂದಲೇ ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆಗಳು ನಡೆದಿವೆ.
ಕುಮಾರನ ಚಾಲೆಂಜ್: ಬುಧವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದ್ದು, ಬಿಜೆಪಿಗೆ ಎಚ್ಚರಿಕೆ ನಡೆಸಿದ್ದಾರೆ. ‘ಆಪರೇಷನ್ ಕಮಲಕ್ಕೆ ಮುಂದಾಗಿ ನಮ್ಮ ಶಾಸಕರನ್ನು ಖರೀದಿಸುವ ಪ್ರಯತ್ನ ನಡೆಯಲಾಗುತ್ತಿದೆ. ನಮ್ಮ ಶಾಸಕರಿಗೆ ₹ 100 ಕೋಟಿ ಹಾಗೂ ಕ್ಯಾಬಿನೆಟ್ ಸ್ಥಾನ ನೀಡುವ ಆಮಿಷ ನೀಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆದರೆ, ನಾವು ಬಿಜೆಪಿಯ 10-15 ಶಾಸಕರನ್ನು ಸೆಳೆದುಕೊಳ್ಳಬೇಕಾಗುತ್ತದೆ’ ಎಂಬ ಗಂಭೀರ ಆರೋಪದ ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ವೇಳೆ ಜೆಡಿಎಸ್ ನ 37 ಶಾಸಕರು ಸಹಿ ಹಾಕಿ ಕುಮಾರಸ್ವಾಮಿ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಬಿಎಸ್ ವೈ ಆಯ್ಕೆ: ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್ ಯಡಿಯೂರಪ್ಪ ಆಯ್ಕೆಯಾಗಿದ್ದಾರೆ. ನಂತರ ತಮ್ಮ ಇತರೆ ನಾಯಕರೊಂದಿಗೆ ರಾಜಭವನಕ್ಕೆ ತೆರಳಿದ ಬಿಎಸ್ ವೈ, 104 ಶಾಸಕರ ಬೆಂಬಲದ ಸಹಿ ಪತ್ರವನ್ನು ರಾಜ್ಯಪಾಲರಿಗೆ ನೀಡಿ ಸರಕಾರ ರಚಿಸಲು ಅವಕಾಶ ಕೋರಿದರು.
ಕಾಂಗ್ರೆಸ್ ಶಾಸಕಾಂಗ ಸಭೆ: ಇತ್ತ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಇದರಲ್ಲಿ ಹೈದರಾಬಾದ್ ಕರ್ನಾಟಕದ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಪರಿಣಾಮ ಆಪರೇಷನ್ ಕಮಲದ ಅನುಮಾನಗಳು ವ್ಯಕ್ತವಾಗಿದೆ.
ರೆಸಾರ್ಟ್ ರಾಜಕೀಯ: ಇನ್ನು ಆಪರೇಷನ್ ಕಮಲದ ಭೀತಿಯಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಹಿಡಿದಿಡಲು ಸಜ್ಜಾಗಿವೆ. ಕಾಂಗ್ರೆಸ್ ಪಕ್ಷ ತಮ್ಮ ಶಾಸಕರನ್ನು ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಲು ಮುಂದಾದರೇ, ಜೆಡಿಎಸ್ ಕೇರಳದ ಕೊಚ್ಚಿಯಲ್ಲಿರುವ ರೆಸಾರ್ಟ್ ಗೆ ಶಾಸಕರನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿಡುವ ಜವಾಬ್ದಾರಿಯನ್ನು ಸಂಸದ ಡಿ.ಕೆ ಸುರೇಶ್ ಹೊತ್ತುಕೊಂಡಿದ್ದಾರೆ.
ಜಾವಡೇಕರ್ ಸ್ಪಷ್ಟನೆ: ಕುಮಾರಸ್ವಾಮಿ ಅವರ 100 ಕೋಟಿ ಹಾಗೂ ಕ್ಯಾಬಿನೆಟ್ ಆಮೀಷದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ಕರ್ನಾಟಕದಲ್ಲಿ ಯಾವುದೇ ಕುದುರೆ ವ್ಯಾಪಾರಕ್ಕೂ ಮುಂದಾಗಿಲ್ಲ. ಸರಕಾರ ಮಾಡುವುದು ನಮ್ಮ ಸಂವಿಧಾನದ ಹಕ್ಕು. ಹೆಚ್ಚು ಮತ ಪಡೆದಿರುವ ಪಕ್ಷಕ್ಕೆ ಮೊದಲ ಅವಕಾಶ ನೀಡಬೇಕ ಅಥವಾ ಚುನಾವಣೆ ನತರದ ಮೈತ್ರಿಗೆ ಮೊದಲು ಅವಕಾಶ ನೀಡಬೇಕೋ ಎಂಬುದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ ಎಂದಿದ್ದಾರೆ.
ಡಿಕೆಶಿಗೆ ಡಿಸಿಎಂ: ರಾಜ್ಯ ಕಾಂಗ್ರೆಸ್ ನ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಬೇಡಿಕೆ ಇಟ್ಟಿರುವ ವಿಚಾರವಾಗಿ ವರದಿಗಳು ಬಂದಿವೆ. ಜೆಡಿಎಸ್ ಜತೆಗಿನ ಮೈತ್ರಿಯಲ್ಲಿ ಒಕ್ಕಲಿಗ ನಾಯಕ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಪಟ್ಟ ನೀಡಿರುವ ಸಂದರ್ಭದಲ್ಲಿ, ಅದೇ ಸಮುದಾಯಕ್ಕೆ ಸೇರಿರುವ ಡಿಕೆಶಿಗೆ ಡಿಸಿಎಂ ಪಟ್ಟ ಅಸಾಧ್ಯದ ಮಾತಾಗಿದೆ.
ಆಪರೇಷನ್ ಹಸ್ತ: ಬಿಜೆಪಿ ಅಧಿಕಾರ ಹಿಡಿಯಲು ಆಪರೇಷನ್ ಕಮಲಕ್ಕೆ ಮುಂದಾಗುತ್ತಿರುವ ಸುದ್ದಿ ಕೇಳುತ್ತಿದ್ದಂತೆ ಅತ್ತ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆಪರೇಷನ್ ಹಸ್ತಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಬಿಜೆಪಿ ವಿರುದ್ಧ ಮುಯ್ಯಿಗೆ ಮುಯ್ಯಿ ಎಂಬ ತಂತ್ರಕ್ಕೆ ಮುಂದಾಗಿದ್ದಾರೆ. ಬಿಜೆಪಿಯ ಶಾಸಕರನ್ನು ಕಾಂಗ್ರೆಸ್ ಗೆ ಸೆಳೆಯುವ ಜವಾಬ್ದಾರಿಯನ್ನು ಜಿ.ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ಹೆಗಲಿಗೆ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಿಂದ ಸುಪ್ರೀಂ ಮೊರೆ: ರಾಜ್ಯಪಾಲರು ಯಾರಿಗೆ ಮೊದಲು ಸರಕಾರ ರಚನೆಗೆ ಅವಕಾಶ ನೀಡುತ್ತಾರೆ ಎಂಬುದನ್ನು ನೋಡಿಕೊಂಡು ಕಾಂಗ್ರೆಸ್ ಸುಪ್ರೀಂ ಕೋರ್ಟ್ ಅಥವಾ ರಾಷ್ಟ್ರಪತಿ ಅವರ ಮೋರೆ ಹೋಗಲು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಸಿದ್ದು ವಿರುದ್ಧ ಟೀಕೆ: ಚುನಾವಣೆ ಫಲಿತಾಂಶಕ್ಕೂ ಮುನ್ನ ಕರ್ನಾಟಕ ಕಾಂಗ್ರೆಸ್ ನ ದಳಪತಿಯಂತೆ ಬೀಗುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕರೇ ವಾಗ್ದಾಳಿ ಆರಂಭಿಸಿದ್ದಾರೆ. ಮಾಜಿ ಸ್ಪೀಕರ್ ಕೋಳಿವಾಡ ಕಿಡಿ ಕಾರಿದ್ದಾರೆ. ‘ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬಾರದು. ಸಿದ್ದರಾಮಯ್ಯನಿಂದ ಕಾಂಗ್ರೆಸ್ ಗೆ ಅನುಕೂಲವಾಗಿಲ್ಲ. ಸಿದ್ದರಾಮಯ್ಯ ನನಗಿಂತ 13 ವರ್ಷ ಬಚ್ಚಾ. ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

Leave a Reply