ಕರ್ನಾಟಕ ರಾಜಕೀಯ ಮೇಲಾಟ- ಮಧ್ಯರಾತ್ರಿ ಸುಪ್ರೀಂಕೋರ್ಟ್‌ನಲ್ಲಿ ನಡೆದಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್, ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ರು. ತಡರಾತ್ರಿಯೇ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ ತಂಡ. ರಾಜ್ಯಪಾಲರ ನಿರ್ಧಾರವನ್ನು ನಾವು ತಡೆ ನೀಡಿದರೆ, ಸಂವಿಧಾನ ವಿರೋಧಿ ಆಗಲಿದೆ ಅನ್ನೋ ಅಂಶವನ್ನು ಪ್ರತಿಪಾದಿಸಿದೆ. ಜೊತೆಗೆ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡುವ ಔಚಿತ್ಯವೇನು ಎಂದು ಪ್ರಶ್ನಿಸಿದೆ. ಜೊತೆಗೆ ನಾಳೆ ಮಧ್ಯಾಹ್ನ 2 ಗಂಟೆಯೊಳಗೆ ಬೆಂಬಲ ನೀಡಿರುವ ಶಾಸಕರ ಸಹಿಯೊಂದಿರುವ ಪಟ್ಟಿ ನೀಡುವಂತೆ ತಾಕೀತು ಮಾಡಿದೆ.

ರಾಜ್ಯಪಾಲರು ಬಹುಮತ ಸಾಬೀತು ಮಾಡಲು 15 ದಿನಗಳ ಕಾಲಾವಕಾಶ ನೀಡಿದ್ರು.. ಆದ್ರೀಗ ಸುಪ್ರೀಂಕೋರ್ಟ್ ನಾಳೆ ಮಧ್ಯಾಹ್ನದ ಒಳಗೆ ಬೆಂಬಲ ನೀಡಿರುವವರ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿರೋದು ಬಿಜೆಪಿ ಬಳಗಕ್ಕೆ ನುಂಗಲಾರದ ತುತ್ತಾಗಿದೆ. ಒಂದು ವೇಳೆ ನಾಳೆ ಮಧ್ಯಾಹ್ನದ ಒಳಗೆ ಆಪರೇಷನ್ ಮಾಡಿ‌ ಬೆಂಬಲ ಗಿಟ್ಟಿಸಲು ಸಾಧ್ಯವಾಗದೇ ಹೋದಲ್ಲಿ ಬಿಎಸ್ ಯಡಿಯೂರಪ್ಪ ಏಕ್ ದಿನ್ ಕಾ ಸುಲ್ತಾನ್ ಎನ್ನುವ ಹಾಗೆ ಒಂದು ದಿನಕ್ಕೆ ಮಾತ್ರ ಸಿಎಂ ಆಗಲಿದ್ದಾರೆ. ಆ ಬಳಿಕ ಸುಪ್ರೀಂಕೋರ್ಟ್ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಸರ್ಕಾರ ರಚನೆ ಮಾಡುವಂತೆ ನಿರ್ದೇಶನ ಮಾಡಬಹುದು.. ಆಗ ಕಾಂಗ್ರೆಸ್, ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಕುಮಾರಸ್ವಾಮಿ ಸಿಎಂ ಆಗಿ ಪದಗ್ರಹಣ ಮಾಡಬಹುದು.

ಬಿಜೆಪಿ ಈ ಬಾರಿ ಆಪರೇಷನ್ ಹಸ್ತ ಮಾಡಲು ಸಾಕಷ್ಟು ಹರಸಾಹಸ ಪಡ್ತಿದೆ. ಯಾಕಂದ್ರೆ ಈ ಬಾರಿ ಶಾಸಕರು ಆಪರೇಷನ್‌ಗೆ ಒಳಗಾಗಲು ಹೆದರುತ್ತಿದ್ದಾರೆ. ಯಾಕಂದ್ರೆ ಕಳೆದ ಬಾರಿ ಇದೇ ರೀತಿ ಆಪರೇಷನ್‌ಗೆ ಒಳಗಾಗಿದ್ದ ಶಾಸಕರು ರಾಜಕೀಯದಲ್ಲಿ ಅನುಭವಿಸಿರುವ ಸೋಲನ್ನು ಕಂಡು ಹಣದಾಸೆಗೆ ಪಕ್ಷಾಂತರ ಮಾಡಲು ಹಿಂಜರಿಯುತ್ತಿದ್ದಾರೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಶಾದಕರು ಆಪರೇಷನ್‌ಗೆ ಒಳಗಾದರೆ ರಾಜಕೀಯ ಜೀವನವೇ ಮುಗಿದು ಹೋದಂತೆ ಎನ್ನುವ ಲೆಕ್ಕಾಚಾರವಿದೆ. ಈಗಾಗಲೇ ಜೆಡಿಎಸ್‌ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಸೇರಿದ ಬಹುಪಾಲು ನಾಯಕರು ಹೀನಾಯವಾಗಿ ಸೋಲನ್ನಪ್ಪಿರೋದು ಆಪರೇಷನ್‌ಗೆ ಒಳಗಾಗಲು ಹೆದರುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಆಪರೇಷನ್ ಮಾಡಲು ಕಷ್ಟವಾಗ್ತಿದೆ. ಒಂದು ವೇಳೆ ಆಪರೇಷನ್ ಮಾಡಲು ಸಾಧ್ಯವಾಗದಿದ್ರೆ ಬಿಎಸ್ ಯಡಿಯೂರಪ್ಪ ಏಕ್ ದಿನ್ ಕಾ ಸುಲ್ತಾನ್ ಆಗಲಿದ್ದಾರೆ.

Leave a Reply