ರಾಜಕೀಯ ಅರ್ಥವಾಗದೆ ನಂಬಿ ಕೆಟ್ಟವರು ಯಾರು?

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್‌ ಪಕ್ಷದಲ್ಲಿ ಶಾಸಕರಾಗಿದ್ದ ಮಾಜಿ ಸಚಿವ ನಾಗಮಂಗಲದ ಚೆಲುವರಾಸ್ವಾಮಿ, ಮಾಗಡಿಯ ಹೆಚ್.ಸಿ ಬಾಲಕೃಷ್ಣ, ಚಾಮರಾಜಪೇಟೆಯ ಜಮೀರ್ ಅಹ್ಮದ್ ಖಾನ್, ಶ್ರೀರಂಗಪಟ್ಟಣದ ರಮೇಶ್ ಬಂಡಿಸಿದ್ದೇಗೌಡ, ಮಹಾಲಕ್ಷಿಲೇಔಟ್‌ನ ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್ ಅನ್ಸಾರಿ, ಭೀಮಾನಾಯ್ಕ್ ಸೇರಿದಂತೆ 8 ಮಂದಿ ಹಿಂದಿನ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಜೆಡಿಎಸ್‌ಗೆ ಪೆಟ್ಟುಕೊಟ್ಟು ರೆಬೆಲ್ಸ್ ಆದರು. ಆ ಬಳಿಕ ರಾಜಕೀಯ ಲೆಕ್ಕಾಚಾರ ಅರ್ಥ ಮಾಡಿಕೊಂಡ ಮಹಾಲಕ್ಷ್ಮಿ ಲೇಔಟ್‌ನ ಗೋಪಾಲಯ್ಯ, ಕ್ಷಮಾಪಣೆ ಕೋರಿಕೊಂಡು ಜೆಡಿಎಸ್‌ನಲ್ಲೇ ಉಳಿದುಕೊಂಡ್ರು. ಉಳಿದ ಮುಖಂಡರು ದೇವೇಗೌಡರನ್ನು ಬೈದುಕೊಂಡು ತಿರುಗುತ್ತಾ ರಾಜಕಾರಣ ಮಾಡಲು ಶುರು ಮಾಡಿದ್ರು. 8 ಜನರಲ್ಲಿ ಐವರು ನಾಯಕರು ಸೋತು ಸುಣ್ಣವಾಗಿದ್ದಾರೆ. ರಾಜಕೀಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಗೆದ್ದ ಮೂವರು ಮತ್ತೆ ಕುಮಾರಸ್ವಾಮಿ ಹಿಂದೆ ಮುಂದೆ ತಿರುಗುತ್ತಿದ್ದಾರೆ.

ಈಗಾಗಲೇ ಜೆಡಿಎಸ್‌ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ಘೋಷಣೆ ಮಾಡಿದ್ದು, ಸಿದ್ದರಾಮಯ್ಯ ಕೂಡ ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನೇ ನಂಬಿಕೊಂಡು ಕಾಂಗ್ರೆಸ್ ಸೇರಿದ್ದ ಈ ಮಾಜಿ ಶಾಸಕರು ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಆದರೆ ಸೋತಿರುವ ಕಾರಣಕ್ಕೆ ಸಿದ್ದರಾಮಯ್ಯ ಕೂಡ ಯಾವುದೇ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಇದ್ದ ಅಧಿಕಾರವೂ ಹೋಗಿ ಕೇವಲ ಶಾಸಕರಾಗಿದ್ದಾರೆ. ತಮ್ಮ ಹೈಕಮಾಂಡ್ ನಾಯಕರನ್ನೇ ಗಿರಗಿಟಲೆ ಹೊಡೆಸಿದ್ದ ಸಿದ್ದರಾಮಯ್ಯ, ಇದೀಗ ಹೈಕಮಾಂಡ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಜೆಡಿಎಸ್‌ಗೆ ಬೆಂಬಲ ಘೋಷಣೆ ಮಾಡಿ ಅಂದ್ರೆ ಕೈಕಟ್ಟಿ ನಿಂತು ಬೆಂಬಲ ಘೋಷಣೆ ಮಾಡಿದ್ದಾರೆ. ಅಪರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲು ಸಾಧ್ಯವಿಲ್ಲ ಎಂದು ಅಬ್ಬರಿಸಿದ್ದ ಸಿದ್ದರಾಮಯ್ಯ, ಅದೇ ಕುಮಾರಸ್ವಾಮಿಯನ್ನು ಸಿಎಂ ಮಾಡಲು ಓಡಾಡ್ತಿದ್ದಾರೆ ಅನ್ನೋದು ನುಂಗಲಾರದ ತುತ್ತಾಗಿದೆ.

ವಿಶೇಷ ಅಂದ್ರೆ, ಜಮೀರ್ ಅಹ್ಮದ್ ಖಾನ್, ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯ್ಕ್ ಗೆಲುವು ಸಾಧಿಸಿದ್ದರೂ ಅದೇ ಕುಮಾರಸ್ವಾಮಿ ಅವರ ಬೆನ್ನಿಗೆ ನಿಲ್ಲುವ ಪರಿಸ್ಥಿತಿ ಬಂದಿದೆ. ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದ ಹಾಗೆ ಹೇಳುತ್ತಾ ಪ್ರಚಾರ ನಡೆಸಿದ್ದ ಜಮೀರ್, ಇದೀಗ ನಾನು ಕುಮಾರಣ್ಣ ಹಳೇ ದೋಸ್ತಿ ಎನ್ನುವ ಮೂಲಕ ಜಾಣ್ಮೆ ಹೆಜ್ಜೆ ಇಟ್ಟಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯ್ಕ್ ಕೂಡ, ಕುಮಾರಣ್ಣನಿಗೆ ಸಲಾಮ್ ಹೊಡೆದು, ನಮ್ಮ ತಪ್ಪನ್ನು ಹೊಟ್ಟೆಗೆ ಹಾಕಿಕೊಳ್ಳಿ ಎಂದು ಹೇಳುವ ಮೂಲಕ ಮತ್ತೆ ಅದೇ ನಾಯಕನ ಬೆನ್ನ ಹಿಂದೆ ನಿಂತಿದ್ದಾರೆ. ಇದೀಗ ಮಂಡ್ಯ ಭಾಗದಲ್ಲಿ ಸೋತು ಸುಣ್ಣವಾಗಿರುವ ಚೆಲುವರಾಸ್ವಾಮಿ, ರಮೇಶ್ ಬಂಡಿಸಿದ್ದೆಗೌಡ, ಬಾಲಕೃಷ್ಣ ಶಾಸಕ ಜಮೀರ್ ವಿರುದ್ಧ ಗರಂ ಆಗಿದ್ದು, ನಮ್ಮನ್ನು ದಿಕ್ಕು ತಪ್ಪಿಸಿ, ಇದೀಗ ಕುಮಾರಸ್ವಾಮಿ ಜೊತೆ ಅಧಿಕಾರ ಉಣ್ಣಲು ಸಜ್ಜಾಗ್ತಿದ್ದಾರೆ, ನಾವೇಕೆ ಇವರ ಜೊತೆ ಕೈ ಜೋಡಿಸಬೇಕಿತ್ತು, ನಾವು ಅಂದೇ ಕುಮಾರಸ್ವಾಮಿ ಜೊತೆ ಕ್ಷಮಾಪಣೆ ಕೋರಿದ್ರೆ ಸರಿಯಾಗ್ತಿತ್ತು. ಸೋಲು ಕಾಣುವ ಅವಶ್ಯಕತೆಯೂ ಇರುತ್ತಿರಲಿಲ್ಲ, ನಾವು ರಾಜಕೀಯ ಅರ್ಥ ಮಾಡಿಕೊಳ್ಳದೆ ತಪ್ಪು ಮಾಡಿದೆ ಎಂದು ಗೊಣಗುತ್ತಿದ್ದಾರೆ ಎನ್ನಲಾಗಿದೆ.

Leave a Reply