ಸುಪ್ರೀಂ ಆದೇಶದ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆಗಳು

ಡಿಜಿಟಲ್ ಕನ್ನಡ ಟೀಮ್:

ನಾಳೆಯೇ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ರಾಜ್ಯ ರಾಜಕಾರಣದಲ್ಲಿನ ಚಟುವಟಿಕೆಗಳು ಚುರುಕುಗೊಂಡಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಮಧ್ಯೆ ನಾಳಿನ ಅಗ್ನಿ ಪರೀಕ್ಷೆಗೆ ಎಲ್ಲ ಪಕ್ಷಗಳು ತಮ್ಮ ಅಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ.

ಹಂಗಾಮಿ ಸ್ಪೀಕರ್ ಆಯ್ಕೆ: ಸದ್ಯ ರಾಜ್ಯದ ಹಂಗಾಮಿ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಹಂಗಾಮಿ ಸ್ಪೀಕರ್ ನೇಮಕವಾಗಲಿದ್ದಾರೆ. ಇಲ್ಲಿ ಶಾಸಕರ ಹಿರಿತನವೇ ಪ್ರಮುಖ ಮಾನದಂಡವಾಗಿದೆ.  ಸದ್ಯ ಆಯ್ಕೆಯಾಗಿರುವ ಶಾಸಕರಲ್ಲಿ ಯಾವು ಹಿರಿಯರು, ಹೆಚ್ಚು ಬಾರಿ ಶಾಸಕರಾಗಿರುವವರ ಪಟ್ಟಿಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರಿಗೆ ನೀಡಲಿದ್ದಾರೆ. ಈ ಪಟ್ಟಿಯನ್ನು ಪಡೆದ ನಂತರ ರಾಜ್ಯಪಾಲರು ಹಂಗಾಮಿ ಸ್ಪೀಕರ್ ಅವರನ್ನು ಆಗಿ ಆಯ್ಕೆಯಾಗಲಿದ್ದಾರೆ. ಸದ್ಯ ಬಿಜೆಪಿಯ ಉಮೇಶ್ ಕತ್ತಿ (7 ಬಾರಿ ಆಯ್ಕೆ) ಹಾಗೂ ಕಾಂಗ್ರೆಸ್ ನ ಆರ್.ವಿ ದೇಶಪಾಂಡೆ (8 ಬಾರಿ ಆಯ್ಕೆ) ನಡುವೆ ಸ್ಪರ್ಧೆ ಇದ್ದು, ರಾಜ್ಯಪಾಲರು ಬಿಜೆಪಿ ಪರವಾಗಿ ನಿರ್ಧಾರ ತೆಗೆದುಕೊಂಡರೆ ಉಮೇಶ್ ಕತ್ತಿ ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾಗಲಿದ್ದಾರೆ. ಇಲ್ಲವಾದರೆ ಆರ್.ವಿ ದೇಶಪಾಂಡೆ ಸ್ಪೀಕರ್ ಆಗಲಿದ್ದಾರೆ. ಇನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರೂ ಕೂಟ ಪಟ್ಟಿಯಲ್ಲಿದೆ.
ಸ್ಪೀಕರ್ ರಿಂದ ಶಾಸಕರಿಗೆ ಪ್ರಮಾಣವಚನ: ರಾಜ್ಯಪಾಲರು ಸ್ಪೀಕರ್ ಆಯ್ಕೆ ಮಾಡಿದ ನಂತರ ಹಂಗಾಮಿ ಸ್ಪೀಕರ್ ಅಧಿವೇಶನ ಕರೆಯಲಿದ್ದಾರೆ. ಅಧಿವೇಶನ ಕರೆದ ನಂತರ ಎಲ್ಲ 222 ಶಾಸಕರಿಗೆ ಪ್ರಮಾಣವಚನ ನೀಡಲಿದ್ದಾರೆ. ಶಾಸಕರು ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೇ ಬಹುಮತ ಸಾಬೀತಿಗೆ ಅವಕಾಶ ನೀಡಲಾಗುತ್ತದೆ.
ರೆಸಾರ್ಟ್ ನಿಂದ ಬೆಂಗಳೂರಿನತ್ತ ಶಾಸಕರು: ನಾಳೆಯೇ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ, ಹೈದರಾಬಾದಿಗೆ ತೆರಳಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಈಗ ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ತುರ್ತು ಸಭೆ: ನ್ಯಾಯಾಲಯದ ತೀರ್ಪಿನ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದು, ಅನಂತ ಕುಮಾರ್, ಆರ್.ಅಶೋಕ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಮುಂದಿನ ನಡೆ ಬಗ್ಗೆ ಸಭೆ ನಡೆಸಲಿದ್ದಾರೆ. ಇನ್ನು ಸುಪ್ರೀಂ ತೀರ್ಪಿನ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪನವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ರಾಜ್ಯಪಾಲರು ವಿರುದ್ಧ ಕಿಡಿ: ಈ ನಡುವೆ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪರ್ತಿಕಾಗೋಷ್ಠಿ ನಡೆಸಿದ್ದು, ‘ನಾವು ಸುಪ್ರೀಂ ಕೋರ್ಟಿನ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಬಿಜೆಪಿಯವರ ಕುತಂತ್ರಕ್ಕೆ ಸುಪ್ರೀಂ ಕೋರ್ಟ್ ಕಪಾಳ ಮೋಕ್ಷ ಮಾಡಿದೆ. ರಾಜ್ಯಪಾಲರ ತೀರ್ಮಾನ ಅಸಂವಿಧಾನಿಕವಾಗಿದ್ದು, ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯಪಾಲರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬಿಜೆಪಿಯಿಂದ ನಮ್ಮ ನಾಯಕರಿಗೆ ಆಮೀಷ ನೀಡಲಾಗುತ್ತಿದೆ. ನಮ್ಮ ಪಕ್ಷದ ಶಾಸಕರ ಪೈಕಿ ಕೇವಲ ಆನಂದ್ ಸಿಂಗ್ ಮಾತ್ರ ನಾಪತ್ತೆಯಾಗಿದ್ದಾರೆ. ಇಡಿ, ಐಟಿ ಭಯದಿಂದ ಅವರು ಅವಿತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದು ಆರೋಪಿಸಿದ್ದಾರೆ.

Leave a Reply