ಯಡಿಯೂರಪ್ಪ ರಾಜೀನಾಮೆ ಹಿಂದೆ ಇದೆಯಾ ಬೇರೆಯದೇ ಪ್ಲಾನ್?

ಡಿಜಿಟಲ್ ಕನ್ನಡ ಟೀಮ್:

ಯಡಿಯೂರಪ್ಪ ಬಹುಮತ ಸಾಬೀತು ಮಾಡೋದು ಕಷ್ಟ ಅನ್ನೋದು ಗೊತ್ತಿದ್ರೂ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಬಹುಮತ ಸಾಬೀತಿಗೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ಕೊಟ್ಟಿದ್ದರಿಂದ ವಿಶ್ವಾಸದಲ್ಲಿದ್ದ ಬಿಜೆಪಿ ಮುಖಂಡರಿಗೆ ಸುಪ್ರೀಂಕೋರ್ಟ್ ಆದೇಶ ಬರಸಿಡಿಲಾಗಿ ಬಡಿಯಿತು. ಒಂದೇ ದಿನದಲ್ಲಿ ಬಹುಮತ ಸಾಬೀತು ಮಾಡುವಂತೆ ಆದೇಶ ಕೊಟ್ಟಿದ್ದರಿಂದ ಕಂಗಾಲಾದ ನಾಯಕರು ಅನಿವಾರ್ಯವಾಗಿ ಕೈ ಚೆಲ್ಲಿದರು. ಸದನದಲ್ಲಕ ವಿಶ್ವಾಸ ಮತಯಾಚನೆಯ ಪ್ರಸ್ತಾವನೆ ಮಾಡಿದರೂ ವಿಶ್ವಾಸ ಮತ ನಡೆಯದಂತೆ ನೋಡಿಕೊಂಡ ಯಡಿಯೂರಪ್ಪ ಪ್ರಸ್ತಾವಿಕ ಭಾಷಣ ಮಾಡಿ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.

ವಿದಾಯದ ಭಾಷಣ ಮಾಡಿದ ಯಡಿಯೂರಪ್ಪ, ನಾನು ಇಂದು ಅಧಿಕಾರ ಕಳೆದು ಕೊಳ್ಳುತ್ತಿರಬಹುದು. ಆದರೆ ನಾನು ಮತ್ತೆ ರಾಜ್ಯಾದ್ಯಂತ ಪ್ರಚಾರ ಮಾಡಿಕೊಂಡು ಜನರ ಮುಂದೆ ಹೋಗುತ್ತೇನೆ. ಮತ್ತೆ 150 ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಬರುತ್ತೇನೆ ಎಂದು ಘೋಷಣೆ ಮಾಡಿದ್ರು. ಅಂದ್ರೆ ಮಾತಿನ ಅರ್ಥ ಮುಂದಿನ ಆರು ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ. ಅಷ್ಟರೊಳಗೆ ನಾನು ಮತ್ತೆ ರಾಜ್ಯದ ಜನರ ಮುಂದೆ ಹೋಗುತ್ತೇನೆ. ಮತ್ತೆ ಅಧಿಕಾರಕ್ಕೆ ಬರುತ್ತೇನೆ ಅನ್ನೊ ವಿಶ್ವಾಸ ಹೊಂದಿದ್ದಾರೆ.

ವಿಶ್ವಾಸ ಮತಯಾಚನೆ ವೇಳೆ ದೇವೇಗೌಡರನ್ನೇ ಫಾಲೋ ಮಾಡಿದ ಬಿ.ಎಸ್ ಯಡಿಯೂರಪ್ಪ, ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ರಚನೆಯಾಗಿದ್ದಾಗ, ಕಾಂಗ್ರೆಸ್ ಪಕ್ಷ ಏಕಾಏಕಿ ಬೆಂಬಲ ಹಿಂದಕ್ಕೆ ಪಡೆದಿತ್ತು. ಈ ವೇಳೆ ವಿಶ್ವಾಸಮತ ಯಾಚನೆ ಮಾಡುವಂತೆ ಅಂದಿನ ರಾಷ್ಟ್ರಪತಿ ದೇವೇಗೌಡರಿಗೆ ಸೂಚಿಸಿದ್ರು. ಕಾಂಗ್ರೆಸ್ ಬೆಂಬಲಕ್ಕೆ ಹಿಂತೆಗೆದುಕೊಂಡ ಬಳಿಕ ಬಿಜೆಪಿ ಬೆಂಬಲ ನೀಡಲು ಸಜ್ಜಾಗಿದ್ರೂ ಬೆಂಬಲ ಪಡೆಯಲು ದೇವೇಗೌಡರು ನಿರಾಕರಿಸಿದ್ರು. ದೇವೇಗೌಡರು ವಿಶ್ವಾಸಮತ ಯಾಚನೆಯ ಪ್ರಸ್ತಾಪ ಮಂಡಿಸಿದರೂ ಮತದಾನಕ್ಕೆ ಅವಕಾಶ ನೀಡದೆ ನೇರವಾಗಿ ಲೋಕಸಭೆಯಿಂದ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು. ತಮಗೆ ಬೇಕಾದಷ್ಟು ಸಂಖ್ಯೆಯ ಬೆಂಬಲ ಇಲ್ಲ ಎಂಬುದ ಗೊತ್ತಾಗುತ್ತಿದ್ದಂತೆ ದೇವೇಗೌಡರು ಮತದಾನದ ಪ್ರಹಸನವನ್ನು ತಿರಸ್ಕರಿಸಿದ್ದರು. ಅದೇ ಫಾರ್ಮುಲ ಬಳಸಿಕೊಂಡ ಯಡಿಯೂರಪ್ಪ ಪ್ರಹಸನಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳದೆ ಬುದ್ಧಿವಂತಿಕೆ ಮೆರೆದರಿದ್ದಾರೆ. ಬಿಎಸ್ ಯಡಿಯೂರಪ್ಪ ಹೇಳಿದ ರೀತಿ‌ ಮತ್ತೆ ಪ್ರವಾಸ ಮಾಡಿ ಜನರ ಮುಂದೆ ಹೋಗಬಹುದು. ಆದ್ರೆ ಕುಮಾರಸ್ವಾಮಿ ಜನಪರ ಸರ್ಕಾರ ರಚನೆ ಮಾಡಿ ಉತ್ತಮ ಆಡಳಿತ ನಡೆಸಿದರೆ ಬಿಎಸ್‌‌ ಯಡಿಯೂರಪ್ಪ ಜನಮಾನಸದಿಂದ ದೂರ ಆಗುವ ಕಾಲ ಸನಿಹ ಬಂದಿದೆ ಎನಿಸುತ್ತದೆ.

Leave a Reply