ಸರ್ವಕಾಲಿಕ ಗರಿಷ್ಠ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

137

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಆದರೆ ಈಗ ಮತದಾನ ಮುಗಿದ ನಂತರದ ಒಂದು ವಾರದ ಅಂತರದಲ್ಲಿ ಇಂಧನ ಬೆಲೆ ಸತತವಾಗಿ ಏರಿಕೆ ಕಂಡಿದ್ದು, ಈಗ ಸರ್ಲಕಾಲಿಕ ಗರಿಷ್ಠ ಮೊತ್ತವನ್ನು ಮುಟ್ಟಿದೆ.

ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್ ದರದಲ್ಲಿ ಕ್ರಮವಾಗಿ 33 ಪೈಸೆ ಹಾಗೂ 26 ಪೈಸೆ ಹೆಚ್ಚಳವಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹77.48 , ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹68.73 ಮುಟ್ಟಿದೆ. ಅಡುಗೆ ಅನಿಲದರ ಪ್ರತಿ ಕೆಜಿಗೆ ₹ 41.69 ಆಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಮೇ 14ರಿಂದ ಮತ್ತೆ ದರ ಪರಿಷ್ಕರಣೆ ಆರಂಭಿಸಲಾಗಿತ್ತು. ಕಳೆದ ಸೋಮವಾರದಿಂದ ಏರಿಕೆಯಾಗಲು ಆರಂಭಿಸಿದ ದರ 7 ದಿನಗಳಿಂದ ಸತತವಾಗಿ ಹೆಚ್ಚಳವಾಗಿದ್ದು, ಇದರಿಂದಾಗಿ, ವಾರದ ಅವಧಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹1.61 ಹಾಗೂ ಡೀಸೆಲ್ ದರ ₹1.64ರಷ್ಟು ಹೆಚ್ಚಳವಾಗಿದೆ.

ಇನ್ನು 2017ರ ಜೂನ್ ಮಧ್ಯದಿಂದ  ಪ್ರತಿ ನಿತ್ಯ ತೈಲ ಬೆಲೆ ಪರಿಷ್ಕರಿಸುವ ನಿಯಮ ಜಾರಿಗೆ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೂ ಒಂದೇ ದಿನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಬೆಲೆ 33 ಪೈಸೆಯಷ್ಟು ಹೆಚ್ಚಳ ಮಾಡಿರುವುದು ಇದೇ ಮೊದಲು.

ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ (VAT) ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿದ್ದು, ವಿವಿಧ ರಾಜ್ಯಗಳಲ್ಲಿ ದರ ವ್ಯತ್ಯಾಸವಿದೆ. ಮೆಟ್ರೊ ನಗರಗಳ ಪೈಕಿ ದೆಹಲಿಯಲ್ಲಿ ದರ ಅತಿ ಕಡಿಮೆಯಾಗಿದೆ. ಅದರೊಂದಿಗೆ ಪ್ರಸ್ತುತ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹76.24 ಮತ್ತು ಒಂದು ಲೀಟರ್ ಡೀಸೆಲ್ ದರ ₹67.57 ಆಗಿದೆ. 2013ರ ಸೆಪ್ಟೆಂಬರ್‌ 14ರಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.06 ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು.

Leave a Reply