ಕುಮಾರಸ್ವಾಮಿ ಮುಂದಿರುವ ಎರಡು ಸವಾಲುಗಳು!

ಅಧಿಕಾರ ರಾಜಕೀಯದ ಒಡಲಲ್ಲಿ ಎಲ್ಲವೂ ಕರಗಿ ಹೋಗುತ್ತದೆ. ದ್ವೇಷ-ಅಸೂಯೆ, ಸಿಟ್ಟು-ಸೆಡವು, ಕೆಚ್ಚು-ರೊಚ್ಚು, ನೀತಿ-ನಿಯತ್ತು, ತತ್ವ-ಸಿದ್ಧಾಂತ, ದಕ್ಷತೆ-ಪ್ರಾಮಾಣಿಕತೆ ಯಾವುದೂ ಉಳಿಯುವುದಿಲ್ಲ. ಶತ್ರುತ್ವ-ಮಿತ್ರತ್ವ ಅನುಕೂಲಕ್ಕೆ ತಕ್ಕಂತೆ ಪಾತ್ರ ಬದಲಿಸುತ್ತದೆ. ಹಗಲು-ರಾತ್ರಿ ಬೆಳಕು ಕಣ್ಣುಮುಚ್ಚಾಲೆ ಆಡುವಂತೆ. ಅವಕಾಶವಾದದ ಮುಂದೆ ಎಲ್ಲವೂ ಗೌಣ. ಹೀಗಾಗಿಯೇ ಯುದ್ಧ ಮತ್ತು ರಾಜಕೀಯದಲ್ಲಿ ಎಲ್ಲವೂ ಸಹ್ಯ ಎಂಬ ಮಾತಿದೆ. ರಾಜ್ಯ ರಾಜಕಾರಣದ ಪ್ರಚಲಿತ ವಿದ್ಯಮಾನಗಳು ಈ ಮಾತಿಗೆ ಇಂಬುಗೊಟ್ಟಿವೆ.

ಈ ಅನೂಕೂಲಸಿಂಧು ರಾಜಕೀಯ ಯಾರೊಬ್ಬರ ಸ್ವತ್ತೂ ಅಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಒಂದಿಲ್ಲೊಂದು ರೀತಿ ಅದರ ಫಲಾನುಭವಿಗಳೇ. ಒದಗಿ ಬರುವ ಅವಕಾಶ ಅವುಗಳ ಹಣೆಬರಹ ನಿರ್ಧರಿಸುತ್ತದೆ. ಅವಕಾಶ ಸಿಕ್ಕವರು ಗೆದ್ದು ಬೀಗುತ್ತಾರೆ. ಸೋತವರು ಬಾಗುತ್ತಾರೆ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬಂತೆ ಅವಕಾಶ ಸಿಕ್ಕಿಯೂ ಅದನ್ನು ಎಟುಕಿಸಿಕೊಳ್ಳಲಾರದವರು ಗೆದ್ದು ಬೀಗಿದವರನ್ನು ನಿಂದಿಸಿಕೊಂಡು ತಿರುಗುತ್ತಾರೆ. ಇಲ್ಲಿ ಬೀಗುವವರು, ಬಾಗುವವರು, ನಿಂದಿಸಿಕೊಂಡು ತಿರುಗುವವರ ಪಾತ್ರ ನಿರ್ಧರಿಸುವುದು ಕೂಡ ಮತ್ತದೇ ಅಧಿಕಾರ ರಾಜಕೀಯವೇ. ಕರ್ನಾಟಕ ಅತಂತ್ರ ವಿಧಾನಸಭೆ ಪ್ರೇರಿತ ಕಳೆದ ಐದು ದಿನಗಳ ರಾಜಕೀಯ ಏಳು-ಬೀಳುಗಳು ಈ ಎಲ್ಲ ಪಾತ್ರಗಳನ್ನು ಅದಲು-ಬದಲು ಮಾಡುತ್ತಾ ಸಾಗಿವೆ. ಮುಂದಾಗಬಹುದಾದ ಬೆಳವಣಿಗೆಗಳ ಬಗ್ಗೆ ಜನರ ಕುತೂಹಲವನ್ನು ಬಾನೆತ್ತರಕ್ಕೆ ಚಿಮ್ಮಿಸಿವೆ.

ನಿಜ, ಐದು ದಿನಗಳಲ್ಲಿ ಏನೆಲ್ಲ ಆಗಿ ಹೋಯಿತು. ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರಳ ಬಹುಮತದ ಹೊಸ್ತಿಲಲ್ಲಿ ಮುಗ್ಗರಿಸಿದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಎರಡೂವರೇ ದಿನಕ್ಕೇ ಮಾಜಿಯಾಗಿದ್ದಾರೆ. ಸುಪ್ರೀಂ ಕೋರ್ಟ್ ಅವಕೃಪೆ ಮುಂದೆ ರಾಜ್ಯಪಾಲರ ಕೃಪೆ ಸವಕಲಾದ ಪರಿಣಾಮ ಅದೃಷ್ಟ ಅವರಿಗೆ ಕೈಕೊಟ್ಟಿದೆ. ಸರಳ ಬಹುಮತಕ್ಕೆ ಬೇಕಾದ ಎಂಟು ಶಾಸಕರ ಬೆಂಬಲ ಗಿಟ್ಟಿಸುವಲ್ಲಿ ವಿಫಲರಾದ ಯಡಿಯೂರಪ್ಪನವರು ವಿಶ್ವಾಸಮತ ಯಾಚನೆಗೆ ಮೊದಲೇ ತ್ಯಜಿಸಿದ ಸಿಎಂ ಪದವಿ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಾಯಕ ಎಚ್.ಡಿ. ಕುಮಾರಸ್ವಾಮಿ ಮುಂದೆ ನಿಂತಿದೆ. ಬುಧವಾರ ಪ್ರಮಾಣ ವಚನವನ್ನೂ ಅವರು ಸ್ವೀಕರಿಸಲಿದ್ದಾರೆ. ಆದರೆ ಈ ಬೆಳವಣಿಗೆಗಳ ನಡುವೆ ಹಾದು ಹೋಗಿರುವ ಜಾತಿ ಸಮೀಕರಣದ ಸ್ಥಿತ್ಯಂತರಗಳು, ಅವು ಬದಲಿಸಿರುವ ಪಾತ್ರಗಳು ಅಧಿಕಾರ ರಾಜಕೀಯ ಏನೆಲ್ಲ ಮಾಡಿಸುತ್ತದೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿವೆ.

ಈ ಹಿಂದೆ ‘ಅಹಿಂದ’ ಪ್ರತಿಪಾದಕ ಸಿದ್ದರಾಮಯ್ಯನವರ ವಿರುದ್ಧ ಲಿಂಗಾಯತರು ಹಾಗೂ ಒಕ್ಕಲಿಗರು ತಿರುಗಿ ಬಿದ್ದಿದ್ದರು. ಆದರೆ ಅತಂತ್ರ ವಿಧಾನಸಭೆಯಲ್ಲಿ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಬೇಷರತ್  ಬೆಂಬಲ ನೀಡಿದಾಗ ಯಡಿಯೂರಪ್ಪನವರಿಗೆ ಈ ಅವಕಾಶ ತಪ್ಪಿಹೋಗುತ್ತದಲ್ಲ ಎಂದು ಲಿಂಗಾಯತ ಸಮುದಾಯದವರು ಕೈಕೈ ಹಿಸುಕಿಕೊಂಡಿದ್ದರು. ಆದರೆ ಸರಳ ಬಹುಮತ ಕೊರತೆ ನಡುವೆಯೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದಾಗ ತಮ್ಮ ಸಮುದಾಯದ ಕುಮಾರಸ್ವಾಮಿಗೆ ಈ ಅವಕಾಶ ತಪ್ಪಿ ಹೋಯಿತಲ್ಲ ಎಂದು ಒಕ್ಕಲಿಗರೂ ತಮ್ಮ ಅದೃಷ್ಟವನ್ನು ತಾವೇ ನಿಂದಿಸಿಕೊಂಡಿದ್ದರು. ಆದರೆ ವಿಶ್ವಾಸಮತ ಕ್ರೋಢೀಕರಿಸಲಾಗದೆ ಎರಡೂವರೇ ದಿನದಲ್ಲಿ ಯಡಿಯೂರಪ್ಪ ಸಿಎಂ ಪದವಿಯಿಂದ ಕೆಳಗಿಳಿದು ಈಗ ಕುಮಾರಸ್ವಾಮಿ ಆ ಹುದ್ದೆಗೇರಲು ಸಿದ್ಧರಾಗಿರುರುವುದು ಲಿಂಗಾಯತ ಸಮುದಾಯಕ್ಕೇ ಬೇಸರ ತರಿಸಿದೆ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬ ಕಾರಣಕ್ಕೆ. ಕುಮಾರಸ್ವಾಮಿ ಸಿಎಂ ಆಗುತ್ತಿರುವುದಕ್ಕೆ ಒಕ್ಕಲಿಗರು ಬೀಗುತ್ತಿದ್ದಾರೆ. ಮಾಯಾಂಗನೆಯಂತೆ ಅತ್ತಿಂದಿತ್ತ ಇತ್ತಿಂದತ್ತ ಹೊಯ್ದಾಡಿದ, ಹೊಯ್ದಾಡುತ್ತಿರುವ ಸಿಎಂ ಪದವಿ ಒಕ್ಕಲಿಗರು ಹಾಗೂ ಲಿಂಗಾಯತರ ನಡುವೆ ಅನಪೇಕ್ಷಿತ ಅಸಮಾಧಾನ ಸೃಷ್ಟಿಸಿಟ್ಟಿದೆ. ‘ಅಹಿಂದ’ ಕಾರಣಕ್ಕೆ ಸಿದ್ದರಾಮಯ್ಯನವರ ವಿರುದ್ಧ ಒಗ್ಗೂಡಿದ್ದ ಈ ಸಮುದಾಯಗಳು ಈಗ ಪರಸ್ಪರ ವಿಮುಖವಾಗಿವೆ.

ಹೌದು, ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯನವರು ಪ್ರತಿಪಾದಿಸಿದ ‘ಅಹಿಂದ’ ಮಂತ್ರ ಅನ್ಯವರ್ಗದವರ ಒಗ್ಗಟ್ಟಿಗೆ ಪ್ರೇರಣೆ ಆಗಿತ್ತು. ಸಿದ್ದರಾಮಯ್ಯನವರ ಅವಕೃಪೆಗೆ ಪಾತ್ರವಾಗಿದ್ದ ‘ಜಿಲೇಬಿ’ (ಗೌಡ, ಲಿಂಗಾಯತ ಹಾಗೂ ಬ್ರಾಹ್ಮಣ) ಸಮುದಾಯ ಚುನಾವಣೆಯಲ್ಲಿ ಒಗ್ಗಟ್ಟು ಕಾಯ್ದುಕೊಂಡದ್ದು ಸುಳ್ಳಲ್ಲ. ಅದು ಸಮುದಾಯದ ಒಳಗೂ ಇರಬಹುದು ಅಥವಾ ಸಮುದಾಯಗಳ ನಡುವೆಯೂ ಇರಬಹುದು. ಅದನ್ನು ಆಯಾ ಸಂದರ್ಭ ಹಾಗೂ ಅನುಕೂಲಕ್ಕೆ ತಕ್ಕಂತೆ ಪ್ರಯೋಗ ಮಾಡಿದವು. ಅದರಲ್ಲಿ ಯಶಸ್ವಿಯೂ ಆದವು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರೆಲ್ಲರೂ ದೇವೇಗೌಡರ ಜೆಡಿಎಸ್ ಜತೆಗೆ ಬಂಡೆಗಲ್ಲಿನಂತೆ ನಿಂತುಕೊಂಡರು. ಗೌಡರ ಕುಟುಂಬದ ವಿರುದ್ಧ ಹರಿಹಾಯ್ದದ್ದು, ಡಿ.ಕೆ. ಶಿವಕುಮಾರ್ ಅವರನ್ನು ವರ್ಷ ಸಂಪುಟದಿಂದ ಹೊರಗಿಟ್ಟದ್ದು, ಅಂಬರೀಶ್ ಅವರನ್ನು ಸಂಪುಟದಿಂದ ಕೈಬಿಟ್ಟದ್ದು, ಹಿರಿಯ ಪೊಲೀಸ್ ಅಧಿಕಾರಿ ಕಿಶೋರ ಚಂದ್ರ ಅವರಿಗೆ ಡಿಜಿಪಿ ಹುದ್ದೆ ತಪ್ಪಿಸಿದ್ದು, ಆಯಕಟ್ಟಿನ ಹುದ್ದೆಗಳಿಂದ ಸಮುದಾಯದ ಅಧಿಕಾರಿಗಳನ್ನು ಕದಲಿಸಿದ್ದು ಸಿದ್ದರಾಮಯ್ಯ ಅವರಿಗೆ ಒಕ್ಕಲಿಗ ವಿರೋಧಿ ಪಟ್ಟ ತಂದುಕೊಟ್ಟಿತು. ಅಲ್ಲದೇ ಕುಮಾರಸ್ವಾಮಿ ಸಿಎಂ ಆಗಬಹುದು ಎಂಬ ಕಾರಣಕ್ಕೆ ಜೆಡಿಎಸ್ ಪರ ಆ ಸಮುದಾಯದವರೆಲ್ಲರೂ ಒಗ್ಗೂಡುವಂತೆ ಮಾಡಿತು. ಇದರಿಂದಾಗಿಯೇ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಕಾಯ್ದುಕೊಂಡಿತು. ಒಕ್ಕಲಿಗರಲ್ಲಿ ಬಲವಾಗಿ ಬೇರೂರಿದ್ದ ಸಿದ್ದರಾಮಯ್ಯ ವಿರೋಧಿ ಮನಸ್ಥಿತಿ ಇಲ್ಲಿ ಕೆಲಸ ಮಾಡಿತ್ತು.

ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತರೆಲ್ಲರೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರ ಒಗ್ಗೂಡಿದ್ದೂ ಮತ್ತದೇ ಕಾರಣಕ್ಕೆ.  ಸಿದ್ದರಾಮಯ್ಯನವರ ‘ಅಹಿಂದ’ ಪರ ನಿಲುವು ಲಿಂಗಾಯತರನ್ನು ಮೊದಲೇ ಕೆರಳಿಸಿತ್ತು. ಇದರ ಜತೆ ಸೇರಿಕೊಂಡದ್ದು ಲಿಂಗಾಯತ ಪ್ರತ್ಯೇಕ ಧರ್ಮ ರಚನೆ. ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಲಿಂಗಾಯತ ಮತ್ತು ವೀರಶೈವರ ನಡುವೆ ಒಡಕು ತಂದಿಟ್ಟು ಅದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆ ಎಂಬ ಸಿಟ್ಟು ಅವರಲ್ಲಿ ಮನೆ ಮಾಡಿತ್ತು. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಲಿಂಗಾಯತ ಮತ್ತು ವೀರಶೈವ ಮಂತ್ರಿಗಳು ಪರಸ್ಪರ ಕಿತ್ತಾಡಿಕೊಂಡಾಗ ಆ ಸಮುದಾಯದವರು ಮಾತ್ರ ಬೇರೇಯದೇ ಯೋಚನೆ ಮಾಡುತ್ತಿದ್ದರು. ಎರಡೂ ಬಣಗಳು ಕಾಂಗ್ರೆಸ್ ವಿರೋಧಿ ನಿಲುವು ತೆಗೆದುಕೊಂಡು ಬಿಜೆಪಿ, ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪನವರ ಜತೆ ನಿಂತವು. ಬಿಜೆಪಿ 104 ಸ್ಥಾನ ಗಳಿಸಿಕೊಳ್ಳಲು ಇದೂ ಒಂದು ಪ್ರಮುಖ ಕಾರಣ.

ಚುನಾವಣೆಗೆ ಮೊದಲು ಸಿದ್ದರಾಮಯ್ಯನವರ ವಿರುದ್ಧ ‘ಜಿಲೇಬಿ’ ಹೇಗೆ ಒಂದಾಗಿದ್ದವು ಎಂಬುದಕ್ಕೆ ಸಣ್ಣ ಉದಾಹರಣೆ ಚಾಮುಂಡೇಶ್ವರಿ ಫಲಿತಾಂಶ. ಇಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕೆಂದು ಜೆಡಿಎಸ್ ಜತೆ ಬಿಜೆಪಿ ಕೈ ಜೋಡಿಸಿತ್ತು. ಇಲ್ಲಿ ಬಿಜೆಪಿ ಕ್ಷೇತ್ರದ ಜನರಿಗೆ ಹೆಸರು ಕೇಳಿಯೂ ಗೊತ್ತಿಲ್ಲದ ಬ್ರಾಹ್ಮಣ ಸಮುದಾಯದ ಗೋಪಾಲರಾವ್ ಎಂಬುವರನ್ನು ಕಣಕ್ಕಿಳಿಸಿ ಸಿದ್ದರಾಮಯ್ಯನವರ ಹೀನಾಯ ಸೋಲಿಗೆ ಮತ್ತು ಜೆಡಿಎಸ್‌ನ ಜಿ.ಟಿ. ದೇವೇಗೌಡರ ಭಾರೀ ಗೆಲುವಿಗೆ ಕಾರಣವಾಗಿತ್ತು. ಇದು ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರುತ್ತದೆ ಎಂದು ನಾನಾ ಚುನಾವಣೆಪೂರ್ವ ಸಮೀಕ್ಷೆಗಳು ಪ್ರತಿಪಾದಿಸಿದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿಯೇ ಸರಕಾರ ರಚನೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಎರಡೂ ಪಕ್ಷಗಳ ಮುಖಂಡರಿದ್ದರು. ಏಕಾಂಗಿಯಾಗಿ ಅಧಿಕಾರಕ್ಕೆ ಬರುವುದಾಗಿ ಮೇಲ್ನೋಟಕ್ಕೆ ಸಾರಿಕೊಂಡಿದ್ದರೂ ಅನ್ಯರ ಆಶ್ರಯ ಬೇಕೇ ಬೇಕು ಎಂಬುದು ಇಬ್ಬರಿಗೂ ಗೊತ್ತಿತ್ತು. ಬಿಜೆಪಿಗೆ ಇದ್ದ ಆಯ್ಕೆ ಜೆಡಿಎಸ್ ಒಂದೇ. ಆದರೆ ಜೆಡಿಎಸ್‌ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಆಯ್ಕೆಗಳಿದ್ದವು.

ಫಲಿತಾಂಶದ ನಂತರ ಜೆಡಿಎಸ್ಸಿಗೆ ಕಾಂಗ್ರೆಸ್ ಬೇಷರತ್ ಬೆಂಬಲ ವ್ಯಕ್ತಪಡಿಸಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಘೋಷಿಸಿದೆ. ಅದರಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವೂ ಏರ್ಪಟ್ಟಿದೆ. ಸರಳ ಬಹುಮತದ ಅಂಚಿನಲ್ಲಿ ಎಡವಿರುವ ಬಿಜೆಪಿ ಮುಖಂಡರು ಇದನ್ನು ‘ಅಪವಿತ್ರ ಮೈತ್ರಿ’ ಎಂದು ಕರೆಯುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ವಾಚಾಮ-ಗೋಚರ ನಿಂದಿಸುತ್ತಿದ್ದಾರೆ. ಚುನಾವಣೆಗೆ ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪರಸ್ಪರ ಬೈದುಕೊಂಡಿದ್ದನ್ನು ಮುಂದೆ ಮಾಡಿ ತಮ್ಮ ನೋವು-ಸಂಕಟ ಕಾರಿಕೊಳ್ಳುತ್ತಿದ್ದಾರೆ. ಎಂಟು ಸ್ಥಾನ ಕಡಿಮೆ ಕೊಟ್ಟ ಜನರಿಗೂ ಶಾಪ ಹಾಕುತ್ತಿದ್ದಾರೆ. ಆದರೆ ಸರಳ ಬಹುಮತಕ್ಕೆ ಕೊರತೆ ಬಿದ್ದ ಕೊರತೆ ಎಂಟು ಸ್ಥಾನಗಳನ್ನು ತುಂಬಿಕೊಳ್ಳಲು ಬಿಜೆಪಿ ಮುಖಂಡ ಯಡಿಯೂರಪ್ಪ ಅವರಿಗೂ ‘ಆಪರೇಷನ್ ಕಮಲ’ ಮಾಡದೇ ಬೇರೆ ವಿಧಿ ಇರಲಿಲ್ಲ. ಏಕೆಂದರೆ ಈ ಸ್ಥಾನಗಳನ್ನು ಶೂನ್ಯದಿಂದ ಸೃಷ್ಟಿಸಲು ಸಾಧ್ಯವಿರಲಿಲ್ಲ. ಬದಲಿಗೆ ‘ಅಪವಿತ್ರ ಮೈತ್ರಿ’ ಏರ್ಪಡಿಸಿಕೊಂಡಿರುವ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರನ್ನೇ ಖರೀದಿಸಬೇಕಿತ್ತು. ಈ ಶಾಸಕರ ಖರೀದಿ ‘ಪವಿತ್ರ ಕಾರ್ಯ’ವೇನೂ ಆಗಿರಲಿಲ್ಲ. ಆದರೂ ಬಿಜೆಪಿ ಈ ಸಾಹಸಕ್ಕೆ ಕೈ ಹಾಕಿ ಸೋತಿದೆ. ಒಂದೊಮ್ಮೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಖರೀದಿ ರಾಜಕೀಯ ತಂತ್ರಗಾರಿಕೆ ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅದೇ ತಂತ್ರಗಾರಿಕೆ ಏಕಾಗಬಾರದು? ರಾಜಕೀಯದಲ್ಲಿ ಎಲ್ಲವೂ ಸಹ್ಯವಾದರೆ ಇದೂ ಸಹ್ಯ, ಎಲ್ಲವೂ ಅಸಹ್ಯವಾದರೆ ಇದೂ ಅಸಹ್ಯ. ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಎಂಬ ತಾರತಮ್ಯ ಇರುವುದಿಲ್ಲ. ಯಾವುದೇ ಪಕ್ಷಕ್ಕೂ ವಿನಾಯಿತಿಯೂ ಇಲ್ಲ.

ಹೋಗಲಿ ತಂತ್ರಗಾರಿಕೆ ಎಂದೇ ಇಟ್ಟುಕೊಂಡರೂ ಬಿಜೆಪಿ ಮುಖಂಡರು ‘ಆಪರೇಷನ್ ಕಮಲ’ವನ್ನಾದರೂ ಸರಿಯಾಗಿ ಮಾಡಿದರೇ ಅದೂ ಇಲ್ಲ. ಯಡಿಯೂರಪ್ಪನವರು ಆತುರಕ್ಕೆ ಬಿದ್ದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಮುಖಭಂಗ ಅನುಭವಿಸಿದರು. ಅದರ ಬದಲಿಗೆ ವಾರ ಬಿಟ್ಟು ಪ್ರಮಾಣ ಸ್ವೀಕರಿಸಿದ್ದಿದ್ದರೆ ಅಲ್ಲಿಯವರೆಗಾದರೂ ‘ಆಪರೇಷನ್ ಕಮಲ’ಕ್ಕೆ ಕಾಲಾವಕಾಶ ಸಿಗುತ್ತಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೂ ಆಸ್ಪದ ಆಗುತ್ತಿರಲಿಲ್ಲ. ಯಡಿಯೂರಪ್ಪನವರ ಆತುರ ಅವರ ಮುಖ್ಯಮಂತ್ರಿ ಅಭೀಪ್ಸೆಯನ್ನೇ ಆಪೋಶನ ತೆಗೆದುಕೊಂಡಿದೆ. ನಿಜ ಹೇಳಬೇಕೆಂದರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದು ಅವರ ಪಕ್ಷದ ಅನೇಕ ಮುಖಂಡರಿಗೇ ಸುತರಾಂ ಇಷ್ಟವಿರಲಿಲ್ಲ. ಹೊಟ್ಟೆಯಲ್ಲಿ ಕಳ್ಳಿಹಾಲು ಸುರುವಿದಂತಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಖುಷಿಗಿಂಥ ಯಡಿಯೂರಪ್ಪ ಸಿಎಂ ಆಗಿಬಿಡುತ್ತಾರಲ್ಲ ಎಂಬ ಸಂಕಟವೇ ಅವರಿಗೆ ದೊಡ್ಡದಾಗಿತ್ತು. ಹೀಗಾಗಿಯೇ ‘ಆಪರೇಷನ್ ಕಮಲ’ದ ಚುಕ್ಕಾಣಿ ಹಿಡಿದಿದ್ದ ಅನೇಕ ಹಿರಿಯ ಮುಖಂಡರು ಆ ಪ್ರಕ್ರಿಯೆಯನ್ನು ನಾಮ್-ಕೇ-ವಾಸ್ತೆಗೆ ಸೀಮಿತ ಮಾಡಿಟ್ಟರು. ಈ ಹಿಂದೆಲ್ಲ ಅಷ್ಟೆಲ್ಲ ನಿಖರವಾಗಿ ‘ಆಪರೇಷನ್ ಕಮಲ’ ಮಾಡಿ ಅನುಭವವಿದ್ದರೂ ಅದು ಈ ಬಾರಿ ಪ್ರಯೋಜನಕ್ಕೆ ಬರಲಿಲ್ಲ. ಇದಕ್ಕೆ ಬಿಜೆಪಿಯಲ್ಲಿನ ಒಗ್ಗಟ್ಟಿನ ಕೊರತೆ ಜತೆಗೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟು ವಿಜೃಂಭಿಸಿದ್ದೂ ಕಾರಣ.

2004 ರಲ್ಲಿಯೂ 79 ಸ್ಥಾನದೊಡನೆ ಬಿಜೆಪಿ ಈಗಿನಂತೆಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರದ ಸ್ಥಾನದಲ್ಲಿದ್ದ ಕಾಂಗ್ರೆಸ್ (65) ಹಾಗೂ ಜೆಡಿಎಸ್ (58) ಮೈತ್ರಿ ಸರಕಾರ ಮಾಡಿಕೊಂಡಿದ್ದವು. ಧರ್ಮಸಿಂಗ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ದೇವೇಗೌಡರ ಕುಟುಂಬ ಮತ್ತು ಸಿದ್ದರಾಮಯ್ಯ ನಡುವಣ ವೈಷಮ್ಯದಿಂದ ಎರಡೇ ವರ್ಷದಲ್ಲಿ ಈ ಸರಕಾರ ಪತನವಾಯಿತು. ಆಗ ಇದೇ ಬಿಜೆಪಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜತೆಗೂಡಿ ಸರಕಾರ ಮಾಡಿತ್ತು. ಆಗ ಕುಮಾರಸ್ವಾಮಿ ಸಿಎಂ, ಯಡಿಯೂರಪ್ಪನವರು ಡಿಸಿಎಂ. ಆಗ ಜೆಡಿಎಸ್ ಜತೆಗೂಡಿ ‘ಪವಿತ್ರ ಸರಕಾರ’ ಮಾಡಿದ್ದ ಬಿಜೆಪಿಗೆ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ‘ಅಪವಿತ್ರ’ವಾಗಿ ಕಾಣುತ್ತಿರುವುದರ ಔಚಿತ್ಯವೇ ಅರ್ಥವಾಗುತ್ತಿಲ್ಲ.

ಇಲ್ಲಿ ಇನ್ನೂ ಒಂದು ವಿಚಾರ. 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಏರ್ಪಡುವವರೆಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೇ ಆಗಿರಲಿಲ್ಲ. ಆಗ ಜೆಡಿಎಸ್ ಜತೆಗೂಡಿ ಸರಕಾರ ಮಾಡಲು ಬಿಜೆಪಿ ಹವಣಿಸಿತ್ತು. ಒಂದೊಮ್ಮೆ ಸರಕಾರ ಅಸ್ತಿತ್ವಕ್ಕೆ ಬಂದರೆ ಯಡಿಯೂರಪ್ಪನವರಿಗೆ ಅಧಿಕಾರ ತಪ್ಪಿಸಬೇಕು ಎಂಬುದು ಶಾಸಕಾಂಗ ನಾಯಕನ ಆಯ್ಕೆ ವಿಳಂಬದ ಹಿಂದಿನ ಹುನ್ನಾರವಾಗಿತ್ತು. ಯಡಿಯೂರಪ್ಪನವರ ಶತ್ರುಗಳು ಬೇರೆ ಪಕ್ಷಗಳಿಗಿಂಥ ಅವರ ಪಕ್ಷದಲ್ಲೇ ಹೆಚ್ಚಿಗೆ ಇದ್ದಾರೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ.

ಈಗ ಬಿಜೆಪಿ ಮುಖಂಡರು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಮೈತ್ರಿ ಸರಕಾರ ಅದೇಗೆ ಬಾಳುತ್ತದೋ ಒಂದು ಕೈ ನೋಡಿಯೇ ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಂದರೆ ಆ ಸರಕಾರವನ್ನು ಉರುಳಿಸುತ್ತೇವೆ ಎಂಬುದು ಅವರ ಮಾತಿನ ಅರ್ಥ. ಇದು ರಾಜಕೀಯ ತಂತ್ರಗಾರಿಕೆ ವ್ಯಾಪ್ತಿಗೆ ಬರುತ್ತದೋ ಅಥವಾ ಅಪವಿತ್ರ ಕಾರ್ಯದ ವ್ಯಾಪ್ತಿಗೆ ಬರುತ್ತದೋ ಆ ಮುಖಂಡರೇ ಹೇಳಬೇಕು!

ಕುಮಾರಸ್ವಾಮಿ ಅವರಿಗೆ ಈಗ ಎರಡು ರೀತಿಯ ಅಪಾಯವಿದೆ. ಒಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ಮುಖಂಡರು ನಿರಂತರ ಪ್ರಯತ್ನಶೀಲರಾಗುವುದು. ಮತ್ತೊಂದು ಇದೇ ಕಾರ್ಯವನ್ನು ಮತ್ತೊಂದು ಸ್ವರೂಪದಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿರುವ ಕಾಂಗ್ರೆಸ್ ಮುಖಂಡರು ಮಾಡುವ ಸಾಧ್ಯತೆಗಳಿರುವುದು. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಹೇಗೆ ಅವರ ಪಕ್ಷದಲ್ಲೇ ಅನೇಕ ಮುಖಂಡರಿಗೆ ಹೇಗೆ ಇಷ್ಟವಿರಲಿಲ್ಲವೋ ಅದೇ ರೀತಿ ತಮ್ಮ ರಾಜಕೀಯ ಕಡುವೈರಿಯಾಗಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಿಸಿಕೊಳ್ಳಲು ಸಾಧ್ಯವಿಲ್ಲದಿರುವುದು. ಬಿಜೆಪಿಯನ್ನು ಕಟ್ಟಿಹಾಕಬೇಕೆಂಬ ‘ಹೈಕಮಾಂಡ್ ಹುಕುಂ’ ಕಾರಣಕ್ಕೆ ಸಿದ್ದರಾಮಯ್ಯನವರು ಇದನ್ನು ಒಪ್ಪಿಕೊಂಡಿದ್ದಾರೆಯೇ ಹೊರತು ಅಂತರಂಗದಲ್ಲಿ ಖಂಡಿತವಾಗಿಯೂ ಅಲ್ಲ. ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಅತೀವ ಬಯಕೆಯನ್ನು ಬಹಿರಂಗವಾಗಿಯೇ ಹೇಳಿಕೊಂಡು ತಿರುಗಿದ್ದ ಅವರು ಕಾಂಗ್ರೆಸ್‌ನಲ್ಲಿ ಬೇರೆ ಯಾರಾದರೂ ಸಿಎಂ ಆಗಿದ್ದರೂ ಒಪ್ಪಿಕೊಳ್ಳುತ್ತಿದ್ದರೇನೋ. ಆದರೆ ಕುಮಾರಸ್ವಾಮಿ ಸಿಎಂ ಆಗುತ್ತಿರುವುದು ಅವರನ್ನು ಲಾವಾರಸದಂತೆ ಸುಡುತ್ತಿದೆ. ಅವರೆಷ್ಟು ದಿನ ಈ ಬೇಗೆಯನ್ನು ಸಹಿಸಿಕೊಳ್ಳುತ್ತಾರೆ, ಅವರ ಬೇಗೆಯನ್ನು ತಣಿಸಲು ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು ಹೇಗೆ ಪ್ರಯತ್ನಿಸುತ್ತಾರೆ ಎಂಬುದರ ಮೇಲೆ ಈ ಮೈತ್ರಿ ಸರಕಾರದ ಭವಿಷ್ಯ ನಿಂತಿದೆ.

ಲಗೋರಿ : ಭೂತಕಾಲಕ್ಕೆ ಕನ್ನಡಿ ಹಿಡಿದ ಮಾತ್ರಕ್ಕೆ ಭವಿಷ್ಯ ನೆಟ್ಟಗಾಗುವುದಿಲ್ಲ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply