ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಸಂಪುಟವೆಂಬ ಮೊದಲ ಅಗ್ನಿ ಪರೀಕ್ಷೆ

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್-ಕಾಂಗ್ರೆಸ್ ಸರಕಾರ ರಚಚನೆಯಾಗುವ ಮುನ್ನವೇ ಸಂಪುಟ ರಚನೆ ಎಂಬ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಹುಮತ ಸಾಬೀತು ಮಾಡಿದ ನಂತರ ಈ ಮೈತ್ರಿ ಸರಕಾರ ಅಧಿಕಾರಕ್ಕೆ ಬರುತ್ತದೆ. ಈ ಪ್ರಕ್ರಿಯೆಗಳು ಬಾಕಿ ಇರುವಾಗಲೇ ಉಭಯ ಪಕ್ಷಗಳ ಸಚಿವ ಸ್ಥಾನ ಆಕಾಂಕ್ಷಿಗಳು ಜಾತಿ, ವಲಯವಾರು ಆಧಾರದ ಮೇಲೆ ತಮಗೆ ಇಂತಹುದೇ ಸಚಿವ ಸ್ಥಾನ ಬೇಕು ಎಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.

ಇದೇ ವಿಚಾರವಾಗಿ ಚರ್ಚೆ ನಡೆಸಲು ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸೋಮವಾರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಸೋನಿಯಾ ಗಾಂಧಿ ಹಾಗೂ ಕುಮಾರಸ್ವಾಮಿ ಜತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಹ ಇದ್ದರು. ರಾಜ್ಯ ಮೈತ್ರಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡದಿರಲು ನಿರ್ಧರಿಸಿರುವ ಸೋನಿಯಾ ಹಾಗೂ ರಾಹುಲ್ ಕಾಂಗ್ರೆಸಿನ ಯಾವ ಶಾಸಕರಿಗೆ ಸಚಿವ ಸ್ಥಾನ, ಯಾರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಿರ್ಧರಿಸುವ ಜವಾಬ್ದಾರಿಯನ್ನು ವೇಣುಗೋಪಾಲ್ ಅವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಜತೆ ಸಚಿವ ಸಂಪುಟದ ಜತೆಗೆ ಚರ್ಚೆಯಾಗುತ್ತಿದ್ದರೆ, ಇತ್ತ ರಾಜ್ಯ ನಾಯಕರಿಂದ ಎಲ್ಲ ರೀತಿಯಲಾಭಿಗಳು ಆರಂಭವಾಗಿವೆ.ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ನಂತರ ನಾಲ್ಕೈದು ಸ್ಥಾನಗಳನ್ನು ಬಿಟ್ಟು ಇನ್ನೆಲ್ಲ ಸಚಿವರ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆ ಸಮನ್ವಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದರ ಬೆನ್ನಲ್ಲೆ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಭೇಟಿ ನೀಡಿರುವ ಹಿರಿಯ ಶಾಸಕರು, ತಮಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದಾರೆ. ದೇವೇಗೌಡರ ಮನೆಗೆ ರೋಷನ್ ಬೇಗ್, ಪಿ.ಜಿ.ಆರ್ ಸಿಂಧ್ಯಾ, ಶರವಣ ಭೇಟಿ ಮಾಡಿ ಸಚಿವ ಸ್ಥಾನದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದಂತೆ ಸಚಿವ ಸ್ಥಾನಕ್ಕೆ ನಡೆಯುತ್ತಿರುವ ಲಾಭಿಗಳು ಹೀಗಿವೆ…

  • ಕಾಂಗ್ರೆಸ್‌ನ ಅನೇಕ ಹಿರಿಯ ಮುಖಂಡರು ತಮ್ಮ ಮಕ್ಕಳನ್ನು ಶಾಸಕರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಈಗ ಮುಂದಿನ ಹಂತವಾಗಿ ಸಚಿವ ಸ್ಥಾನ ಪಡೆಯಲು ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಪ್ರಮುಖವಾಗಿ ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಮಗ ಪ್ರಿಯಾಂಕ ಖರ್ಗೆ ಅವರಿಗೆ, ಮಾಜಿ ಕೇಂದ್ರ ಸಚಿವ ಎಚ್.ಮುನಿಯಪ್ಪ ತಮ್ಮ ಪುತ್ರಿ ರೂಪಾ ಶಶಿಧರ್‌ಗೆ ಕೊಡಿಸಲು ಹಾಗೂ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಾಧ್ಯವಾಗದಿದ್ದರೂ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರಗೆ ಸಚಿವ ಸ್ಥಾನ ಕೊಡಿಸುವ ಹೋರಾಡುತ್ತಿದ್ದಾರೆ.
  • ವಿಧಾನಸಭೆಯ ಕಲಾಪವನ್ನು ಹಿಡಿದಿಟ್ಟುಕೊಳ್ಳಲು ಸಭಾಧ್ಯಕ್ಷ ಸ್ಥಾನ ಪ್ರಮುಖವಾದ್ದದು ಎನ್ನುವುದನ್ನು ಅರಿತಿರುವ ಜೆಡಿಎಸ್-ಕಾಂಗ್ರೆಸ್‌ನ ನಾಯಕರು, ಸ್ಪೀಕರ್ ಸ್ಥಾನ ತಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು ಸಭಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷದ ಎ.ಟಿ ರಾಮಸ್ವಾಮಿ ಅವರಿಗೆ ನೀಡಬೇಕೆಂದು ಲಾಬಿ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಹಿರಿಯ ನಾಯಕ ಹಾಗೂ ಈ ಹಿಂದೆ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅನುಭವವಿರುವ ರಮೇಶ್ ಕುಮಾರ್ ಅವರಿಗೆ ನೀಡಬೇಕೆಂದು ಪಟ್ಟು ಹಿಡಿದ್ದಾರೆ.
  • ಮೂರು ಬಾರಿ ಶಾಸಕನಾಗಿರುವುದರಿಂದ ನಾನು ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಸಚಿವ ಸ್ಥಾನ ದೊರೆಯುವ ವಿಶ್ವಾಸವಿದೆ. ವೀರಶೈವ ಲಿಂಗಾಯತರಿಗೆ ಉಪಮುಖ್ಯಮಂತ್ರಿ ಸ್ಥಾಾನ ನೀಡುವುದರಲ್ಲಿ ತಪ್ಪೇನಿದೆ ಎಂದು ಶಾಸಕ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
  • ಉಪಮುಖ್ಯಮಂತ್ರಿ ಸ್ಥಾನವನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಬೇಕೆನ್ನುವ ಒತ್ತಡ ಹೆಚ್ಚಾಗುತ್ತಿದ್ದಂತೆ, ಲಿಂಗಾಯತ ಸಮುದಾಯದ ನಾಯಕರಾಗಿರುವ ಮಾಜಿ ಸಚಿವ ಎಂ.ಬಿ ಪಾಟೀಲರಿಗೆ ನೀಡಬೇಕೆನ್ನುವ ಚರ್ಚೆಗಳು ಆರಂಭಗೊಂಡಿದೆ. ಎಂ.ಬಿ ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಂಘಟನೆ ಮತ್ತಷ್ಟು ಉತ್ತಮವಾಗುವ ಜತೆ, ಲಿಂಗಾಯತ ಸಮುದಾಯ ಮತದಾರರು ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆಯಿದೆ ಎಂಬ ವಾದಗಳು ಮಂಡನೆಯಾಗುತ್ತಿವೆ.
  • ಜೆಡಿಎಸ್‌ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು 20 ಸ್ಥಾನದಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ, ಕೇವಲ ಒಂದು ಸ್ಥಾನದಲ್ಲಿ ಗೆಲುವುದಕ್ಕೆ ಯಶಸ್ವಿಯಾಗಿದ್ದು, ಗೆದ್ದ ಅಭ್ಯರ್ಥಿಗೆ ಸಚಿವ ಸ್ಥಾನ ನೀಡಲು ಮಾಯಾವತಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಲು ಮಾಯಾವತಿ ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ, ಈ ಬೇಡಿಕೆಯನ್ನು ಇಟ್ಟಿದ್ದಾರೆ.

Leave a Reply