ಅಮಿತ್ ಶಾ ಪ್ರಶ್ನೆಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ

ಡಿಜಿಟಲ್ ಕನ್ನಡ ಟೀಮ್:

‘ರಾಜ್ಯದಲ್ಲಿ ಜಾತ್ಯತೀತ ಸರಕಾರವೊಂದನ್ನು ರಚಿಸಿರುವುದಕ್ಕೆ ಹಾಗೂ ಧರ್ಮದ ಆಧಾರದಲ್ಲಿ ಜನರು, ಸಮುದಾಯಗಳನ್ನು ಒಡೆದು ಆಳುವ ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ…’ ಇದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರಶ್ನೆಗೆ ಕೊಟ್ಟಿರುವ ಉತ್ತರ.

ಬಿಎಸ್ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ರಾಜಿನಾಮೆ ನೀಡಿದ ನಂತರ ಮೊದಲ ಬಾರಿಗೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ಕರ್ನಾಟಕದ ಮೈತ್ರಿ ಕೂಟವನ್ನು ಅಪವಿತ್ರ ಮೈತ್ರಿ ಎಂದು ಟೀಕಿಸಿ, ಮೈತ್ರಿ ಕೂಟ ಪಕ್ಷಗಳು ಏತಕ್ಕಾಗಿ ಸಂಭ್ರಮಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದರು. ಅಮಿತ್ ಶಾ ಅವರ ಈ ಪ್ರಶ್ನೆಗೆ ಈಗ ಕುಮಾರಸ್ವಾಮಿ ಖಾರವಾಗಿ ಉತ್ತರಿಸಿದ್ದು ಹೀಗೆ…

‘ಚುನಾವಣೆ ಫಲಿತಾಂಶ ಬಂದು ಒಂದು ವಾರ ಕಳೆದ ಬಳಿಕ ಅಮಿತ್ ಶಾ ದಿಢೀರ್ ಪ್ರತ್ಯಕ್ಷರಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಪವಿತ್ರ ಎಂದು ಆಪಾದಿಸಿದ್ದಾರೆ. ಹಾಗಾದರೆ ಪವಿತ್ರವಾದ ಕಾರ್ಯ ಯಾವುದು? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು ಪವಿತ್ರವಾದ ಕಾರ್ಯವೇ? ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಆ ಕಾರಣಕ್ಕಾಗಿಯೇ ಜಾತ್ಯತೀತ ತತ್ವದ ಅಡಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ. ನಮ್ಮ ಮೈತ್ರಿಗೆ ಒಂದು ನೆಲೆ ಇದೆ. ಹಿತ ಕಾಯುವ, ಎಲ್ಲರನ್ನೂ ಒಳಗೊಂಡಂತೆ ಪ್ರಗತಿ ಕಡೆಗೆ ಹೆಜ್ಜೆ ಹಾಕುವುದು ನಮ್ಮ ಈ ಮೈತ್ರಿ ಕೂಟದ ಮೂಲ ನೆಲೆ. ಅದನ್ನು ಅಪವಿತ್ರ ಮೈತ್ರಿ ಎನ್ನುತ್ತಿರುವ ನಿಮ್ಮ ಅಭಿಪ್ರಾಯ ಅಪವಿತ್ರವಾದದ್ದು. ಚುನಾವಣೆ ಮುಗಿದಾಗಿನಿಂದಲೂ ನಮ್ಮದು ಏಕೈಕ ದೊಡ್ಡ ಪಕ್ಷ, ನಾವೇ ಸರಕಾರ ಮಾಡಬೇಕಿತ್ತು ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ಅಡಿಯಲ್ಲಿ ಬಹುಮತ ಇರುವವರು ಸರಕಾರ ರಚಿಸಬೇಕೆ ವಿನಃ ಏಕೈಕ ದೊಡ್ಡ ಪಕ್ಷವಲ್ಲ. ಜೆಡಿಎಸ್-ಕಾಂಗ್ರೆಸ್ ಕೂಟ 2.25 ಕೋಟಿ ಮತ ಪಡೆದಿದೆ. ಬಿಜೆಪಿ ಪಡೆದಿರುವುದು 1.31 ಕೋಟಿ ಮತ. ಯಾರಿಗೆ ಬಹುಮತ ಇದೆ ಎಂದು ಬಿಜೆಪಿ ಅರಿತುಕೊಳ್ಳಲಿ.’

Leave a Reply