ಅಧಿಕಾರ ಅನ್ನೋದು ಕುಮಾರಸ್ವಾಮಿ ಪಾಲಿಗೆ ‘ನಿತ್ಯಖಾರ’!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕಡಿಮೆ ಸ್ಥಾನಗಳಲ್ಲಿ ಗೆದ್ದಿದ್ದರೂ ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಚುನಾವಣೆಗೂ ಮುನ್ನ ನಮಗೂ ಒಂದು ಅವಕಾಶ ಕೊಡಿ ಎಂದು ರಾಜ್ಯದ ಜನರಲ್ಲಿ ಕೋರಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ ಬಹುಮತ ಬಾರದಿದ್ದರೂ ಕಾಂಗ್ರೆಸ್ ಬೆಂಬಲದಿಂದ ಮತ್ತೆ ಮುಖ್ಯಮಂತ್ರಿ ಆಗುವ ಭಾಗ್ಯ ಪಡೆದಿದ್ದಾರೆ. ಆದರೆ ಮುಖ್ಯಮಂತ್ರಿ ಆಗಿ ಕುಮಾರಸ್ವಾಮಿ ಸಂತೋಷ ಪಡುವ ದಿನಗಳಿಗಿಂತ ಸಂಕಷ್ಟದ ದಿನಗಳೇ ಹೆಚ್ಚಾದರೂ ಅಚ್ಚರಿಯಿಲ್ಲ. ಈಗಾಗಲೇ ಸಚಿವ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಯಾರಿಗೆಲ್ಲಾ ಸಚಿವ ಪಟ್ಟ ಸಿಗುವುದಿಲ್ಲ ಅವರು ಮುನಿಸು ಪ್ರದರ್ಶನ ಆಥವಾ ನಿಷ್ಠೆ ಬದಲಾವಣೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ.

ಬೇಷರತ್ ಬೆಂಬಲ ಎಂದಿದ್ದ ಕಾಂಗ್ರೆಸ್ ಸರ್ಕಾರ ಪಕ್ಕಾ ಆಗ್ತಿದ್ದ ಹಾಗೆ ಚೌಕಾಸಿಗೆ ಇಳಿದಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಆಧಾರದಲ್ಲಿ ನಮಗೆ ಇಂತಿಷ್ಟು ಸಚಿವ ಸ್ಥಾನ ಕೊಡಬೇಕು ಎನ್ನುತ್ತಿದೆ. ಜೊತೆಗೆ ಸ್ಪೀಕರ್ ಸ್ಥಾನ ಜೊತೆಗೆ ಎರಡು ಡಿಸಿಎಂ ಪಟ್ಟ ಕೊಡುವ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಇವೆಲ್ಲವನ್ನು ಸರಿದೂಗಿಸಿಕೊಂಡು ಸರ್ಕಾರ ನಡೆಸುವ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ. ಇದರ ಜೊತೆಗೆ‌ ಈಗಾಗಲೇ ಚುನಾವಣೆಯಲ್ಲಿ‌ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕಾದ ಹೊಣೆಗಾರಿಕೆಯನ್ನು ಕುಮಾರಸ್ವಾಮಿ ಹೊಂದಿದ್ದಾರೆ. ಒಂದು ವೇಳೆ ಜೆಡಿಎಸ್ ಪಕ್ಷ ನೀಡಿದ್ದ ಪ್ರಣಾಳಿಕೆಯ ಅಂಶಗಳನ್ನು ಜಾರಿ ಮಾಡಲು ಹೊರಟರೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯ ಅಂಶಗಳನ್ನು ಜಾರಿ‌ ಮಾಡುವಂತೆ ಆಗ್ರಹ ಮಾಡಬಹುದು ಅನ್ನೋ ಆತಂಕವೂ ಇದೆ.

ಪ್ರಮುಖವಾಗಿ ಸಾಲ ಮನ್ನಾ, ವೃದ್ಧರ ಮಾಸಾಶನ ಏರಿಕೆ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಉಪಕರಣಗಳ ಮೇಲೆ ರಿಯಾಯಿತಿ, ಆಶಾ ಕಾರ್ಯಕರ್ತೆಯರ ಧನ ಸಹಾಯ ಹೆಚ್ಚಳ ಸೇರಿದಂತೆ ಹಲವಾರು ಭರವಸೆಗಳನ್ನು ಕುಮಾರಸ್ವಾಮಿ ಜಾರಿಗೆ ತರಲೇ ಬೇಕಿದೆ. ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂದು ಹೇಳಿದ್ರು. ಅಂದರೆ ಜೆಡಿಎಸ್ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದರೆ ಅನ್ನೋ ಅರ್ಥವನ್ನು ಕೊಟ್ಟರೂ ಈಗ ಅದು ಅಪ್ರಸ್ತುತ ಅಷ್ಟೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದಿದ್ದು ಆಯ್ತು, ಇದೀಗ ಕೊಟ್ಟ ಭರವಸೆಗಳನ್ನು ಈಡೇರಿಸ್ತಾರಾ ನೋಡ್ಬೇಕು ಅನ್ನೋ ಮಾತುಗಳು ಈಗಾಗಲೇ ಜನರ ಬಾಯಲ್ಲಿ ಹರಿದಾಡ್ತಿವೆ. ಒಂದು ವೇಳೆ ನಮಗೆ ಜನರು ಸಂಪೂರ್ಣ ಬಹುಮತ ಕೊಟ್ಟು ಅಧಿಕಾರ ಕೊಡಲಿಲ್ಲ ಅನ್ನೋ ಕಾರಣಕ್ಕೆ ಹೇಳಿದ್ದ ಭರವಸೆ ಈಡೇರಿಸಲು ಮುಂದಾಗದಿದ್ರೆ ಮತ್ತೊಮ್ಮೆ ಮಾತು ತಪ್ಪಿದ ಕುಮಾರ ಅನ್ನೋ ಹಣೆಪಟ್ಟಿ ಹೊತ್ತುಕೊಳ್ಳೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆರ್ಥಿಕ ಮೂಲವಾಗಿ ಯಾವುದನ್ನು ಹುಡುಕಿಕೊಳ್ತಾರೋ ಅದು ಬೇರೆ ವಿಚಾರ.. ಆದ್ರೆ ಕುಮಾರಸ್ವಾಮಿ ಹೇಳಿದ ಮಾತನ್ನು ಉಳಿಸಿಕೊಳ್ಳಲೇ ಬೇಕಾದ ಒತ್ತಡಕ್ಕೆ ಸಿಲುಕಿರೋದು ಮಾತ್ರ ಸುಳ್ಳಲ್ಲ..

Leave a Reply