ಕುಮಾರಸ್ವಾಮಿಗೆ ಕೈಕೊಟ್ಟೆ ಎಂಬ ಡಿಕೆಶಿ‌ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್:

ಹೆಚ್.ಡಿ ಕುಮಾರಸ್ವಾಮಿ ಇಂದು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡ್ತಿದ್ದಾರೆ. ಈ ನಡುವೆ ಡಿ.ಕೆ ಶಿವಕುಮಾರ್ ಕುಮಾರಸ್ವಾಮಿಗೆ ಕೈಕೊಟ್ಟಿದ್ದೇನೆ ಎನ್ನುವ ಹೇಳಿಕೆ ನೀಡಿದ್ದಾರೆ. ಮೇ 15 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ, ನಾವು ಬೇಷರತ್ ಬೆಂಬಲ ನೀಡ್ತೇವೆ ಅನ್ನೋದು ಕಾಂಗ್ರೆಸ್ ಮಾತಾಗಿತ್ತು. ಆ ಮಾತಿನಂತೆ ಬಿ.ಎಸ್ ಯಡಿಯೂರಪ್ಪ ಬಹುಮತವಿಲ್ಲದೆ ಮುಖ್ಯಮಂತ್ರಿ ಆದರೂ ವಿಶ್ವಾಸ ಮತ ಗಳಿಸಲಾಗದೆ ಸದನದಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿ ಬಂದಿದ್ರು. ಈ ವೇಳೆ ಸದನದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇಬ್ಬರೂ ಕೈ ಕುಲುಕಿ, ತಮ್ಮ ಒಗ್ಗಟ್ಟಿಗೆ ಸಂದ ಜಯ ಎನ್ನುವಂತೆ ಮಾಧ್ಯಮಗಳ ಕ್ಯಾಮೆರಾಗಳಿಗೆ ಪೋಸ್ ನೀಡಿದ್ರು. ಈ ಮಾತಿಗೆ ಹಾಗೆ ಹೇಳಿದ್ರೋ ಅಥವಾ ಇನ್ನೊಂದು ಅರ್ಥದಲ್ಲಿ ಹೇಳಿದ್ರೋ ಅನ್ನೋ ಗುಮಾನಿ ಶುರುವಾಗಿದೆ.

ನಾವು ಕೈ ಕೊಟ್ಟಿದ್ದೇವೆ ಅಂದ್ರೆ ಕಾಂಗ್ರೆಸ್ ಪಕ್ಷದ ಚಿನ್ಹೆ ಹಸ್ತ ಹಾಗಾಗಿ ನಮ್ಮ ಹಸ್ತವನ್ನೇ ಕುಮಾರಸ್ವಾಮಿ ಕೈಗೆ ಕೊಟ್ಟಿದ್ದೇವೆ. ಅದನ್ನು ಈಗ ಕುಮಾರಸ್ವಾಮಿ ಅವರೇ ಕಾಪಾಡಬೇಕು ಅನ್ನೋ ಅರ್ಥದಲ್ಲಿ ಹೇಳಿರಲೂ ಬಹುದು. ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ ನಾನೂ ಇಲ್ಲೀವರೆಗೂ ಕುಮಾರಸ್ವಾಮಿ ಅವರು ಸಿಎಂ ಆಗಲು ಕೈ ಜೋಡಿಸಿದ್ದೇನೆ. ಆದರೆ ನಮ್ಮ ಪಕ್ಷದಲ್ಲಿ ಅಂದರೆ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಡಿಸಿಎಂ ಸ್ಥಾನ ಕೊಡುವ ಲಕ್ಷಣ ಕಾಣ್ತಿಲ್ಲ. ಬಿಜೆಪಿ ನಾಯಕರ ಪ್ರತಿರೋಧದ ನಡುವೆಯೂ ನಾನು ಕಾಂಗ್ರೆಸ್ ಪಕ್ಷದ ಶಾಸಕರ ಒಗ್ಗಟ್ಟು ಮುರಿಯದಂತೆ ಕಾಪಾಡಿದ್ದೇನೆ. ಇದೀಗ ಸೂಕ್ತ ಸ್ಥಾನಮಾನ ಸಿಗುವಂತೆ ಕುಮಾರಸ್ವಾಮಿ ನನಗೆ ಬೆಂಬಲ ನೀಡಬೇಕು ಅನ್ನೋ ಅರ್ಥವೂ ಇದರಲ್ಲಿ ಅಡಗಿದೆ.

ಇವತ್ತಿನ ಪ್ರಮಾಣ ವಚನ ಕಾರ್ಯಕ್ರಮದಲ್ಲೇ ನಾನು ಡಿಸಿಎಂ ಆಗಬೇಕು ಎಂದು ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ನಿನ್ನೆ ರಾತ್ರಿ ವೇಣುಗೋಪಾಲ್ ಅವರು ಪರಮೇಶ್ವರ್ ಹೆಸರು ಘೋಷಣೆ ಬಳಿಕ ರೆಸಾರ್ಟ್‌ನಿಂದ ಏಕಾಏಕಿ ಖಾಲಿ ಮಾಡಿದ್ದ ಡಿಕೆ ಬ್ರದರ್ಸ್ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ಮುನಿಸು ಪ್ರದರ್ಶನ ಮಾಡಿದ್ದು, ಸರ್ಕಾರ ರಚನೆ ಅತಂತ್ರ ಸ್ಥಿತಿಯತ್ತ ಸಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಹೀಗೆ ಹೇಳಿದ್ದಾರೆ. ನಾನು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಹೆಚ್‌ಡಿಕೆ ಅವರಿಗೆ ಕೈ ಕೊಟ್ಟಿದ್ದೇನೆ. ಇದೀಗ ಕುಮಾರಸ್ವಾಮಿ ಆ ಕೈ ಬಗ್ಗೆ ನೋಡಿಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮೊದಲೆರಡು ಅಂಶಗಳನ್ನು ಆಧರಿಸಿ ಹೇಳಿದ ಮಾತಾದರೆ, ಡಿಕೆಶಿ ಮಾತಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಒಂದು ವೇಳೆ ನಾನು ಕುಮಾರಸ್ವಾಮಿ ಅವರಿಗೆ ಕೈಕೊಟ್ಟೆ ಎಂದು 10 ರಿಂದ 15 ಶಾಸಕರನ್ನು ಕರೆದುಕೊಂಡು ಬೇರೆ ಪಕ್ಷ ಸ್ಥಾಪಿಸುವ ಅಥವಾ ಬೇರೊಂದು ಪಕ್ಷ ಸೇರುವ ನಿರ್ಧಾರ ಮಾಡಿದರೂ‌ ಅಚ್ಚರಿಯಿಲ್ಲ.

Leave a Reply