ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯ ಮೊದಲ ಅಸ್ತ್ರ ರೈತರ ಸಾಲ ಮನ್ನಾ!

  ಡಿಜಿಟಲ್ ಕನ್ನಡ ಟೀಮ್:

  ಸ್ವಂತ ಬಲದಿಂದ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಭರವಸೆ ಈಗ ವಿರೋಧ ಪಕ್ಷ ಬಿಜೆಪಿ ಪಾಲಿಗೆ ಮೊದಲ ಅಸ್ತ್ರವಾಗುವುದು ಬಹುತೇಕ ಖಚಿತವಾಗಿದೆ.

  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆ ವಿರೋಧಿಸಿ ರಾಜ್ಯ ಬಿಜೆಪಿ ಬುಧವಾರ ಮೌರ್ಯ ವೃತ್ತದ ಬಳಿ ಕರಾಳ ದಿನಾಚರಣೆ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಬಿಜೆಪಿ ನಾಯಕರು ಜೆಡಿಎಸ್-ಹಾಗೂ ಕಾಂಗ್ರೆಸ್ ಮೈತ್ರಿಯನ್ನು ಕಟುವಾಗಿ ಟೀಕಿಸಿದರು. ಅವರ ಟೀಕೆಯ ಜತೆಗೆ ನೂತನ ಸರಕಾರದ  ವಿರುದ್ಧ ಪ್ರಯೋಗವಾದ ಮೊದಲ ಅಸ್ತ್ರ ರೈತರ ಸಾಲ ಮನ್ನಾ.

  ಕುಮಾರಸ್ವಾಮಿ ಅವರು ತಾನು ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರು. ಈಗ ಅವರು ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ರೈತ ಸಮುದಾಯವನ್ನು ಬೀದಿಗಿಳಿಸಿ ಹೋರಾಟ ನಡೆಸಲಾಗುವುದು ಹಾಗೂ ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.

  ಈ ವೇಳೆ ನೂತನ ಸರ್ಕಾರದ ವಿರುದ್ಧ ಬಿಎಸ್ ವೈ ಕಿಡಿಕಾರಿದ್ದು ಹೀಗೆ…

  ‘ನಮ್ಮ ಪಕ್ಷಕ್ಕೆ ಸಂಪೂರ್ಣ ಜನಾದೇಶ ಇಲ್ಲ ಎಂಬುದನ್ನು ಸ್ವತಃ ಕುಮಾರಸ್ವಾಮಿಯವರೇ ಒಪ್ಪಿಕೊಂಡು, ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಅದರಲ್ಲೂ ಸಾಲಮನ್ನಾ ಮಾಡಲು ಆಗುವುದಿಲ್ಲ ಎಂಬ ಹೊಸ ರಾಗ ತೆಗೆದಿದ್ದಾರೆ. ಹಾಗಾದರೆ ಕುಮಾರಸ್ವಾಮಿ ಯಾವ ವಿಚಾರದಲ್ಲಿ ಬದ್ಧತೆ ಹೊಂದಿದ್ದಾರೆ. ಈಗ ರೈತರ ಮನ್ನಾ ಮಾಡದಿದ್ದರೆ ನಾವು ಪ್ರತಿಭಟನೆ ಮೂಲಕ ಅವರ ನಿಜ ಬಣ್ಣ ಬಯಲು ಮಾಡುತ್ತೇವೆ. ಬಹುಮತ ಸಿಗದಿದ್ದರೆ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ವಿರೋಧ ಪಕ್ಷದಲ್ಲಿ ಕೂರುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದರು. ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿದ್ದಾರೆ. ನಿಮ್ಮ ಮಾತಿನಂತೆ ವಿಧಾನಸಭೆ ವಿಸರ್ಜಿಸಿ ಬನ್ನಿ. ನನಗೆ ಸಿಎಂ ಸ್ಥಾನ ನೀಡಬಾರದೆಂದು ಇಂತಹ  ಕುತಂತ್ರ ನಡೆಸಿದ್ದೀರ. ಜೆಡಿಎಸ್‌ನೊಂದಿಗೆ ಮೈತ್ರಿಯಿಂದ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಏನು ಸಾಧನೆ ಮಾಡಿದ್ದಾರೆ ಎಂದು ಬೆಂಗಳೂರಿಗೆ ಬರುತ್ತಿದ್ದಾರೆ. ಪ್ರಧಾನಿ ಮೋದಿ ಕನಸಿನಂತೆ ಕರ್ನಾಟಕ ಇಂದು ಕಾಂಗ್ರೆಸ್ ಮುಕ್ತವಾಗಿದೆ. ಯಾರ ವಿಜಯೋತ್ಸವ ಆಚರಿಸಲು ಬರುತ್ತಿದ್ದಾರೋ ಅವರಿಗೇ ಗೊತ್ತಿಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹೈಕಮಾಂಡ್‌ಗೆ ಹಣ ನೀಡುತ್ತಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಆದ್ಯತೆ ನೀಡುತ್ತಿದ್ದರು. ಈಗ ಸರಕಾರ ರಚನೆ ವೇಳೆ ಸಿದ್ದರಾಮಯ್ಯಹಾಗೂ ಪರಮೇಶ್ವರ ಅವರನ್ನು ದೆಹಲಿಗೆ ಕರೆಯದೇ ಅವಮಾನ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಕುರುಬ ಸಮುದಾಯ ಉಪಯೋಗ ಮಾಡಿಕೊಳ್ಳದೇ ಇದ್ದಿದ್ದರೆ ಕಾಂಗ್ರೆಸ್ 50 ಸ್ಥಾನ ಗೆಲ್ಲುತ್ತಿರಲಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನವರು ಬೇರೆ ರಾಜ್ಯದ ಮುಖ್ಯಮಂತ್ರಿ ಗಳನ್ನು ಕರೆದಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಗುಂಪು ಕಟ್ಟಲು ಹೊರಟಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆದ್ದು,  ಮೋದಿ ಅವರಿಗೆ ಕೊಡುಗೆ ನೀಡುತ್ತೇವೆ. ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇನ್ನು ಹತ್ತು ಸ್ಥಾನ ಕೊಡಬೇಕಿತ್ತು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಯಾವ ದೇವರಿಗೆ ಹರಕೆ ಹೊತ್ತುಕೊಂಡರೂ ಇನ್ನು ಮೂರು ತಿಂಗಳಲ್ಲಿ ಮೈತ್ರಿ ಸರಕಾರಕ್ಕೆ ನಾಶವಾಗಲಿದೆ. ಈಗಾಗಲೇ ಡಿಸಿಎಂ ಮತ್ತು ಸಚಿವ ಸ್ಥಾನಕ್ಕೆ ಗುದ್ದಾಟ ನಡೆಯುತ್ತಿದೆ. ಸಚಿವ ಸಂಪುಟ ರಚನೆಯಾಗುವುದೇ ಅನುಮಾನವಾಗಿದೆ.’

  Leave a Reply