ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ ಪ್ರಮಾಣ, ತೃತೀಯ ರಂಗದ ಶಕ್ತಿ ಪ್ರದರ್ಶನ, ಆಗುತ್ತಂತೆ ಸಾಲ ಮನ್ನಾ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದ 25 ನೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ತೃತೀಯ ರಂಗ ಶಕ್ತಿ ಪ್ರದರ್ಶನಕ್ಕೂ ಈ ಸಂದರ್ಭ ವೇದಿಕೆಯಾಗಿದ್ದು ಒಂದು ವಿಶೇಷ.

 ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಅಖಿಲೇಶ್ ಯಾದವ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್ ಮತ್ತಿತರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ವರುಣ ಸಿಂಚನ, ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಕುಮಾರಸ್ವಾಮಿ ಕನ್ನಡಿಗರ ಹೆಸರಲ್ಲೂ, ಪರಮೇಶ್ವರ ದೇವರ ಹೆಸರಲ್ಲೂ ಪ್ರಮಾಣ ಸ್ವೀಕರಿಸಿದರು.
ಬಿಜೆಪಿ ಕರಾಳ ದಿನಾಚರಣೆ ನಡುವೆ ಪ್ರಮಾಣ ಸ್ವೀಕರಿಸಿದ ನಂತರ ಮಾತನಾಡಿದ ನೂತನ ಸಿಎಂ ಕುಮಾರಸ್ವಾಮಿ, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದುದು ನಿಜ. ಆದರೆ ಮೈತ್ರಿಕೂಟದ ಅಂಗಪಕ್ಷವಾಗ ಕಾಂಗ್ರೆಸ್ ಜತೆ ಈ ಬಗ್ಗೆ ಸಮಾಲೋಚನೆ ನಡೆಸಬೇಕಿದೆ. ಆ ಪಕ್ಷಕ್ಕೂ ಇದರ ಕ್ರೆಡಿಟ್ ಸಿಗುವಂತೆ ನೋಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಯೂ ಟರ್ನ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಸಾಲ ಮನ್ನಾ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದರು.
ಮೈತ್ರಿ ಸರಕಾರದ ರಚನೆಗೆ ಕಾರಣರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಅಸ್ಥಿರ ಸರಕಾರ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ದೃಢ ಸರಕಾರ ಎಂಬುದನ್ನು ಸಾಬೀತುಪಡಿಸುತ್ತೇನೆ. ಈ ಸರಕಾರದ ಬಗ್ಗೆ ಬಿಜೆಪಿಯವರು ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ. ಅವರಿಗೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದೂ ಹೇಳಿದರು.

Leave a Reply