ಕುಮಾರ ಪರ್ವದ ಮೊದಲ ಅಧ್ಯಾಯ ಆರಂಭ ಇಂದು!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಯಶಸ್ವಿಯಾದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಈಗ ತನ್ನ ಸರ್ಕಾರವನ್ನು ಸ್ಥಾಪಿಸುವ ತವಕದಲ್ಲಿದೆ. ಇಂದು ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದು, ಅದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಕುಮಾರ ಪರ್ವದ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಕುಮಾರಸ್ವಾಮಿ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಸಹ ಉಪಮಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಉಪಮುಖ್ಯಮಂತ್ರಿ ಪಟ್ಟ ತಮಗೂ ಬೇಕೆಂದು ಕಾಂಗ್ರೆಸ್ ಇತರೆ ನಾಯಕರು ದುಂಬಾಲು ಬಿದ್ದಿದ್ದು, ಲಾಭಿ ನಡೆಸುತ್ತಲೇ ಇದ್ದಾರೆ. ಲಿಂಗಾಯತ ಸಮುದಾಯದ ಹಾಗೂ ಸಿದ್ದರಾಮಯ್ಯ ಆಪ್ತ ಬಣದ ಎಂಬಿ ಪಾಟೀಲ್ ಅವರಿಗೆ ನೀಡಬೇಕೆಂದು ಒತ್ತಡ ಒಂದೆಡೆಯಾದರೆ, ಒಕ್ಕಲಿಗ ಸಮುದಾಯಕ್ಕೆ ಸೇರಿದ  ಡಿ.ಕೆ ಶಿವಕುಮಾರ್ ಅವರಿಗೆ ನೀಡಬೇಕೆಂದು ಕಾರ್ಯಕರ್ತರು ಹಾಗೂ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಇನ್ನು ಟ್ವಿಟರ್ ನಲ್ಲಿ #DKSDCM ಎಂಬ ಆಯಶ್ ಟ್ಯಾಗ್ ಟ್ರೆಂಡ್ ಕೂಡ ಆಗಿದೆ.

ಈ ಮಧ್ಯೆ ಬುಧವಾರ ಸಂಜೆ 4.30ಕ್ಕೆ ಕುಮಾರಸ್ವಾಮಿ ಮತ್ತು ಪರಮೇಶ್ವರ ಪ್ರಮಾಣ ವಚನ ಸ್ವೀಕರಿಸಲಿದ್ದು ಇದಕ್ಕೆ ಸಾಕ್ಷಿಯಾಗಲು ದಿಗ್ಗಜರ ದಂಡೇ ಹಾಜರಾಗಲಿದೆ. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್‌ಪಿ ನಾಯಕಿ ಮಾಯಾವತಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಂಧ್ರ ಪ್ರದೇಶ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಲಾಲು ಪ್ರಸಾದ್, ಪುತ್ರ ತೇಜಸ್ವಿ ಯಾದವ್, ನಟ ಕಮಲ ಹಾಸನ್, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ರಾಷ್ಟ್ರೀಯ ಲೋಕ್ ದಳ

ಮುಖ್ಯಸ್ಥ ಅಜಿತ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಅವರು  ಕುಮಾರ ಪರ್ವದ ಆರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಸರ್ಕಾರ ರಚಿಸುತ್ತಿದ್ದಂತೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ಪಕ್ಷದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪ್ರಮುಖವಾಗಿ ಎರಡು ಮೂರು ಬಾರಿ ಶಾಸಕರಾಗಿರುವ ಅನೇಕ ನಾಯಕರು, ತಮಗೆ ಸಚಿವ ಸ್ಥಾನ ಬೇಕೆನ್ನುವ ಒತ್ತಡ ಈಗಾಗಲೇ ಹೇರಿದ್ದಾರೆ. ಇದರೊಂದಿಗೆ ಇಬ್ಬರು ಪಕ್ಷೇತರ ಅಭ್ಯರ್ಥಿ ಹಾಗೂ ಬಿಎಸ್‌ಪಿಯಿಂದ ಚುನಾಯಿತರಾಗಿರುವ ಮಹೇಶ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕಿರುವುದರಿಂದ, ಉಭಯ ಪಕ್ಷದ ನಾಯಕರು ಯಾರನ್ನು ಕೈಬಿಡಬೇಕೆನ್ನುವ ಗೊಂದಲದಲ್ಲಿದ್ದಾರೆ. ಈಗಾಗಲೇ 12ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿ ಪರ ಕೆಲಸ ಮಾಡುವುದಾಗಿ ಘೋಷಿಸಿರುವುದು ನಾಯಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಇದರ ಜತೆಗೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದಾಜಿದ್ದಿ ಉಂಟಾಗಿದೆ.

ಇನ್ನು ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರಕ್ಕೆ ಹಾಜರಾಗದೇ ದೂರ ಉಲಿಯಲು ಬಿಜೆಪಿ ನಿರ್ಧರಿಸಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರ ಸ್ವೀಕರಿಸುತ್ತಿರುವ ಕಾರಣ ಜನಮತ ವಿರೋಧಿ ದಿನ ಆಚರಿಸಲು ಬಿಜೆಪಿ ತೀರ್ಮಾನಿಸಿದೆ. ಜನಾದೇಶದ ವಿರುದ್ಧವಾಗಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ. ಆದ್ದರಿಂದ ಮೇ 23ರಂದು ಬಿಜೆಪಿಯ ಯಾವ ಶಾಸಕರಾಗಲೀ, ಮುಖಂಡರಾಗಲಿ ಪ್ರಮಾಣ ವಚನ ಸಮಾರಂಭದಲ್ಲಿ  ಭಾಗವಹಿಸುತ್ತಿಲ್ಲ.

ಇನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಾಜಿ ಪ್ರಧಾನಿ ದೇವೇಗೌಡರು. ಅವರು ಸೂಪರ್ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೌಡರು, ‘ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ರಚನೆಯ ಬಗ್ಗೆ ಕೆಲವು ಊಹಪೋಹಾ ಸುದ್ದಿಗಳು ಹರಿದಾಡುತ್ತಿರುವುದನ್ನು ನಾನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಆದರೆ, ಸಮ್ಮಿಶ್ರ ಸರಕಾರದ ಯಾವುದೇ ಪ್ರಮುಖ ನಿರ್ಧಾರಗಳ ಬಗ್ಗೆಯಾಗಲಿ, ಮಂತ್ರಿ ಮಂಡಲ ರಚನೆ ಬಗ್ಗೆಯಾಗಲಿ, ಸಮನ್ವಯ ಸಮಿತಿ ರಚನೆ ಸಂಬಂಧವಾಗಲಿ ಅಥವಾ ಸರಕಾರದ ಆಡಳಿತ ವಿಚಾರದಲ್ಲಾಗಲಿ ನಾನು ಭಾಗಿ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply