ಕಾಂಗ್ರೆಸ್‌ಗೆ ಡಿಸಿಎಂ ಪಟ್ಟದ್ದೇ ತಲೆಬಿಸಿ!

ಡಿಜಿಟಲ್ ಕನ್ನಡ ಟೀಮ್:

ಒಕ್ಕಲಿಗ ಮುಖ್ಯಮಂತ್ರಿ ಆಗ್ತಿರೋದ್ರಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರನ್ನು ದಲಿತ ಕೋಟಾದಡಿ ಕಾಂಗ್ರೆಸ್ ಡಿಸಿಎಂ ಮಾಡುತ್ತಿದೆ. ಲಿಂಗಾಯತ ಸಮುದಾಯದ ಎಂ.ಬಿ ಪಾಟೀಲ್ ಅಥವಾ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಡಿಸಿಎಂ ಮಾಡುವ ಮೂಲಕ ಉತ್ತರ ಕರ್ನಾಟಕದ ಭಾಗಕ್ಕೆ ನ್ಯಾಯ ಒದಗಿಸುವಂತೆ ಒತ್ತಡ ಹೆಚ್ಚಿತ್ತು. ಆದ್ರೀಗ ಯಾವುದಕ್ಕೂ ಸೊಪ್ಪು ಹಾಕದ ಕಾಂಗ್ರೆಸ್ ಹೈಕಮಾಂಡ್ ಯಾವ ಒತ್ತಡಕ್ಕೂ‌ ಮಣಿಯದೆ ಕುಮಾರಸ್ವಾಮಿ ಜೊತೆ ಪರಮೇಶ್ವರ್ ಮಾತ್ರ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚನೆ ನೀಡಿ ಎಲ್ಲಾ ಒತ್ತಡ ತಂತ್ರಕ್ಕೂ ಫುಲ್ ಸ್ಟಾಪ್ ಹಾಕಿತ್ತು. ಇದೀಗ ಡಿಸಿಎಂ ಹುದ್ದೆ ಬೇಕೆಂದು ಡಿ.ಕೆ ಶಿವಕುಮಾರ್ ಬೇಡಿಕೆ ಶುರು ಮಾಡಿದ್ದು ಹೈಕಮಾಂಡ್ ಗಮನ ಸೆಳೆಯಲು ತಮ್ಮದೇ ತಂತ್ರಗಾರಿಕೆ ಪ್ರಯೋಗಿಸುತ್ತಿದ್ದಾರೆ.

ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಇಚ್ಛೆ ಎಐಸಿಸಿಗೆ ಇದೆ. ಆದ್ರೆ ಡಿ.ಕೆ ಶಿವಕುಮಾರ್ ಮಾತ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಹುದ್ದೆ ಕೊಟ್ಟರೆ ಮಾತ್ರ ನಿಭಾಯಿಸುವೆ, ಇಲ್ಲದಿದ್ರೆ ನನಗೆ ಯಾವುದೂ ಬೇಡ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಗೆಲ್ಲಲು ತಿಣುಕಾಡುವ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಒಳ್ಳೆ ಸ್ಥಾನಮಾನ ನೀಡ್ತೀರಿ, ಆದ್ರೆ ತನ್ನ ಕ್ಷೇತ್ರದ ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ಗೆಲ್ಲಿಸಿಕೊಂಡುವ ಬರುವ ನಾಯಕರನ್ನು ಕಡೆಗಣನೆ ಮಾಡ್ತೀರಿ ಎನ್ನುವ ಮೂಲಕ ಡಿಸಿಎಂ ಆಗ್ತಿರುವ ಪರಮೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಬಲ ವ್ಯಕ್ತಿಗೆ ಕೆಪಿಸಿಸಿ ಪಟ್ಟ ಕಟ್ಟಬೇಕೆಂಬುದು ಎಐಸಿಸಿ ನಿರ್ಧಾರವಾಗಿದ್ದು, ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆ ಶಕ್ತಿ ಹೊಂದಿರುವ ಡಿಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದೆ. ನಿನ್ನೆ ಬೆಂಗಳೂರಿಗೆ ಆಗಮಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಿಲ್ಟನ್ ರೆಸಾರ್ಟ್‌ ನಲ್ಲಿ ಶಾಸಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಡಿಸಿಎಂ ಸ್ಥಾನ ಸಿಗದೆ ಕೆಂಡಾಮಂಡಲವಾಗಿರುವ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ರಾಷ್ಟ್ರೀಯ ನಾಯಕರು ಸಮಾಧಾನ ಮಾಡಲು ಕಸರತ್ತು ನಡೆಸಿದ್ದರು. ಆದ್ರೆ ಕೆಪಿಸಿಸಿ ಆಧ್ಯಕ್ಷ ಹುದ್ದೆ ಜೊತೆಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಡಿ.ಕೆ ಶಿವಕುಮಾರ್ ತಮ್ಮ ಪಟ್ಟು ಬಿಡುತ್ತಿಲ್ಲ. ಡಿಕೆಶಿ ಒತ್ತಡಕ್ಕೆ ಹೈಕಮಾಂಡ್ ಮಣಿಯುತ್ತಾ ಅನ್ನೋದನ್ನ ಕಾದು ನೋಡಬೇಕು.

Leave a Reply