ಬಿಎಸ್ ವೈಗೆ ಶುಭಕೋರದ ಮೋದಿ ಎಚ್ಡಿಕೆಗೆ ಅಭಿನಂದನೆ ಸಲ್ಲಿಸಿದರ ಹಿಂದಿದೆಯೇ ರಾಜಕೀಯ ಲೆಕ್ಕಾಚಾರ?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡ್ತಿರೋದು, ಪಕ್ಕಾ ಲೆಕ್ಕಾಚಾರದ ಆಧಾರದ ಮೇಲೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಸಿಎಂ ಆಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಿಗೆ ಪ್ರಧಾನಿ ಮೋದಿ ಟ್ಬಿಟ್ಟರ್‌ನಲ್ಲಿ ಶುಭಾಶಯ ಕೋರಿದ್ರು.‌ ಅಷ್ಟು ಸಾಲದು ಎಂಬಂತೆ ದೂರವಾಣಿ ಕರೆ ಮಾಡಿಯೂ ಶಭ ಕೋರಿದ್ದಾರೆ.

‘ಸಿಎಂ ಆಗಿ ಕುಮಾರಸ್ವಾಮಿ ಡಿಸಿಎಂ ಆಗಿ ಡಾ.ಜಿ ಪರಮೇಶ್ವರ್ ಅಧಿಕಾರ ಸ್ವೀಕರಿಸಿದ್ದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡಿ’ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಪ್ರಧಾನಿ ಫೋನ್ ಇಡ್ತಿದ್ದ ಹಾಗೆ ಶುಭಾಶಯಕ್ಕೆ‌ ಪ್ರತಿಯಾಗಿ ಟ್ವಿಟ್ಟರ್‌ನಲ್ಲಿ ಧನ್ಯವಾದ ಅರ್ಪಿಸಿರುವ ಸಿಎಂ ಕುಮಾರಸ್ವಾಮಿ, ‘ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ರಾಜ್ಯವನ್ನು ಮಾದರಿ ರಾಜ್ಯ ಮಾಡಲು ನಿಮ್ಮ ಸಹಕಾರ ಅತ್ಯಗತ್ಯ’ ಎಂದು ಟ್ವೀಟ್ ಮಾಡಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಅಗತ್ಯ. ಈ ನಿಟ್ಟಿನಲ್ಲಿ ಮೋದಿ ಹಾಗೂ ಕುಮಾರಸ್ವಾಮಿ ಅವರ ಈ ಸಂದೇಶ ಉತ್ತಮ ಬೆಳವಣಿಗೆ. ಆದರೆ ರಾಜಕೀಯ ದಲ್ಲಿ ಪ್ರತಿ ಹೆಜ್ಜೆಯ ಹಿಂದೆ ಲಾಭ ನಷ್ಟದ ಲೆಕ್ಕಾಚಾರ ಇದ್ದೇ ಇರುತ್ತದೆ. ಅದು ಕೆಲವೊಮ್ಮೆ ಬಹಿರಂಗವಾಗಿ ಕಂಡರೆ ಮತ್ತೆ ಕೆಲವೊಮ್ಮೆ ಗೊತ್ತಾಗುವುದಿಲ್ಲ.

ಈಗ ಮೋದಿ ಅವರ ಶುಭಾಶಯದ ಹಿಂದೆ ಏನಾದರೂ ಲೆಕ್ಕಾಚಾರ ಇದೆಯೇ ಎಂಬ ಅನುಮಾನ ಕಾಡುತ್ತಿದೆ. ಕಾರಣ, ತಮ್ಮದೇ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಮೇ 17ರಂದು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ರು. ಆಗ ಪ್ರಧಾನಿ ನರೇಂದ್ರ ಮೋದಿ ಯಾವುದೇ ಶುಭಾಶಯ ಕೋರಿರಲಿಲ್ಲ. ಯಡಿಯೂರಪ್ಪ ಅವರದು ಬಿದ್ದುಹೋಗುವ ಸರ್ಕಾರ ಎಂದು ಗೊತ್ತಿತ್ತೋ  ಅಥವಾ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಮೋದಿ ಅವರಿಗೆ ಇಷ್ಟ ಇರಲಿಲ್ಲವೋ.. ಒಟ್ಟಿನಲ್ಲಿ ಮೋದಿ ಯಡಿಯೂರಪ್ಪ ಅವರಿಗೆ ಶುಭ ಕೋರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಪ್ರಧಾನಿಯೇ ಹೇಳಬೇಕಿದೆ.

ಟ್ವಿಟ್ಟರ್‌ನಲ್ಲಿ ತುಂಬಾ ಕ್ರಿಯಾಶೀಲರಾಗಿರುವ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಮುಖ್ಯಮಂತ್ರಿ ಆದ ವೇಳೆ ಯಾಕೆ ಶುಭ ಹಾರೈಸಲಿಲ್ಲ ಅನ್ನೋದು ಬಿಜೆಪಿ ಕಾರ್ಯಕರ್ತರಿಗೆ ಪ್ರಶ್ನೆಯಾಗಿ ಕಾಡುತ್ತಿದೆ.

ಮೋದಿ ಜೊತೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರಿಗೆ ಶುಭ ಹಾರೈಸಿದ್ದಾರೆ. ನಮ್ಮ ನಾಯಕ ಪ್ರಮಾಣ ವಚನ ಸ್ವೀಕರಿಸಿದಾಗ ಶುಭ ಹಾರೈಸದವರು ಈಗ ಬೇರೆ ಪಕ್ಷದವರಿಗೆ ಅಭಿನಂದಿಸುತ್ತಿರುವುದೇಕೆ ಎಂದು ಬಿಜೆಪಿ ಕಾರ್ಯಕರ್ತರು ಯೋಚಿಸುತ್ತಿದ್ದಾರೆ. ಇತ್ತ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ಆಯಸ್ಸಿಲ್ಲ ಅನ್ನೋದು ಅವರದೇ ಪಕ್ಷದ ನಾಯಕರಿಗೆ ಗೊತ್ತಿತ್ತಿ, ಹಾಗಾಗಿ ವಿಶ್ ಮಾಡಿರಲಿಲ್ಲ ಅಂತಾ ಟ್ವೀಟ್ಟಿಗರು ಕಿಚಾಯಿಸಿದ್ದಾರೆ.

ಇನ್ನು ರಾಜಕೀಯ ಲೆಕ್ಕಾಚಾರದ ಬಗ್ಗೆ ನೋಡುವುದಾದರೆ, ಸಂಸತ್ ಚುನಾವಣೆ ತನಕ ಈ ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ ಬಿಜೆಪಿ ಮುಂದಾಗುವುದಿಲ್ಲ. ಅದಕ್ಕೆ ಕಾರಣ ಚುನಾವಣೆ ವೇಳೆ ಬಿಜೆಪಿಗೆ ಅಂಟಿಕೊಳ್ಳಬಹುದಾದ ಕಳಂಕ. ಒಂದು ವೇಳೆ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ರೆ ಬಿಜೆಪಿಗೆ ಸಂಕಷ್ಟ ಒದಗಿ ಬರಲಿದೆ. ಈ ವೇಳೆ ಕೇಂದ್ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಬಹುಮತ ಕೊರತೆ ಎದುರಾದರೆ ಕರ್ನಾಟಕದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಬೆಂಬಲ ಕೊಟ್ಟು, ಜೆಡಿಎಸ್ ಸಂಸದರ ಬೆಂಬಲವನ್ನು ಮೋದಿ ಪಡೆದುಕೊಳ್ಳಲು ಯೋಜನೆ ಸಿದ್ಧವಾಗ್ತಿದೆ ಎನ್ನಲಾಗಿದೆ. ರಾಜಕೀಯದಲ್ಲಿ ಯಾವುದೂ ಶಾಸ್ವತವಲ್ಲ.. ಯಾವುದೂ ಅಸಾಧ್ಯವಲ್ಲ ಎನ್ನುವ ಮಾತಿದೆ. ಆ ಮಾತಿನಂತೆ ಯಾವುದು ಬೇಕಿದ್ರು ಮುಂದಿನ ದಿನಮಾನಗಳಲ್ಲಿ ಘಟಿಸಬಹುದಾಗಿದ್ದು, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಅನ್ನೋ ಚರ್ಚೆಗಳೂ ಆರಂಭವಾಗಿದೆ.

Leave a Reply